ಬೆಂಗಳೂರು: ಲೋಕ್ಯಾಂಟೋ ಎಂಬ ಡೇಟಿಂಗ್ ಆ್ಯಪ್ ಬಳಸುವವರನ್ನು ಟಾರ್ಗೆಟ್ ಮಾಡಿ ಯುವತಿಯ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ನಾಗೇಶ್ ಮತ್ತು ಮಹಾಲಕ್ಷ್ಮೀ ಲೇಔಟ್ ನಿವಾಸಿ ನದೀಂ ಪಾಷ ಬಂಧಿ ತರು. ಇಬ್ಬರು ಆಟೋ ಚಾಲಕರಾಗಿದ್ದು, ಇತ್ತೀಚೆಗೆ ಯುವಕನೊಬ್ಬನನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಲೋಕ್ಯಾಂಟೋ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದು, ಯುವತಿಯ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಬಳಿಕ ಆಯ್ದ ಯುವಕರಿಗೆ ರಿಕ್ವಿಸ್ಟ್ ಕಳುಹಿಸಿ ಮೆಸೇಜ್ ಕಳುಹಿಸುತ್ತಿದ್ದರು. ಬಳಿಕ ಆತ್ಮೀಯತೆ ಬೆಳೆಸುತ್ತಿದ್ದರು. ಯುವಕ ತಮ್ಮ ಬಲೆಗೆ ಬಿದ್ದಿದ್ದಾನೆ ಎಂದು ತಿಳಿಯುತ್ತಿದ್ದಂತೆ ಭೇಟಿ ನೆಪದಲ್ಲಿ ಲೋಕೇಷನ್ ಕಳುಹಿಸಿ ಕರೆಸಿಕೊಳ್ಳುತ್ತಿದ್ದರು. ಯುವತಿ ಬರುತ್ತಾಳೆ ಎಂದು ನಂಬಿ ಹೋಗುತ್ತಿದ್ದ ಯುವಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಗೌತಮ್ ಎಂಬ ಯುವಕನೊಬ್ಬನನ್ನು ಯುವತಿಯ ಸೋಗಿನಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿಗಳು, ಆ.21ರ ರಾತ್ರಿ 8 ಗಂಟೆ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯ 5ನೇ ಮುಖ್ಯರಸ್ತೆ ಬಳಿ ಕರೆಸಿಕೊಂಡಿದ್ದರು. ಬಳಿಕ ಆತನನ್ನು ಬಲವಂತ ವಾಗಿ ಆಟೋದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಾಕು ತೋರಿಸಿ, ಆತನ ಬಳಿಯಿದ್ದ 2 ಸಾವಿರ ರೂ.ನಗದು ಮತ್ತು ಆನ್‌ಲೈನ್ ಮೂಲಕ 60 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು ಸುಲಿಗೆ ಮಾಡಿದ್ದರು. ಬಳಿಕ ಹೆದರಿಸಿ ಪರಾರಿಯಾಗಿದ್ದರು. ಈ ಸಂಬಂಧ ಗೌತಮ್ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು.
ದೂರುದಾರನ ಫೋನ್ ಪೇ ಮೂಲಕ ಹಣ ಹಾಕಿದ್ದ ಆರೋಪಿಗಳ ಯುಪಿಐ ವಿವರ ಮತ್ತು ಮೊಬೈಲ… ಸಂಖ್ಯೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 60 ಸಾವಿರ ರೂ. ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತಿ ಮಾಡಲಾಗಿದೆ. ಪ್ರಕರಣದ ಮತ್ತೂಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.