ಜಾರ್ಖಂಡ್‌ನ ಈತು ಮಂಡಲ್ ಅವರದು ಇನ್ನೊಂದು ಸಾಧನೆ. ಎಂಟರ ಹರೆಯದಲ್ಲೇ ಕಬಡ್ಡಿ ನಂಟು ಬೆಳೆಸಿಕೊಂಡಾಕೆ. ಈಕೆ ಕೂಡ ಬಡತನದಲ್ಲಿ ಬೆಂದು ಅರಳಿದ ಪ್ರತಿಭೆ. ತಂದೆ ಟ್ರ್ಯಾಕ್ಟರ್ ಡ್ರೈವರ್.
“ನನ್ನ ಕಬಡ್ಡಿ ಕ್ರೇಝ್ನಿಂದ ಹೆತ್ತವರಿಗೆ ಚಿಂತೆಯಾಗಿತ್ತು. ಆದರೆ ನಾನು ಮಾತ್ರ ಹಿಂದಡಿ ಇಡಲಿಲ್ಲ. ಹೀಗಾಗಿ ಇಲ್ಲಿರಲು ಸಾಧ್ಯವಾಗಿದೆ’ ಎಂದು ಮಹಾರಾಷ್ಟ್ರ ವಿರುದ್ಧ ಆಡಿದ ಬಳಿಕ ಈತು ಮಂಡಲ್ ಪ್ರತಿಕ್ರಿಯಿಸಿದರು.
“ನನ್ನ ಆಸಕ್ತಿ ಗುರುತಿಸಿದ ಬಳಿಕ ಹೆತ್ತವರು ಪ್ರೋತ್ಸಾಹ ನೀಡತೊಡಗಿದರು. ನನಗೀಗ ಕಬಡ್ಡಿ ಹುಚ್ಚು ಅಂಟಿಕೊಂಡಿದೆ. ಕಬಡ್ಡಿ ಬಿಟ್ಟಿರಲಾಗದ ಸ್ಥಿತಿ ತಲುಪಿದ್ದೇನೆ. ಮುಂದೊಂದು ದಿನ ಕಬಡ್ಡಿ ಕೋಚ್ ಆಗಿ ಕಿರಿಯ ಪ್ರತಿಭೆಗಳಿಗೆಲ್ಲ ಮಾರ್ಗದರ್ಶನ ನೀಡಬೇಕು..’ ಎಂದು ಪಟಪಟನೆ ಹೇಳುತ್ತ ಹೋದರು ಈತು.
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಮಧುಬನ್ ಗ್ರಾಮದ, 13 ವರ್ಷದ ಈತು ಮಂಡಲ್ ಈ ಕೂಟದ ಅತೀ ಕಿರಿಯ ಆಟಗಾರ್ತಿ ಹಾಗೂ ಇದೊಂದು ಕೂಟ ದಾಖಲೆ.
ಆದರೆ ಖೇಲೋ ಇಂಡಿಯಾದ ಕಿರಿಯ ಆಟಗಾರ್ತಿ ಎಂಬ ಈತು ಮಂಡಲ್ ದಾಖಲೆ ಹೆಚ್ಚು ಕಾಲ ಉಳಿಯುವುದು ಅನುಮಾನ. ಈಕೆಯ 8 ವರ್ಷದ ಸಹೋದರಿಯಿಂದಲೇ ಈ ದಾಖಲೆ ಪತನಗೊಳ್ಳಬಹುದು. ಅವಳೂ ಕಬಡ್ಡಿ ಪ್ರೀತಿಗೆ ಸಿಲುಕಿದ್ದು, ಅಕ್ಕನನ್ನೂ ಮೀರಿಸುವ ಹಾದಿಯಲ್ಲಿದ್ದಾಳೆ!