ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ ಸಾಂಗವಾಗಿ ನೆರವೇರಿದ ಬಳಿಕ ಇಬ್ಬರು ಹಿಂದೂ ಅರ್ಚಕರಿಗೆ ಮತ್ತು ಸಮಿತಿಯ ಸದಸ್ಯರೊಬ್ಬರಿಗೆ ಜಿಲ್ಲಾಡಳಿತ ಗನ್‌ಮ್ಯಾನ್ ನೀಡಿದೆ.
ದತ್ತ ಜಯಂತಿ ವಿಚಾರದಲ್ಲಿ ನ್ಯಾಯಾಲಯ ಹೇಳಿರುವುದು ಒಂದು. ಆದರೆ ದತ್ತಪೀಠ ವ್ಯವಸ್ಥಾಪನಾ ಸಮಿತಿ ಮಾಡಿರುವುದೇ ಇನ್ನೊಂದು ಎಂದು ಮುಸ್ಲಿಂ ಸಮುದಾಯದ ಕೆಲವರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಹಿಂದೂ ಅರ್ಚಕರಿಗೆ ಮತ್ತು ಸಮಿತಿಯ ಸದಸ್ಯ ಬಾಷಾ ಎಂಬುವರಿಗೆ ಗನ್‌ಮ್ಯಾನ್ ನೀಡಿದೆ.
ದತ್ತ ಜಯಂತಿ ಕಾರ್ಯಕ್ರಮದಲ್ಲಿ ದತ್ತಪೀಠದಲ್ಲಿ ಪೂಜಾ ವಿ ಧಿವಿಧಾನ ನೆರವೇರಿಸಲು ಅರ್ಚಕರಾದ ಡಾ|ಸಂದೀಪ್ ಶರ್ಮ ಮತ್ತು ಶೃಂಗೇರಿ ಕೆ.ಶ್ರೀಧರ್ ಅವರನ್ನು ನೇಮಿಸಲಾಗಿತ್ತು. ದತ್ತ ಜಯಂತಿ ಮುಗಿದಿದ್ದರೂ ಅರ್ಚಕರನ್ನು ಅಲ್ಲೇ ಇರಿಸಿಕೊಳ್ಳಲಾಗಿದೆ.
ಮುಸ್ಲಿಂ ಪೂಜಾ ಪದ್ಧತಿಗೆ ಅವಕಾಶ ನೀಡಿಲ್ಲ ಎಂದು ಮುಸ್ಲಿಂ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇಬ್ಬರು ಹಿಂದೂ ಅರ್ಚಕರಿಗೆ ಮತ್ತು ಆಡಳಿತ ಮಂಡಳಿ ಮುಸ್ಲಿಂ ಸದಸ್ಯ ಬಾಷಾಗೆ ಜಿಲ್ಲಾಡಳಿತ ಗನ್‌ಮ್ಯಾನ್ ನೀಡಿದೆ. ಬಾಷಾ ಅವರ ಮನೆ ಬಳಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ.