ನ್ಯೂಯಾರ್ಕ್: ಫೇಸ್ ಬುಕ್ ಒಡೆತನದ ಇನ್ ಸ್ಟಾಗ್ರಾಂ. ಚೀನಾ ಮೂಲದ ಟಿಕ್ ಟಾಕ್ ಹಾಗೂ ಗೂಗಲ್ ಒಡೆತನದ ಯೂಟ್ಯೂಬ್ ನ ಸುಮಾರು 235 ಮಿಲಿಯನ್ ಬಳಕೆದಾರರ ಡೇಟಾವನ್ನು ಡಾರ್ಕ್ ವೆಬ್ ನಲ್ಲಿ ಸೋರಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಮಾತ್ರವಲ್ಲದೆ ಖಾಸಗಿ ಪ್ರೊಫೈಲ್ ಗಳನ್ನು ಕೂಡ ಸೋರಿಕೆ ಮಾಡಲಾಗಿದೆ. ಭದ್ರತಾ ಸಂಶೋಧಕರ ಪ್ರಕಾರ ಈ ಡೇಟಾ ಸೋರಿಕೆಯ ಹಿಂದೆ ಅಸುರಕ್ಷಿತ ಡೇಟಾಬೇಸ್ ಇದೆ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರ ದತ್ತಾಂಶವನ್ನು ಕಾನೂನುಬದ್ಧವಾದ ಮಾರಾಟ ಮಾಡುವ ಕಂಪೆನಿ ಸೋಶಿಯಲ್ ಡೇಟಾವು, ದತ್ತಾಂಶ ಬಳಸಲು ಪಾಸ್ ವರ್ಡ್ ಮತ್ತು ದೃಢಿಕರಣ ಪ್ರಕ್ರಿಯೆಯನ್ನೂ ಹೊಂದಿಲ್ಲದೆ ಇರುವುದು ಹ್ಯಾಕರ್ ಗಳಿಗೆ ದತ್ತಾಂಶ ಸುಲಭವಾಗಿ ದೊರೆಯುವಂತೆ ಮತ್ತು ಡಾರ್ಕ್ ವೆಬ್ ಸೈಟ್ ಗಳಲ್ಲಿ ಸಂಗ್ರಹಿಸಿಡುವಂತೆ ಮಾಡಿದೆ.
ಬಳಕೆದಾರರ ವ್ಯೆಯಕ್ತಿಕ ಮಾಹಿತಿ, ಯೂಸರ್ ನೇಮ್, ಅಧಿಕೃತವಾಗಿ ನೋಂದಣಿ ಮಾಡಿರುವ ಹೆಸರು, ಅಕೌಂಟ್ ಡಿಸ್ಕ್ರಿಪ್ಷನ್, ಅಕೌಂಟ್ ಉದ್ಯಮ ಅಥವಾ ಜಾಹೀರಾತು ವಿಭಾಗಕ್ಕೆ ಸೇರಿದೆಯೇ ಎಂಬ ಮಾಹಿತಿ, ಫಾಲೋವರ್ ಎಂಗೇಜ್ ಮೆಂಟ್ ಅಂಕಿಅಂಶ, ಬಳಕೆದಾರರ ವಯಸ್ಸು, ಲೈಕ್ ಗಳು, ಲೊಕೇಶನ್, ಇ ಮೇಲ್, ಕೊನೆಯ ಪೋಸ್ಟ್ ಮಾಡಿದ ಸಮಯ, ಮೊಬೈಲ್ ಫೋನ್ ಸಂಖ್ಯೆ ಸೇರಿದಂತೆ ಹಲವಾರು ಮಾಹಿತಿಗಳು ಸೋರಿಕೆಯಾಗಿವೆ.
ಬಾಬ್ ಡಯಾಚೆಂಕೊ ಎಂಬ ಸೈಬರ್ ಭದ್ರತಾ ತಂಡ ದತ್ತಾಂಶ ಸೋರಿಕೆಯಾಗಿರುವುದನ್ನು ಪತ್ತೆಹಚ್ಚಿದೆ. ಇನ್ ಸ್ಟಾಗ್ರಾಂ ನ 19,23,92,954, ಟಿಕ್ ಟಾಕ್ ನ, 4,21,29,799 ಹಾಗೂ ಯೂಟ್ಯೂಬ್ ನ 39,55,892 ದತ್ತಾಂಶಗಳು ಮೂರು ಪ್ರತ್ಯೇಕ ಐಪಿವಿ6 ಅಡ್ರೆಸ್ ಗಳಲ್ಲಿ ಹೋಸ್ಟ್ ಮಾಡಲಾದ ಬಹಿರಂಗಪಡಿಸದ ವೆಬ್ ಸೈಟ್ ಗಳಲ್ಲಿ ದಾಖಲಾಗಿವೆ ಎಂದು ಪತ್ತೆಮಾಡಲಾಗಿದೆ.
ಈ ದತ್ತಾಂಶಗಳು ಸೈಬರ್ ಅಪರಾಧಿಗಳಿಗೆ ವರದಾನವಾಗಿದ್ದು ಮಾಹಿತಿಗಳನ್ನು ಕಲೆಹಾಕಿ ಹಣದ ಬೇಡಿಕೆ ಇಡಲು ನೆರವಾಗುತ್ತದೆ ಎಂದು ಟೆಕ್ ತಂತ್ರಜ್ಞ ಪೌಲ್ ಬಿಶಾಫ್ ಎಚ್ಚರಿಸಿದ್ದಾರೆ.
ಸಂಶೋಧಕರ ಪ್ರಕಾರ, ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ನಿಂದ 2018ರಲ್ಲಿ ನಿಷೇಧಕ್ಕೊಳಗಾಗಿದ್ದ ಡೀಪ್ ಸೋಶಿಯಲ್ ಎಂಬ ಸಂಸ್ಥೆ ಈ ರೀತಿ ದತ್ತಾಂಶ ಸೋರಿಕೆ ಮಾಡಿದೆ ಎಂದಿದ್ದಾರೆ.