ದಾವಣಗೆರೆ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ, ಆರೋಗ್ಯಾಧಿಕಾರಿ ಒಳಗೊಂಡಂತೆ ಸಂಬಂಧಿತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಎಚ್ಚರಿಸಿದ್ದಾರೆ.
ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 854 ಸಕ್ರಿಯ ಪ್ರಕರಣಗಳಿವೆ. ಸೋಂಕು ಹೆಚ್ಚಾಗಲು ಕಾರಣ ಏನು ಎಂದು ಪ್ರಶ್ನಿಸಿದ ಸಚಿವರು, ಸೋಂಕಿನ ಪ್ರಮಾಣ ಶೂನ್ಯಕ್ಕೆ ಬರಬೇಕು. ಈಗೇನಾದರೂ ನಿರ್ಲಕ್ಷé ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜನರು ಛೀ, ಥೂ ಎಂದು ಉಗಿಯುತ್ತಾರೆ. ಹಾಗಾಗಿ ಸೋಂಕು ತಡೆಗೆ ಎಲ್ಲ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ, ಆರೋಗ್ಯಾಧಿಕಾರಿ ಮೇಲಿನ ಹೆಚ್ಚಿನ ಜವಾಬ್ದಾರಿ ಇದ್ದು, ಪ್ರತಿಯೊಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. ರಾಜ್ಯ ಸರ್ಕಾರ ಜಿಲ್ಲೆಯ ಜನರ ಪ್ರಾಣ ರಕ್ಷಣೆಗೆ ಬದ್ಧವಾಗಿದೆ. ಅಮೂಲ್ಯವಾಗಿರುವ ಜೀವ ರಕ್ಷಣೆ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಕೊರೊನಾ ತಡೆಗಟ್ಟುವ ಜೊತೆಗೆ ಪರೀಕ್ಷೆ, ಸಂಪರ್ಕಿತರ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಗೆ ಹೆಚ್ಚಿನ ಗಮನ ನೀಡಬೇಕು ಎಂದರು. ಜಿಲ್ಲೆಯಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭಿಕ ಹಂತದಲ್ಲಿದೆ. ಗಂಭೀರ ಸ್ಥಿತಿಗೆ ತಲುಪದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರಾಘವನ್ ತಿಳಿಸಿದರು. ಜಿಲ್ಲೆಯಲ್ಲಿ ಲಸಿಕಾಕರಣ ಎಷ್ಟಾಗಿದೆ ಎಂದು ಸಚಿವರು ಪ್ರಶ್ನಿಸಿದರು.
ಒಟ್ಟಾರೆ ಶೇ. 31 ರಷ್ಟು ಲಸಿಕೆ ಆಗಿದೆ. 6 ಸಾವಿರ ಡೋಸ್ ಲಸಿಕೆ ಇದೆ. 6,600 ಡೋಸ್ ಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕತ್ತೆ ಕಾಯಲು ಬಂದಿದ್ದೀರಾ?: ಲಸಿಕಾಕರಣದ ಬಗ್ಗೆ ನನಗೆ ತೃಪ್ತಿ ಇಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳನ್ನೇ ಟಾರ್ಗೆಟ್ ಮಾಡಬೇಕಾಗುತ್ತದೆ ಎಂದ ಸಚಿವರು, ಲಸಿಕೆ ಬಗ್ಗೆ ಮಾಹಿತಿ ನೀಡದ ಜಗಳೂರು ತಾಲೂಕು ಆರೋಗ್ಯಾಧಿಕಾರಿಗೆ ಕತ್ತೆ ಕಾಯಲು ಬಂದಿರುವಿರಾ ಎಂದು ಖಾರವಾಗಿ ಪ್ರಶ್ನಿಸಿದರು.
ಕುಂಟು ನೆಪ ಹೇಳುವುದನ್ನು ಬಿಟ್ಟು ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕು. ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಕೋವಿಡ್ ಪರೀಕ್ಷೆ ನಡೆಸಬೇಕು. ಮುಂದಿನ ಸಭೆಯಲ್ಲಿ ತಾಲೂಕುವಾರು ಪರೀಕ್ಷೆ ಕೈಗೊಂಡಿರುವ ಸಂಪೂರ್ಣ ಮಾಹಿತಿ ನೀಡಬೇಕು. ರೆಮಿxಸಿವರ್ ಚುಚ್ಚುಮದ್ದು, ಆಮ್ಲಜನಕ ಇತರೆ ಅಗತ್ಯ ಪರಿಕರಗಳ ಕೊರತೆ ಉಂಟಾದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ಹರಿಹರ ತಾಲೂಕಿನ ಮಲೇಬೆನ್ನೂರು ಆರೋಗ್ಯ ಕೇಂದ್ರಕ್ಕೆ ಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಿರುವ ಬಗ್ಗೆ ಸಂಸದ ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.
ಎರಡು ದಿನಗಳಿಂದ ಕಡಿಮೆ ಡೋಸ್ ನೀಡಲಾಗಿದೆ. ಲಸಿಕೆ ಬಂದ ತಕ್ಷಣ ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್ ತಿಳಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಶೇ. 89 ರಷ್ಟು ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ. ಬಾಕಿ ಇರುವಂತಹ 130 ಜನರಿಗೆ ಲಸಿಕೆ ಕೊಡಿಸಲಾಗುವುದು. ಮಾಸ್ಕ್ ಹಾಕಿಕೊಳ್ಳದೇ ಇರುವಂತಹವರ ವಿರುದ್ಧ ಒಂದು ವಾರದಲ್ಲಿ 197 ಕೇಸ್ ಹಾಕಿ, 1.44 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.