Advertisement

ಪೊಟ್ಟಣದ ತುಂಬ ಮಗಳು ಕೊಟ್ಟ ಸಿಹಿಮುತ್ತುಗಳೇ!

10:20 PM Dec 22, 2019 | mahesh |

ಸಿಟ್ಟು ಬಾರದವರು ಯಾರಿದ್ದಾರೆ? ಆದರೆ ಅಂಥ ಕೋಪ ನಮ್ಮನ್ನೇ ನಾಶ ಮಾಡುತ್ತದೆ. ಸಿಟ್ಟನ್ನು ನಿಯಂತ್ರಿಸಲು ಕಲಿತರೆ, ನಮ್ಮ ಸಿಟ್ಟು ಸಾತ್ವಿಕವಾಗಿದ್ದರೆ ಅದು ಯಾರ ಮೈಗೂ, ಮನಸ್ಸಿಗೂ ನೋವು ಮಾಡುವುದಿಲ್ಲ. ನಮ್ಮ ರಕ್ತದೊತ್ತಡವನ್ನು ಹೆಚ್ಚಿಸುವುದಿಲ್ಲ. ಒಂದು ಕ್ಷಣದ ಸಿಟ್ಟಿನಿಂದ ಪಾರಾದರೆ ನಾಲ್ಕು ದಿನಗಳ ವಿಷಾದ, ನೋವಿನಿಂದ ಪಾರಾದಂತೆಯೇ ಸರಿ.

Advertisement

ಶಾಂತಿ ನಮ್ಮೊಳಗಿಂದಲೇ ಬರುವಂಥದ್ದು. ಅದು ನಮ್ಮನ್ನು ನಾವು ಸರಿಯಾಗಿ ಅರಿತಾಗ ತಾನಾಗಿಯೇ ಸಿಗುತ್ತದೆ. ಅದನ್ನು ಹೊರಗಿನಿಂದ ಯಾವತ್ತೂ ನಿರೀಕ್ಷಿಸಬೇಡಿ.

ಕ್ರಿಸ್ಮಸ್‌ ಹಬ್ಬ ಸಮೀಪಿಸುತ್ತಿತ್ತು. ಮನೆ, ಗೋದಲಿ ಹಾಗೂ ಕ್ರಿಸ್ಮಸ್‌ ಟ್ರೀಯನ್ನು ಅಲಂಕರಿಸುವ ಕೆಲಸದಲ್ಲಿ ಪುಟ್ಟ ಮಗಳು ಅಪ್ಪನಿಗೆ ಸಹಾಯ ಮಾಡುತ್ತಿದ್ದಳು. ಹೊಂಬಣ್ಣದ ಕಾಗದದ ಸುರುಳಿಯೊಂದನ್ನು ಎಳೆಯ ಕೈಗಳು ಹಾಳುಗೆಡವಿದಳೆಂದು ಅಪ್ಪ ಸಿಟ್ಟಿಗೆದ್ದು ಬೈದ. ಮರುದಿನ ಬೆಳಗ್ಗೆ, “ಅಪ್ಪಾ, ನಾನು ನಿನ್ನೆ ರಾತ್ರಿ ಅಲಂಕಾರಕ್ಕೆ ಬಳಸುವ ಕಾಗದದ ಸುರುಳಿಯನ್ನು ಗೊತ್ತಿಲ್ಲದೆ ಹಾಳು ಮಾಡಿದೆ. ಕ್ಷಮಿಸು. ತಗೋ, ನಿನಗಾಗಿ ಒಂದು ಉಡುಗೊರೆಯನ್ನು ತಂದಿದ್ದೇನೆ’ ಎಂದು ಸುಂದರವಾದ ಪೊಟ್ಟಣವೊಂದನ್ನು ಅವನ ಕೈಗಿತ್ತು ತುಂಟ ನಗೆ ನಕ್ಕಳು.

