ಬೆಂಗಳೂರು: ತನ್ನ ಮೇಲೆ ಮಾವ ನಡೆಸಿದ ಲೈಂಗಿಕ ದೌರ್ಜನ್ಯಕ್ಕೆ ಅತ್ತೆ ಹಾಗೂ ಪತಿಯೇ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂದಿರಾನಗರದ ನಿವಾಸಿ ಸೌಮ್ಯ (ಹೆಸರು ಬದಲಿಸಲಾಗಿದೆ) ಎಂಬಾಕೆ, ಫೆ.27ರಂದು ತನ್ನ ಪತಿ ರಘುನಂದನ್, ಮಾವ ವೆಂಕಟಪತಿ ಹಾಗೂ ಅತ್ತೆ ಉಷಾ ವಿರುದ್ಧ ದೂರು ನೀಡಿದ್ದು.
ಈ ಸಂಬಂಧ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ಥ ಮಹಿಳೆ ಹಾಗೂ ರಘುನಂದನ್ ಗೆ 2016ರಲ್ಲಿ ಅದ್ದೂರಿ ಮದುವೆಯಾಗಿದ್ದು ಆಗ 10 ಲಕ್ಷ ರೂ. ವರದಕ್ಷಿಣೆ ಹಾಗೂ ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದ ಕೆಲ ದಿನಗಳ ಬಳಿಕ ಅಮೆರಿಕಾಗೆ ತೆರಳಿದ ರಘುನಂದನ್ ಪತ್ನಿಯನ್ನು ಪೋಷಕರ ಜತೆ ಬಿಟ್ಟಿದ್ದರು. ಈ ಸಂದರ್ಭದಲ್ಲಿ ಮಾವ ವೆಂಕಟಪತಿ ಸೊಸೆಯೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಪೀಡಿಸುತ್ತಿದ್ದರು ಎನ್ನಲಾಗಿದೆ.
ಮಹಿಳೆ ದೂರಿನಲ್ಲೇನಿದೆ?: “ಮಾವನ ದೌರ್ಜನ್ಯದ ಬಗ್ಗೆ ಹಲವು ಬಾರಿ ಪತಿ ಹಾಗೂ ಅತ್ತೆಗೆ ತಿಳಿಸಿದರೂ ಸ್ವಲ್ಪ ಅಡೆjಸ್ಟ್ ಮಾಡಿಕೊಂಡು ಹೋಗು ಎನ್ನುತ್ತಿದ್ದರು. ಅಲ್ಲದೆ ಪದೇ ಪದೇ ವರದಕ್ಷಿಣೆಗೆ ಪೀಡಿಸುತ್ತಿದ್ದರು. ಅಮೆರಿಕಾಗೆ ನನ್ನನ್ನು ಕರೆದುಕೊಂಡು ಹೋಗಲು 5 ಲಕ್ಷರೂ ಬೇಡಿಕೆ ಇಟ್ಟಿದ್ದರು. ಪೋಷಕರಿಂದ ಐದು ಲಕ್ಷ ಹಣಪಡೆದುಕೊಂಡು ಅತ್ತೆ-ಮಾವನ ಜತೆ ಅಮೆರಿಕಾಗೆ ತೆರಳಿ ಕೆಲ ತಿಂಗಳು ಅಲ್ಲಿಯೇ ವಾಸವಿದ್ದೆ.
ಈ ವೇಳೆಯೂ ಮಾವ ತನ್ನ ಕಾಮಚೇಷ್ಟೇ ಬಿಟ್ಟಿರಲಿಲ್ಲ, ಪತಿಯ ಎದುರೇ ಮೈಮುಟ್ಟಿ ಮಾತನಾಡಿಸುತ್ತಿದ್ದರು. ಈ ವಿಚಾರ ಗೊತ್ತಿದ್ದರೂ ಪತಿ ಹಾಗೂ ಅತ್ತೆ ಬೇಕಂತಲೇ ಸುಮ್ಮನಿರುತ್ತಿದ್ದರು. ಅಮೆರಿಕಾದಿಂದ ನಗರಕ್ಕೆ ವಾಪಾಸ್ಸಾಗಿ ಸದ್ಯ ದೂರು ನೀಡುತ್ತಿದ್ದೇನೆ,” ಎಂದು ಅವರು ಪೊಲೀಸರ ಬಳಿ ಹೇಳಿದ್ದಾರೆ.
ಮನೆಖಾಲಿ ಮಾಡಿದ ಆರೋಪಿಗಳು: ಮಹಿಳೆಯ ದೂರಿನ ಆಧಾರದಲ್ಲಿ ಪೊಲೀಸರು, ರಘುನಂದನ್ ಮತ್ತು ಆತನ ತಂದೆ ತಾಯಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಅವರಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಇಂದಿರಾನಗರದ ಅವರ ಮನೆ ವಿಳಾಸಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಅಲ್ಲಿ ಯಾರೂ ಇರಲಿಲ್ಲ. ಪತಿ ಎಲ್ಲಿದ್ದಾನೆ ಎಂಬುದಾಗಿ ಮಹಿಳೆಯೂ ದೂರಿನಲ್ಲಿ ತಿಳಿಸಿಲ್ಲ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಉದಯವಾಣಿಗೆ ತಿಳಿಸಿದರು.