Advertisement

ಎರಡನೇ ದಿನವೂ ಸಂಪೂರ್ಣ ಸ್ತಬ್ಧ

04:26 PM Apr 26, 2021 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಹೊರಸಿದ ವಾರಾಂತ್ಯ ಕರ್ಫ್ಯೂ ಎರಡನೇ ದಿನವಾದ ಭಾನುವಾರವೂ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಇಡೀ ದಿನ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ತುರ್ತು ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಪೆಟ್ರೊಲ್‌ ಬಂಕ್‌ಗಳು ಮಾತ್ರ ತೆರೆದಿದ್ದವು. ಆಟೋ, ಖಾಸಗಿ ಬಸ್‌ ಸಂಚಾರ ಸಹ ಸಂಪೂರ್ಣ ಬಂದ್‌ ಆಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ ಗಳು ಸೇವೆ ಸಿದ್ಧವಾಗಿದ್ದವು.

Advertisement

ಆದರೆ, ಸಂಚಾರಕ್ಕೆ ಪ್ರಯಾಣಿಕರೇ ಇರಲಿಲ್ಲ. ಬಸ್‌ ಸಂಚಾರ, ಕೃಷಿ ಪೂರಕ ಚಟುವಟಿಕೆ ಸೇರಿದಂತೆ ಕೆಲವು ಸೇವೆಗಳಿಗೆ ವಿನಾಯಿತಿ ಇದ್ದರೂ ಜನರು ಯಾರೂ ಮನೆಯಿಂದ ಹೊರಗೆ ಬರಲಿಲ್ಲ. ಕರ್ಫ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಜನರು ಮುಗಿಬಿದ್ದು ಹಾಲು, ತರಕಾರಿ, ಮೀನು, ಮಾಂಸ ಖರೀದಿಸಿದರು. ತರಕಾರಿ ಖರೀದಿಗಾಗಿ ಕೆ.ಆರ್‌. ಮಾರುಕಟ್ಟೆಯಲ್ಲಿ ಜನದಟ್ಟಣೆ ಏರ್ಪಟ್ಟಿತ್ತು. ಅದೇ ರೀತಿ ಮೀನು, ಮಾಂಸ ಮಾರಾಟ ಮಾರುಕಟ್ಟೆಯಲ್ಲಿಯೂ ಖರೀದಿಗೆ ಜನರು ಒಮ್ಮೇಲೆ ಬಂದಿದ್ದರಿಂದ ಜನದಟ್ಟಣೆ ಏರ್ಪಟ್ಟಿತು. ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿ, ಮೀನು-ಮಾಂಸ ಮಾರಾಟ ಅಂಗಡಿಗಳನ್ನು ಬಂದ್‌ ಮಾಡಿಸಿದರು. ಪೊಲೀಸರು ಸ್ಥಳದಿಂದ ಕಾಲ್ಕಿತ್ತ ಬಳಿಕ ಅಂಗಡಿಯವರು ಹಿಂಬಾಗಿಲಿನಿಂದ ಒಂದಿಷ್ಟು ಹೊತ್ತು ಮಾಂಸ, ಮೀನು ಮಾರಾಟ ಮಾಡಿದರಾದರೂ 11 ಗಂಟೆ ಹೊತ್ತಿಗೆ ಜನರ ಓಡಾಟವನ್ನು ಸಂಪೂರ್ಣ ತಡೆದಿದ್ದರಿಂದ ಅಂಗಡಿಕಾರರು ಸಹ ತಮ್ಮ ವ್ಯಾಪಾರ ನಿಲ್ಲಿಸಿದರು.

ಅದೇ ರೀತಿ ಕೆ.ಆರ್‌. ಮಾರುಕಟ್ಟೆಯಲ್ಲಿ ನಡೆದ ಬೆಣ್ಣೆ ಸಂತೆಯಲ್ಲಿಯೂ ಜನರು ಒಮ್ಮೆಲೇ ಸೇರಿ ಖರೀದಿಯಲ್ಲಿ ತೊಡಗಿದರು. ಕೊನೆಗೆ ಪೊಲೀಸರು ಬೆಣ್ಣೆ ವ್ಯಾಪಾರ ಬಂದ್‌ ಮಾಡಿಸಿದರು.

ಎಲ್ಲೆಡೆ ಭಣ ಭಣ: ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಅವಧಿ ಮುಗಿಯುತ್ತಿದ್ದಂತೆ ಬೆಳಿಗ್ಗೆ 10:30 ಗಂಟೆ ಬಳಿಕ ಪೊಲೀಸರು ರಸ್ತೆಯಲ್ಲಿ ಸಂಚರಿಸುವವರನ್ನು ತಡೆದು ವಿಚಾರಣೆ ಮಾಡಲು ಶುರು ಮಾಡಿದರು. ಅಪರಾಹ್ನ 11ಗಂಟೆ ಹೊತ್ತಿಗೆ ರಸ್ತೆಯಲ್ಲಿ ಜನ ಸಂಚಾರ, ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಆಯಿತು. ಮಹಾನಗರ ವ್ಯಾಪ್ತಿಯ ಜನದಟ್ಟಣೆಯ ಪ್ರದೇಶಗಳಾದ ಬಸ್‌ ನಿಲ್ದಾಣ, ರೇಲ್ವೆ ನಿಲ್ದಾಣ, ಮಂಡಿಪೇಟೆ, ಚೌಕಿಪೇಟೆ, ಕಾಯಿಪೇಟೆ, ಚಾಮರಾಜಪೇಟೆ, ನರಸಿಂಹರಾಜ ರಸ್ತೆ, ಕಾಳಿಕಾಂಬಾದೇವಿ ರಸ್ತೆ, ವಿಜಯಲಕ್ಷ್ಮೀ ರಸ್ತೆ ಸೇರಿದಂತೆ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರದೇಶಗಳು, ರಸ್ತೆಗಳು ಜನ, ವಾಹನ ಸಂಚಾರವಿಲ್ಲದೆ ಬಿಕೋ ಎಂದವು. ಸಾಮಾನ್ಯವಾಗಿ ಭಾನುವಾರ ಬಹುತೇಕರಿಗೆ ವಾರದ ರಜಾ ದಿನವಾಗಿದ್ದರಿಂದ ಇಡೀ ದಿನ ಮನೆಯಲ್ಲಿಯೇ ಇರುವ ಮೂಲಕ ಕರ್ಫ್ಯೂ ಯಶಸ್ಸಿಗೆ ಸಹಕರಿಸಿದರು. ಒಟ್ಟಾರೆ ವಾರಾಂತ್ಯ ಕರ್ಫ್ಯೂವಿನ ಎರಡನೇ ದಿನವೂ ಬೆಳಿಗ್ಗೆ 10:30ರ ನಂತರ ಜನ, ವಾಹನ ಸಂಚಾರ ಸಂಪೂರ್ಣ ಬಂದ್‌ ಆಗುವ ಮೂಲಕ ಕರ್ಫ್ಯೂ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next