ಮಗಳು ತನಗಾಗಿ ಏನು ತಂದಿರಬಹುದೆಂದು ಅಪ್ಪ ಕುತೂಹಲದಿಂದ ಪೊಟ್ಟಣವನ್ನು ತೆರೆದು ನೋಡಿದ. ಅದು ಖಾಲಿಯಾಗಿತ್ತು. “ಉಡುಗೊರೆ ಎಂದ ಮೇಲೆ ಏನಾದರೂ ಕೊಡಬೇಕು, ಖಾಲಿ ಪೊಟ್ಟಣವಲ್ಲ ಎನ್ನುವುದೂ ನಿನಗೆ ಗೊತ್ತಿಲ್ಲವೇ?’ ಎಂದು ಮತ್ತೂಮ್ಮೆ ಬೈದ.

ಮಗಳ ಕಣ್ಣಲ್ಲಿ ನೀರಾಡಿತು. “ಅಪ್ಪ, ಈ ಪೊಟ್ಟಣದ ತುಂಬ ನಿನಗೆ ನನ್ನ ಸಿಹಿಮುತ್ತುಗಳಿವೆ. ರಾತ್ರಿಯಿಡೀ ನಿದ್ದೆಗೆಟ್ಟು ಅವುಗಳನ್ನು ಅದರಲ್ಲಿ ತುಂಬಿದ್ದೇನೆ’ ಎಂದಳು. ಮಗಳ ಮುಗ್ಧ ಮಾತುಗಳನ್ನು ಕೇಳಿ ಅಪ್ಪನ ಸಿಟ್ಟು ಜರ್ರನೆ ಇಳಿಯಿತು. ಅವಳನ್ನು ಬಾಚಿ ತಬ್ಬಿಕೊಂಡು ಮುದ್ದಾಡಿದ.

Advertisement

ಮತ್ತೆಂದೂ ಆತ ಮಗಳ ಮೇಲೆ ಸಿಟ್ಟು ಮಾಡಿಕೊಳ್ಳಲೇ ಇಲ್ಲ. ಕೆಲವು ದಿನಗಳ ಬಳಿಕ ಮಗಳು ಅಪಘಾತವೊಂದರಲ್ಲಿ ತೀರಿಕೊಂಡಳು. ಮಗಳು ಕೊಟ್ಟ ಉಡು ಗೊರೆ ಪೆಟ್ಟಿಗೆಯನ್ನು ಅಪ್ಪ ತನ್ನ ಹಾಸಿಗೆ ಪಕ್ಕ ದಲ್ಲೇ ಜೋಪಾನ ವಾಗಿ ಇಟ್ಟಿದ್ದಾನೆ. ಮಗಳ ನೆನಪಾದಾಗಲೆಲ್ಲ ಅದನ್ನು ತೆರೆಯುತ್ತಾನೆ. ಅವಳೇ ಬಂದು ತನ್ನ ಕೆನ್ನೆ ಮೇಲೆ ಸಿಹಿ ಮುತ್ತು ಕೊಟ್ಟಂತೆ ಕನಸು ಕಾಣುತ್ತಾನೆ.

ಸಿಟ್ಟಿನಲ್ಲಿ ಹೊಡೆದ ಮೊಳೆ
ಒಬ್ಬ ಯುವಕನಿಗೆ ಮೂಗಿನ ಮೇಲೆಯೇ ಸಿಟ್ಟು. ಆತನ ವರ್ತನೆಯಿಂದ ಬೇಸತ್ತ ಅಪ್ಪ, ಹೇಗಾದರೂ ಮಾಡಿ ಮಗನ ಸಿಟ್ಟು ತಣಿಸಬೇಕು ಎಂದು ನಿರ್ಧರಿಸಿದ. ಒಂದಷ್ಟು ಮೊಳೆಗಳು ಹಾಗೂ ಒಂದು ಸುತ್ತಿಗೆ ಹಿಡಿದುಕೊಂಡು ಮಗನ ಬಳಿ ಬಂದ. ಅವುಗಳನ್ನು ಆತನ ಕೈಗಿತ್ತು, “ನಿನಗೆ ಪ್ರತಿ ಬಾರಿ ಸಿಟ್ಟು ಬಂದಾಗಲೂ ಮನೆ ಮುಂದಿನ ಆವರಣ ಗೋಡೆಗೆ ಇದರಲ್ಲಿ ಒಂದು ಮೊಳೆಯನ್ನು ಪೂರ್ತಿಯಾಗಿ ಒಳಗೆ ಹೋಗುವಂತೆ ಹೊಡೆ’ ಎಂದು ಹೇಳಿದ.

