Advertisement

ಮಗಳೇ ನಮ್ಮ “ನಿಧಿ’; ನಿಮ್ಮ ನಿಧಿ ಬೇಡ

12:02 PM May 31, 2018 | Team Udayavani |

ಪಡುಬಿದ್ರಿ: “ಪರಿಹಾರದ ಚೆಕ್‌ ಬೇಡ, ನನಗೆ ನನ್ನ ತಂಗಿ ಬೇಕು. ಅವಳನ್ನು ತಂದುಕೊಡಿ…!’ ಹೀಗೆಂದು ಮನಕಲಕುವ ರೀತಿ ರೋದಿಸುತ್ತ ಜಿಲ್ಲಾಧಿಕಾರಿ ಬಳಿ ಕೇಳಿದ್ದು ಬಾಲಕಿ ನಿಶಾ.

Advertisement

ಮಂಗಳವಾರ ಶಾಲೆಯಿಂದ ಬರುತ್ತಿರುವ ವೇಳೆ ನೆರೆ ನೀರಿನ ಸೆಳೆತಕ್ಕೆ ಸಿಕ್ಕು ಬಲಿಯಾದ ಬಾಲಕಿ ನಿಧಿಯ ಅಕ್ಕ ನಿಶಾ ಹೀಗೆಂದು ರೋದಿಸುತ್ತಿದ್ದರೆ, ಕುಟುಂಬಕ್ಕೆ ಪರಿಹಾರ ನೀಡಲು ಆಗಮಿಸಿದವರೆಲ್ಲ ಸ್ತಬ್ಧರಾದರು. 

ನಿಧಿಯ ಮನೆಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಭೇಟಿ ನೀಡಿ ಪ್ರಕೃತಿ ವಿಕೋಪ ನಿಧಿಯಡಿ 4 ಲಕ್ಷ ರೂ.ಗಳ ಚೆಕ್ಕನ್ನು ಬಾಲಕಿಯ ತಂದೆ ಉಮೇಶ್‌ ಆಚಾರ್ಯ ಅವರಿಗೆ ನೀಡುತ್ತಿದ್ದಂತೆ ನೆರೆ ನೀರಿನಿಂದ ಪಾರಾಗಿದ್ದ ನಿಶಾ ರೋದಿಸಿದಳು. ಆಕೆಯೊಂದಿಗೆ ತಾಯಿ ಆಶಾ ಆಚಾರ್ಯ, ಉಮೇಶ್‌  ಅವರೂ ಮಗಳನ್ನು ನೆನೆದು ದುಃಖೀಸುತ್ತಿದ್ದಂತೆ, ಜಿಲ್ಲಾಧಿಕಾರಿಯವರ ಹೃದಯವೂ ಕಲಕಿತು. 

ಜಂಟಿ ಕಾರ್ಯಾಚರಣೆ
ಸ್ಥಳೀಯ ಯುವಕರು ಹಾಗೂ ಆಂಧ್ರದ ಗುಂಟೂರಿನಿಂದ ಆಗಮಿಸಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ (ಎನ್‌ಡಿಆರ್‌ಫ್)ದ ಓರ್ವ ಪಿಎಸ್‌ಐ ಸಹಿತ 10 ಮಂದಿಯ ತಂಡದ ಕಾರ್ಯಾಚರಣೆ ನಡೆಸಿದ್ದು, ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಿಧಿಯ ಶವವನ್ನು ಬೆಳಗ್ಗೆ 8.15ರ ಹೊತ್ತಿಗೆ ಪತ್ತೆ ಮಾಡಿತ್ತು. 

