Advertisement
ಮಲ್ಲಾರು ಗ್ರಾಮದ ಕೊಂಬ ಗುಡ್ಡೆಯ ಸಾದಿಕ್ ತಮ್ಮ ಮನೆಯ ವರಾಂಡದಲ್ಲಿ ಮೂರು ಖರ್ಜೂರದ ಗಿಡಗಳನ್ನು ಬೆಳೆಸಿದ್ದಾರೆ. ಎರಡು ಗಿಡಗಳು ಈಗಾಗಲೇ ಫಲ ನೀಡು ತ್ತಿವೆ. ಈಗ ಇದೇ ಗ್ರಾಮದ ಇನ್ನೆರಡು ಕುಟುಂಬಗಳು ಖರ್ಜೂರ ಬೆಳೆಗೆ ಆಸಕ್ತಿ ತೋರಿವೆ. ಕಾಪುವಿನ ಉದ್ಯಮಿಗಳಾದ ನಜೀರ್ ಅಹಮದ್ 3 ಗಿಡಗಳನ್ನು ನೆಟ್ಟಿದ್ದರೆ, ಮತ್ತೋರ್ವ ಉದ್ಯಮಿ ಮಹಮ್ಮದ್ ಅಸ್ಲಂ ಖಾಝಿ ಅವರು 8 ಗಿಡಗಳನ್ನು ನೆಟ್ಟಿದ್ದಾರೆ.
ಅರಬ್ ರಾಷ್ಟ್ರಕ್ಕೆ ತೆರಳಿದ್ದ ಸಂದರ್ಭ ಸಂಬಂಧಿಕರು ತಿಳಿಸಿದ ಮೇರೆಗೆ ಮಹಮ್ಮದ್ ಸಾದಿಕ್ ಖರ್ಜೂರ ಗಿಡವನ್ನು ನೆಡಲು ಚಿಂತನೆ ನಡೆಸಿ, ಆಂಧ್ರಪ್ರದೇಶದ ಧರ್ಮಪುರಿಯಿಂದ 10 ವರ್ಷದ ಗಿಡವನ್ನು 10 ಸಾವಿರ ರೂ. ಕೊಟ್ಟು ತರಿಸಿದರು. ಈ ಗಿಡಗಳು ನೆಟ್ಟ ವರ್ಷದೊಳಗೆ ಫಲ ನೀಡಿರುವುದು ವಿಶೇಷ. ಸುಮಾರು 15ರಿಂದ 20 ಕೆಜಿ ಇಳುವರಿ ಪ್ರಥಮ ವರ್ಷದಲ್ಲೇ ದೊರೆತಿದೆ. ಆದ ಕಾರಣ ಸಾದಿಕ್ ತಮ್ಮ ಪರಿಸರದ ಮನೆಗಳಿಗೆ ಅವುಗಳನ್ನು ಹಂಚುತ್ತಿದ್ದಾರೆ. ಹೂ ಬಿಟ್ಟ ಬಳಿಕ ವಿಶೇಷ ಆರೈಕೆ
ಗಿಡಗಳಲ್ಲಿ ಹೂವು ಬಿಟ್ಟಾಗ ದುಬಾೖ ಯಲ್ಲಿರುವ ಸಂಬಂಧಿಕರನ್ನು ಮತ್ತು ಪರಿಚಯದ ನರ್ಸರಿಯವರನ್ನು ಸಂಪರ್ಕಿಸಿ ಅವರಿಗೆ ಈ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಅವರ ಸಲಹೆಯಂತೆ ಆರೈಕೆ ಮಾಡಿದ್ದೇನೆ. ಎರಡು ವಾರಗಳ ಬಳಿಕ ಫಸಲು ಬರಲು ಆರಂಭವಾಗಿದ್ದು, ಈಗ ಹೇರಳ ಹಣ್ಣುಗಳನ್ನು ನೋಡಿ ಖುಷಿ ಮತ್ತು ಅಚ್ಚರಿ ಉಂಟಾಗಿದೆ ಎನ್ನುತ್ತಾರೆ ಕರಾವಳಿ ಮಣ್ಣಿನಲ್ಲಿ ಖರ್ಜೂರ ಬೆಳೆದ ಮಹಮ್ಮದ್ ಸಾದಿಕ್.
Related Articles
ಖರ್ಜೂರ ಉಷ್ಣ ವಲಯದ ಬೆಳೆ. ಹೂ ಬಿಡುವಾಗ, ಕಾಯಿ ಕಚ್ಚುವಾಗ ಹೆಚ್ಚು ಉಷ್ಣ ಪರಿಸ್ಥಿತಿ ಇರಬೇಕು. ಹಲವು ಬಗೆಯ ಮಣ್ಣುಗಳಲ್ಲಿ ಬೆಳೆಯ ಬಲ್ಲವಾದರೂ ನೀರು ಮತ್ತು ಗಾಳಿ ಸರಾಗವಾಗಿ ಚಲಿಸಬಲ್ಲಂಥ ಪ್ರದೇಶ ಬೇಕು. ಬೇರುಗಳು ನೆಲದಲ್ಲಿ 6 ಅಡಿ – 9 ಅಡಿಯಷ್ಟು ಆಳಕ್ಕೆ ಇಳಿಯುವುದರಿಂದ ಅಷ್ಟು ಆಳದವರೆಗೆ ತೇವವಿರುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಸಾದಿಕ್.
Advertisement
ಪ್ರವಾದಿ ಪ್ರಸಾದ ರೂಪದಲ್ಲಿ ಸ್ವೀಕಾರಖರ್ಜೂರ ಹಣ್ಣು ಪ್ರವಾದಿಯವರ ಇಷ್ಟದ ಹಣ್ಣಾಗಿದ್ದು ಹಿಂದೂಗಳ ತುಳಸಿ ಗಿಡದಂತೆಯೇ ಮುಸ್ಲಿಮರ ಪವಿತ್ರ ಗಿಡ. ಇದನ್ನು ಮನೆಯ ವರಾಂಡದಲ್ಲಿ ನೆಟ್ಟು, ಪ್ರತೀ ದಿನ ಅದರ ದರ್ಶನ ಮಾಡಬೇಕೆಂಬ ಚಿಂತನೆಯೊಂದಿಗೆ ಖರ್ಜೂರ ಗಿಡವನ್ನು ನೆಡಲಾಗಿತ್ತು. ಆದರೆ ಗಿಡ ಬೆಳೆದು ಹೂ ಬಿಟ್ಟು ಫಲ ನೀಡಿರುವುದು ತುಂಬಾ ಸಂತೋಷವಾಗಿದೆ.
– ಮಹಮ್ಮದ್ ಸಾದಿಕ್ ರಾಕೇಶ್ ಕುಂಜೂರು