ಮೊದಲ ದಿನವೇ ಮಗ 37 ಬಾರಿ ಮೊಳೆ ಹೊಡೆಯ ಬೇಕಾಯಿತು. ಗಟ್ಟಿಯಾದ ಗೋಡೆಗೆ ಅಷ್ಟೊಂದು ಮೊಳೆ ಹೊಡೆದ ಪರಿಣಾಮ ಸಾಕಷ್ಟು ಸುಸ್ತಾಯಿತು. ಇಂಥ ಸಲಹೆ ಕೊಟ್ಟ ಅಪ್ಪನ ಮೇಲೂ ಮುನಿಸಾಗಿ ಮತ್ತಷ್ಟು ಜೇರಾಗಿ ಬಡಿದ. ಒಂದೆರಡು ಪೆಟ್ಟುಗಳು ಕೈಮೇಲೂ ಬಿದ್ದು, ರಾತ್ರಿ ನೋವು ಹೆಚ್ಚಾಯಿತು. ನಿದ್ದೆಯೂ ಸರಿಯಾಗಿ ಬರಲಿಲ್ಲ. ಮೊಳೆ ಹೊಡೆಯುವುದಕ್ಕಿಂತ ಸಿಟ್ಟನ್ನು ನಿಯಂತ್ರಿಸುವುದೇ ಸುಲಭ ಎಂಬ ಜ್ಞಾನೋದಯ ಬೆಳಗಿನ ಜಾವ ಆಯಿತು. ದಿನಗಳು ಕಳೆದಂತೆ ಹೊಡೆಯುವ ಮೊಳೆಗಳ ಪ್ರಮಾಣ ಕ್ಷೀಣಸಿತು. ಕೊನೆಗೆ, ಸುಮಾರು ದಿನಗಳಿಂದ ತಾನು ಮೊಳೆ ಹೊಡೆಯುವ ಸಂದರ್ಭವೇ ಬರಲಿಲ್ಲ ಎನ್ನುವುದು ಅರಿವಿಗೆ ಬಂದು, ಇತ್ತೀಚೆಗೆ ತಾನು ಒಮ್ಮೆಯೂ ಸಿಟ್ಟು ಮಾಡಿಕೊಂಡಿಲ್ಲ ಎಂದು ಅಪ್ಪನಿಗೆ ಹೇಳಿದ.

“ಒಳ್ಳೆಯದು ಮಗನೇ. ಈಗ ನೀರು ಗೋಡೆಗೆ ಹೊಡೆದಿರುವ ಎಲ್ಲ ಮೊಳೆಗಳನ್ನೂ ಕಿತ್ತು ಬಿಡು’ ಎಂದು ಅಪ್ಪ ಹೇಳಿದ. ಮಗ ಹಾಗೆಯೇ ಮಾಡಿದ.