ಬೆಳಗ್ಗೆ ನಿಧಿಯ ಪತ್ತೆಗೆ ಎನ್‌ಡಿಆರ್‌ಎಫ್ ತಂಡ ಪಡುಬಿದ್ರಿಗೆ ಆಗಮಿಸಿದ್ದು, ಅವರನ್ನು ಪಿಎಸ್‌ಐ ಸತೀಶ್‌ ಘಟನಾ ಸ್ಥಳಕ್ಕೆ ಕರೆದೊಯ್ದರು. ಸುಸಜ್ಜಿತ ಸಲಕರಣೆಗಳೊಂದಿಗೆ ತಂಡ ಆಗಮಿಸಿದ್ದು, ಬೆಳಗ್ಗೆ 7 ಗಂಟೆಗೆ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭ ಸ್ಥಳೀಯರಾದ ಪಾದೆಬೆಟ್ಟಿನ ಯುವಕ ಮನೋಹರ್‌ ಅವರಿಗೆ ಘಟನೆ ಸ್ಥಳದಿಂದ 50 ಮೀ. ದೂರದಲ್ಲಿ ನಿಧಿ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.  

Advertisement

ಹೆಣ್ಮಕ್ಕಳೇ ಆಧಾರ
ನಿಧಿಯ ತಂದೆ ಉಮೇಶ್‌ ಆಚಾರ್ಯ ಅವರದ್ದು ಮಧ್ಯಮ ವರ್ಗದ ಕುಟುಂಬ. ಇಬ್ಬರು ಹೆಣ್ಮಕ್ಕಳೇ ಇವರ ಆಧಾರ. ಬಂಗಾರದ ಕೆಲಸ ಮಾಡುತ್ತಿದ್ದ ಉಮೇಶ್‌ ಅವರಿಗೆ ಸದ್ಯ ಕೆಲಸ ಕಡಿಮೆಯಾದ್ದರಿಂದ ಸಹಾಯಕ ಬಾಣಸಿಗರಾಗಿ ಅಣ್ಣನೊಂದಿಗೆ ಕೆಲಸ ಮಾಡುತ್ತಾರೆ. ತಾಯಿ ಆಶಾ ಪಡುಬಿದ್ರಿ ಆಯುರ್ವೇದ ಇಂಡಸ್ಟ್ರಿಯೊಂದರ ಕಾರ್ಮಿಕೆಯಾಗಿದ್ದಾರೆ. ಇವರು ಎರಡು ವರ್ಷದ ಹಿಂದಷ್ಟೇ ಪಾದೆಬೆಟ್ಟು ಪಟ್ಲದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿ ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದರು. 

ಕುಟುಂಬದ ರೋದನ
ಮರಣೋತ್ತರ ಪರೀಕ್ಷೆಯ ಬಳಿಕ ನೆಲದ ಮೇಲೆ ಮಲಗಿಸಿದ್ದ ಮಗಳ ದೇಹವನ್ನು ನೋಡಲಾಗದ ತಾಯಿ ಸೋಫಾದ ಮೇಲೆ ಮಲಗಿಸಿದರು. ಅಂತಿಮ ವಿಧಾನಕ್ಕೆ ಹೊರ ಸಾಗಿಸುವ ಸಂದರ್ಭದಲ್ಲೂ ತಾಯಿ ಮನಸ್ಸು ಕೇಳಲಿಲ್ಲ. ಆಕೆಯ ದೇಹದ ಮೇಲೆ ಬಿಸ್ಕೆಟ್‌ ಪೊಟ್ಟಣವಿರಿಸಿದರು. ಈ ಸಂದರ್ಭ ಆಕೆಯ ಅಜ್ಜಿ “ನಾನೂ ಮೊಮ್ಮಗಳೊಟ್ಟಿಗೆ ಹೋಗುತ್ತೇನೆ … ನಾಳೆ ಆಕೆಗೆ ಗಂಜಿ ಬೇಯಿಸಿ ಹಾಕುವವರಾರು’ ಎಂದು ರೋದಿಸುತ್ತಿದ್ದರು. ಬಾಲಕಿಯ ಅಂತ್ಯ ಸಂಸ್ಕಾರವನ್ನು ಪಡುಬಿದ್ರಿಯ ಕಂಚಿನಡ್ಕದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

