Advertisement

ಜನರ ಸಂಕಷ್ಟ ನಿವಾರಣೆ ಗ್ರಾಮ ವಾಸ್ತವ್ಯ ಉದ್ದೇಶ

03:34 PM Feb 21, 2021 | Team Udayavani |

ಹೊನ್ನಾಳಿ: ಜನರ ಸಂಕಷ್ಟಗಳನ್ನು ನೀಗಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ,
ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ “ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಶನಿವಾರ ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಯಾವುದೇ ಯೋಜನೆ ರೂಪಿಸಿದರೂ ಅವು ಸಾಮಾನ್ಯ ಜನರಿಗೆ ಅನುಕೂಲಕ್ಕಾಗಿಯೇ ಇರುತ್ತವೆ. ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಡಿ 46 ಫಲಾನುಭವಿಗಳಿಗೆ ಸವಲತ್ತುಗಳ ಆದೇಶ ಪತ್ರಗಳನ್ನು ವಿತರಿಸಲಾಗುವುದು ಎಂದರು.

ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಸರ್ಕಾರದ ಯೋಜನೆಗಳು ಸಫಲತೆ ಕಾಣುವುದಿಲ್ಲ ಎಂದು ಸಿಎಂ ಬಿ.ಎಸ್‌ .ಯಡಿಯೂರಪ್ಪನವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಿದ್ದಾರೆ. ಗ್ರಾಮದಲ್ಲಿರುವ ಬಡವರು ತಮಗೆ ಸಿಗುವ ಸವಲತ್ತುಗಳನ್ನು ಪಡೆಯಲು ಈ ಕಾರ್ಯಕ್ರಮ ಉಪಯುಕ್ತ. ಈ ಹಿಂದೆ ನಮ್ಮದೇ ಸರ್ಕಾರ ಜನಸ್ಪಂದನ ಕಾರ್ಯಕ್ರಮ ರೂಪಿಸಿತ್ತು. ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸ್ಪಂದನ ಕಾರ್ಯಕ್ರಮಗಳನ್ನು ನಮ್ಮ ತಾಲೂಕಿನಲ್ಲಿ ಆಯೋಜಿಸಿ ಸಾಮಾನ್ಯ ಜನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

ಹೊನ್ನಾಳಿ ಪಟ್ಟಣದಲ್ಲಿ 30 ಹಾಸಿಗೆ ಸರ್ಕಾರಿ ಆಸ್ಪತ್ರೆ ಇತ್ತು. ನಾನು ಮೊದಲ ಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ 100 ಹಾಸಿಗೆ ಆಸ್ಪತ್ರೆ ಸ್ಥಾಪನೆ ಮಾಡಿದೆ. ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಸ್ಥಾಪನೆ ಮಾಡಿದ್ದೇನೆ. ಈಗ ಅವಳಿ ತಾಲೂಕುಗಳಿಗೆ ಸಹಾಯಕವಾಗಲೆಂದು ಉಪ ವಿಭಾಗಾಧಿ ಕಾರಿಗಳ ಕಚೇರಿಯನ್ನು ಹೊನ್ನಾಳಿಗೆ ತಂದಿದ್ದೇನೆ. ಅಭಿವೃದ್ಧಿಯೇ ನನ್ನ ಮೂಲಮಂತ್ರ ಎಂದರು.

ಜಿಪಂ ಸದಸ್ಯೆ ದೀಪಾ ಜಗದೀಶ್‌ ಮಾತನಾಡಿ, ಕಡು ಬಡವರ ಸವಲತ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಹೇಳಿದರು. ತಹಶೀಲ್ದಾರ್‌ ಬಸನಗೌಡ ಕೋಟುರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಆಯ್ದ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತದೆ ಎಂದರು. ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ರೇವಣ್ಣ, ತಾಲೂಕು
ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಓದಿ : ದೇಣಿಗೆ ನೀಡುವುದಿಲ್ಲವಾದರೆ ಸಿದ್ದು, HDK ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಪ್ರಹ್ಲಾದ್ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next