ಇಬ್ಬರೂ ಸೇರಿ ಗೋಡೆಯನ್ನು ನೋಡಿದರು. ಒಂದೂ ಮೊಳೆ ಉಳಿದಿರಲಿಲ್ಲ. ಆದರೆ, ಬಹಳ ಸುಂದರವಾಗಿದ್ದ ಆವರಣ ಗೋಡೆ ಮೊಳೆ ಹೊಡೆದ ಕಲೆಗಳಿಂದ ವಿಕಾರವಾಗಿತ್ತು. “ನಿನಗೆ ಈಗ ಸಿಟ್ಟು ಬರುತ್ತಿಲ್ಲ. ಆದರೆ, ಈವರೆಗೆ ಸಿಟ್ಟು ನಿನ್ನ ವ್ಯಕ್ತಿತ್ವದ ಮೇಲೆ ಬೀರಿರುವ ಪರಿಣಾಮಗಳನ್ನು ನೋಡು. ನಿನ್ನ ಸಿಟ್ಟು ಒಬ್ಬರಲ್ಲ ಒಬ್ಬರನ್ನು ಘಾಸಿಗೊಳಿಸಿದೆ. ಈ ಗಾಯವನ್ನು ಗುಣಪಡಿಸಲು ಸಾಧ್ಯವೇ?’ ಎಂದು ಅಪ್ಪ ಕೇಳಿದ. ಮಗ ತಲೆ ತಗ್ಗಿಸಿದ. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೇ ಬಾರದು ಎಂಬ ಮಾತಿದೆ. ಎಷ್ಟೋ ದುರ್ಘ‌ಟನೆಗಳು ಸಿಟ್ಟಿನ ಭರದಲ್ಲೇ ಸಂಭವಿಸುತ್ತವೆ. ಕೆಟ್ಟ ಮಾತುಗಳೂ ಬಂದು ಸಂಬಂಧಗಳು ಹಳಸುತ್ತವೆ. ಆ ಒಂದು ಕ್ಷಣ ನಾನು ಸಿಟ್ಟಿನ ಕೈಗೆ ಬುದ್ಧಿ ಕೊಡದೇ ಹೋಗಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ ಎಂಬ ಪಶ್ಚಾತ್ತಾಪ ಆಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ.

ಕೋಪದ ಕೈಗೆ ಬುದ್ಧಿ ಕೊಡಬೇಡಿ
ಸಿಟ್ಟು ಬಾರದವರು ಯಾರಿದ್ದಾರೆ? ಆದರೆ ಅಂಥ ಕೋಪ ನಮ್ಮನ್ನೇ ನಾಶ ಮಾಡುತ್ತದೆ. ಸಿಟ್ಟನ್ನು ನಿಯಂತ್ರಿಸಲು ಕಲಿತರೆ, ನಮ್ಮ ಸಿಟ್ಟು ಸಾತ್ವಿಕವಾಗಿದ್ದರೆ ಅದು ಯಾರ ಮೈಗೂ, ಮನಸ್ಸಿಗೂ ನೋವು ಮಾಡುವುದಿಲ್ಲ. ನಮ್ಮ ರಕ್ತದೊತ್ತಡವನ್ನು ಹೆಚ್ಚಿಸುವುದಿಲ್ಲ. ಒಂದು ಕ್ಷಣದ ಸಿಟ್ಟಿನಿಂದ ಪಾರಾದರೆ ನಾಲ್ಕು ದಿನಗಳ ವಿಷಾದ, ನೋವಿನಿಂದ ಪಾರಾದಂತೆಯೇ ಸರಿ. ಕೋಪದಲ್ಲಿದ್ದಾಗ ತುಟಿ ಬಿಚ್ಚದಿರಿ. ಯಾರಿಗೂ ಏನೂ ಅನ್ನದಿರಿ. ಸಾಧ್ಯವಾದರೆ ಆ ಸ್ಥಳದಿಂದ ಎದ್ದು ಹೋಗಿ ಅಥವಾ ಕುಳಿತಲ್ಲಿಯೇ ದೀರ್ಘ‌ ಉಸಿರನ್ನೆಳೆದುಕೊಂಡು ಒಂದರಿಂದ ಹತ್ತರ ತನಕ ಎಣಿಸಿ ಅಥವಾ ನಗು ಉಕ್ಕಿಸುವ ಹಾಸ್ಯ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ಆಗ ಸಮಾಧಾನ ತಾನಾಗಿಯೇ ಮೂಡುತ್ತದೆ. ಯೋಗ, ಧ್ಯಾನ, ನಡಿಗೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಯಿಂದ ಸಣ್ಣಪುಟ್ಟ ವಿಚಾರಗಳಿಗೂ ಸಿಟ್ಟಿಗೇಳುವುದನ್ನು ನಿಯಂತ್ರಿಸಲು ಸಾಧ್ಯ. ಕೋಪಗೊಳ್ಳುವು ದರಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಪರಿಹಾರ ಆಗುವುದಿಲ್ಲ. ಸಹನೆಯಿಂದ ಎಲ್ಲವನ್ನೂ ಸಾಧಿಸೋಣ.

  ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next