ಸೈಕಲಲ್ಲಿ ಹೋಗುತ್ತಿದ್ದ ಮಕ್ಕಳು
ಪ್ರತಿದಿನ ಮಕ್ಕಳು ಮನೆಯಿಂದ ಸೈಕಲ್‌ನಲ್ಲಿ ತೆರಳಿ ಸಮೀಪದ ಗ್ಯಾರೇಜೊಂದರ ಬಳಿ ಇಟ್ಟು ಶಾಲೆಗೆ
ತೆರಳುತ್ತಿದ್ದರು. ಅವರು ಸಾಗುವ ದಾರಿ ತಗ್ಗು ಪ್ರದೇಶವಾಗಿದ್ದು, ಸಂಜೆ ಶಾಲೆಯಿಂದ ಮರಳುತ್ತಿದ್ದಾಗ ಭಾರೀ
ಮಳೆಗೆ ನೆರೆ ನೀರು ತುಂಬಿಕೊಂಡಿತ್ತು. ಬಾಲಕಿಯರಿಬ್ಬರು ಬಿದ್ದು ನೀರುಪಾಲಾಗುತ್ತಿರುವುದನ್ನು  ನೋಡಿದ
ಸಮೀಪದ ಮನೆಯ ಮಹಿಳೆಯೊಬ್ಬರು ನೋಡಿ ಬೊಬ್ಬೆ ಹಾಕಿದ್ದರು. ಈ ವೇಳೆಸ್ಥಳೀಯರಾದ ಸತೀಶ್‌ಶೆಟ್ಟಿ ಓಡಿ ಬಂದು ನಿಶಾಳನ್ನು ರಕ್ಷಿಸುವಲ್ಲಿ ಸಫ‌ಲರಾದರು. ಅಷ್ಟರಲ್ಲೇ ನಿಧಿ ನಾಪತ್ತೆಯಾಗಿದ್ದಳು. 

ಅವೈಜ್ಞಾನಿಕ ಕಾಮಗಾರಿ
ಹೆಜಮಾಡಿ – ಪಡುಬಿದ್ರಿ ಜೋಡಿಸುವ ಮುಟ್ಟಳಿವೆ ಸೇತುವೆಯ ಅವೈಜ್ಞಾನಿಕ ಕಾಮಗಾರಿ ಮತ್ತು ಇದರೊಂದಿಗಿನ ಮೀನುಗಾರಿಕಾ ರಸ್ತೆ ಹಾಗೂ ಎರ್ಮಾಳು – ಕಲ್ಸಂಕ ಹೆದ್ದಾರಿಯ ಸೇತುವೆ ನಿರ್ಮಾಣ ಕಾಮಗಾರಿ ಅಪಸವ್ಯಗಳಿಂದಾಗಿ ಅವಘಡ ಸಂಭವಿಸಿದೆ ಎಂದು ಜನರು ದೂರಿದ್ದಾರೆ.  ಮಂಗಳವಾರ ನೆರೆ ನೀರು ಏರಿಕೆಯಾಗುತ್ತಿದ್ದಂತೆ ರಸ್ತೆಯನ್ನು ಜೆಸಿಬಿ ಮೂಲಕ ಒಡೆದು ನದಿ ಪಾತ್ರದ ನೀರು ಸಮುದ್ರವನ್ನು ಸೇರುವಂತೆ ಮಾಡಲಾಗಿತ್ತು. ಇದರಿಂದ ನೆರೆ ನೀರು ಇಳಿಕೆಯಾಗಿತ್ತು. ಸದ್ಯ ಎರ್ಮಾಳು ಕಲ್ಸಂಕ ಕಾಮಗಾರಿಗೆ ನವಯುಗ ನಿರ್ಮಾಣ ಕಂಪೆನಿಯು ಎರ್ಮಾಳು ಹೊಳೆಗೆ ತಂದು ಹಾಕಿರುವ ಮಣ್ಣನ್ನು ತೆರವು ಗೊಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next