Advertisement

ಲಾಕ್‌ ಡೌನ್‌ ವಿಸ್ತರಣೆಗೆ ಹೆಚ್ಚಿದ ಒಲವು

09:05 PM Jun 02, 2021 | Team Udayavani |

ದಾವಣಗೆರೆ: ಕೊರೊನಾ ತಡೆಗಟ್ಟಲು ಜಾರಿಯಲ್ಲಿರುವ ಲಾಕ್‌ಡೌನ್‌ ಮುಂದುವರೆಸುವ ಬಗ್ಗೆ ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿನ ಕೋವಿಡ್‌ ಸ್ಥಿತಿ-ಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಒಲವು ವ್ಯಕ್ತವಾಯಿತು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಮಾತನಾಡಿ, ರಾಜ್ಯದಲ್ಲಿ ಇನ್ನೂ ಎಂಟು ದಿನ ಲಾಕ್‌ಡೌನ್‌ ಮುಂದುವರೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನರು ಮಾಸ್ಕ್ ಧರಿಸದೆ ಓಡಾಡುವುದು, ಗುಂಪುಗೂಡುವುದನ್ನು ಗಮನಿಸಿದ್ದೇನೆ. ಹೀಗಾದರೆ ಕೊರೊನಾ ನಿಯಂತ್ರಣ ಮಾಡುವುದಾರೂ ಹೇಗೆ ಎಂದು ಪ್ರಶ್ನಿಸಿದರು.

ಪಿಡಿಒಗಳಿಗೆ ಸರಿಯಾಗಿ ಸೂಚನೆ ನೀಡಬೇಕು. ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ವಿಧಿಸಬೇಕು. ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಲಾಕ್‌ಡೌನ್‌ ಜಾರಿಗೆ ಎಸ್ಪಿ, ಜಿಪಂ ಸಿಇಒ ಹೆಚ್ಚು ಗಮನ ಹರಿಸಬೇಕು ಎಂದು ಸೂಚಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಜಿಲ್ಲೆಯಲ್ಲಿ ಕಠಿಣ ಲಾಕ್‌ ಡೌನ್‌ ಮಾಡಬೇಕು. ಜನರೇ ಪೊಲೀಸ್‌, ಕೊರೊನಾ ವಾರಿಯರ್ಸ್‌ ಆಗಬೇಕು ಎಂದು ತಿಳಿ ಹೇಳಿದರೂ ಜನರು ಏನೂ ಆಗುವುದಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯ ಮಟ್ಟದಲ್ಲಿ ಲಾಕ್‌ ಡೌನ್‌ ಮುಂದುವರೆಸಲಿ ಅಥವಾ ಬಿಡಲಿ, ದಾವಣಗೆರೆ ಜಿಲ್ಲೆಯಲ್ಲಿ ಜೂ. 15 ರವರೆಗೆ ಕಠಿಣ ಲಾಕ್‌ಡೌನ್‌ ಮುಂದುವರೆಸಬೇಕು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗಲು ಎಲ್ಲರೂ ಸಹಕರಿಸಬೇಕು. ಜಿಲ್ಲೆಗೆ ಅಗತ್ಯ ಇರುವ ಲಸಿಕೆ ತರಿಸಬೇಕು ಎಂದು ಒತ್ತಾಯಿಸಿದರು. ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ ಮಾತನಾಡಿ, ಮಾಯಕೊಂಡ ಕ್ಷೇತ್ರದಲ್ಲಿ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಮುಂದಿನ ವಾರದಲ್ಲೇ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಕೊಠಡಿ ಉದ್ಘಾಟನೆ ಮಾಡಲಾಗುವುದು ಎಂದು ಸಚಿವ ಬೈರತಿ ಬಸವರಾಜ್‌ ತಿಳಿಸಿದರು.

ಕೇರ್‌ ಸೆಂಟರ್‌ಗೆ ದಾಖಲಿಸಿ: ಹೋಂ ಐಸೋಲೇಷನ್‌ನಲ್ಲಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವರನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಬಿಡಬಾರದು. ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಳೆದ ಸಭೆಯಲ್ಲೇ ಸೂಚನೆ ನೀಡಲಾಗಿತ್ತು.

