ಹೊನ್ನಾಳಿ: ಆಕ್ಸಿಜನ್ ಕೊರತೆಯಿಂದ ಉಂಟಾಗಬಹುದಾಗಿದ್ದ ಅನಾಹುತವೊಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಹಾಗೂ ಅಧಿಕಾರಿಗಳ ಸಮಯಪ್ರಜ್ಞೆ ಹಾಗೂ ಪ್ರಯತ್ನದಿಂದ ತಪ್ಪಿದೆ. ರೇಣುಕಾಚಾರ್ಯ ಅವರ ಕ್ಷೇತ್ರ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಯಲ್ಲಿ 20 ಮಂದಿ ಕೊರೊನಾ ಸೋಂಕಿತರು ಆಕ್ಸಿಜನ್ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬುಧವಾರ ರಾತ್ರಿ ಆಕ್ಸಿಜನ್ ಖಾಲಿಯಾಗುವ ಹಂತಕ್ಕೆ ಬಂದಿದೆ. ವಿಷಯ ತಿಳಿದು ಮಧ್ಯರಾತ್ರಿ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದೌಡಾಯಿಸಿದ ರೇಣುಕಾಚಾರ್ಯ ಆಕ್ಸಿಜನ್ ಪೂರೈಕೆ ಮಾಡಿ 20 ಜನರ ಪ್ರಾಣ ಉಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೇವಲ 3 ಗಂಟೆಗಾಗುವಷ್ಟು ಮಾತ್ರವೇ ಆಕ್ಸಿಜನ್ ಲಭ್ಯವಿತ್ತು. ಸಿಲಿಂಡರ್ ಖಾಲಿಯಾದರೆ ಸೋಂಕಿತರ ಜೀವಕ್ಕೆ ಮಾರಕವಾಗುತ್ತಿತ್ತು. ರಾತ್ರಿ 10.52 ಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಚಂದ್ರಪ್ಪ ಅವರು ಶಾಸಕರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದರು.
ತಕ್ಷಣ ಆಸ್ಪತ್ರೆಗೆ ಆಗಮಿಸಿದ ಶಾಸಕರು ಪಿಪಿಇ ಕಿಟ್ ಧರಿಸಿ ಸೋಂಕಿತರ ವಾರ್ಡ್‌ಗೆ ಭೇಟಿ ನೀಡಿ ಪರಿಸ್ಥಿತಿಯ ಗಂಭೀರತೆ ಅವಲೋಕಿಸಿ ತಕ್ಷಣವೇ ಜಿಲ್ಲಾ ಧಿಕಾರಿಗಳಿಗೆ ಪರಿಸ್ಥಿತಿ ತಿಳಿಸಿ ಸಿಲಿಂಡರ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ನಂತರ ತಾಲೂಕು ಅಧಿಕಾರಿಗಳ ತಂಡದೊಂದಿಗೆ ಖಾಲಿ ಸಿಲಿಂಡರ್‌ಗಳನ್ನು ತೆಗೆದುಕೊಂಡು ಹರಿಹರದ ದಿ.ಸದರನ್ ಗ್ಯಾಸ್ ಲಿಮಿಟೆಡ್ ಕಂಪೆನಿಗೆ ಭೇಟಿ ನೀಡಿ 22 ಜಂಬೋ ಮತ್ತು 2 ಸಣ್ಣ ಸಿಲಿಂಡರ್ ವ್ಯವಸ್ಥೆ ಮಾಡಿಕೊಂಡು ರಾತ್ರಿ 2.30ಕ್ಕೆ ಹೊನ್ನಾಳಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆ ಆಗದಂತೆ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಕಣ್ಣೀರಿಟ್ಟ ಶಾಸಕ: ತಡರಾತ್ರಿ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ರೋಗಿಗಳ ಶೋಚನೀಯ ಪರಿಸ್ಥಿತಿ ಕಣ್ಣಾರೆ ಕಂಡು ಭಾವುಕರಾಗಿ “ನಿಮಗೇನೂ ಆಗುವುದಿಲ್ಲ. ನಿಮ್ಮ ಜೊತೆ ನಾನಿದ್ದೇನೆ. ಈಗಲೇ ಆಕ್ಸಿಜನ್ ತರುತ್ತೇನೆ’ ಎಂದು ಧೈರ್ಯ ತುಂಬಿ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಬಸವನಗೌಡ ಕೊಟೂರ, ಸಿಪಿಐ ದೇವರಾಜ್, ಎಸೈಗಳಾದ ಬಸವನಗೌಡ ಬಿರಾದರ್, ರಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.