Advertisement

ಆದರೂ ಯಾವ ಕಾರಣಕ್ಕೆ ಹೋಂ ಐಸೋಲೇಷನ್‌ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಶ್ನಿಸಿದ ಅವರು, ಕೇರ್‌ ಸೆಂಟರ್‌ಗಳಲ್ಲಿ ಅತ್ಯುತ್ತಮ ಗುಣಮಟ್ಟದ ತಿಂಡಿ, ಊಟದ ವ್ಯವಸ್ಥೆ ಮಾಡಬೇಕು. ಮನೆಗಳಲ್ಲಿ ದೊರೆಯುವ ಊಟಕ್ಕಿಂತಲೂ ಗುಣಮಟ್ಟದ್ದಾಗಿರಬೇಕು. ಸ್ವತ್ಛತೆ, ಶುಚಿತ್ವ ಕಾಪಾಡಬೇಕು. ಗ್ರಾಮಗಳಲ್ಲಿನ ಕಾರ್ಯಪಡೆಗಳು ಚೆನ್ನಾಗಿ ಕೆಲಸ ಮಾಡಬೇಕು. ದಾವಣಗೆರೆ ತರಕಾರಿಗೆ ಹೆಸರುವಾಸಿ, ಪ್ರತಿ ದಿನ ತಾಜಾ ತರಕಾರಿ ತಂದು ತಿಂಡಿ, ಊಟದ ವ್ಯವಸ್ಥೆ ಮಾಡಬೇಕು. ಕೇರ್‌ ಸೆಂಟರ್‌ಗಳಿಗೆ ದಾಖಲಾದವರನ್ನು ನಮ್ಮ ಸಹೋದರರು, ಬಂಧುಗಳಂತೆ ಚೆನ್ನಾಗಿ ನೋಡಿಕೊಳ್ಳಬೇಕು. ಅಧಿಕಾರಿಗಳು ತಿಂಡಿ-ಊಟ ಮಾಡಿ, ರುಚಿ ಪರೀಕ್ಷೆ ಮಾಡಬೇಕು.

ಮುಂದಿನ ಸಭೆ ಸಮಯದಲ್ಲಿ ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಊಟ ಮಾಡುತ್ತೇನೆ. ಗುಣಮಟ್ಟದಲ್ಲಿ ವ್ಯತ್ಯಾಸ ಇದ್ದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ಇನ್ನು ಮುಂದೆ ಗ್ರಾಮೀಣ ಪ್ರದೇಶ ಒಳಗೊಂಡಂತೆ ಎಲ್ಲ ಕಡೆಯ ಸೋಂಕಿತರನ್ನ ಕೇರ್‌ ಸೆಂಟರ್‌ ಗಳಿಗೆ ಕರೆ ತರದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ದಾವಣಗೆರೆಯ ಕೆಲ ಪ್ರತಿಷ್ಠಿತ ಬಡಾವಣೆಯಲ್ಲಿರುವರು ಕೇರ್‌ ಸೆಂಟರ್‌ ಗಳಿಗೆ ಬರಲು ಹಿಂದೇಟು ಹಾಕುತ್ತಾರೆ.

ಕೇರ್‌ ಸೆಂಟರ್‌ಗಳಿಗೆ ಕರೆದೊಯ್ಯಲು ಪೊಲೀಸ್‌ ಜೊತೆ ತೆರಳಿದ ಸಂದರ್ಭದಲ್ಲಿ ವ್ಯತಿರಿಕ್ತ ಘಟನೆಗಳು ಸಹ ನಡೆದಿವೆ. ಹಾಗಾಗಿ ಬೆಂಗಳೂರು ಮಾದರಿಯಲ್ಲಿ ಖಾಸಗಿ ಆಸ್ಪತ್ರೆ ಮತ್ತು ಹೋಟೆಲ್‌, ಲಾಡ್ಜ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆಸ್ಪತ್ರೆಯಲ್ಲಿ ದಾಖಲು ತೋರಿಸಿ, ಲಾಡ್ಜ್, ಹೋಟೆಲ್‌ಗ‌ಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲು ಮತ್ತು ಸಂಬಂಧಿತರೇ ಹಣ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು. ಇದಕ್ಕೆ ಸಭೆ ಹಸಿರು ನಿಶಾನೆ ತೋರಿತು.

Advertisement

Udayavani is now on Telegram. Click here to join our channel and stay updated with the latest news.

Next