ನ್ಯೂಯಾರ್ಕ್: ಜಗತ್ತಿನಾದ್ಯಂತ ಇರುವ ಸುಮಾರು 50 ಕೋಟಿ ಮಂದಿಯ ಫೇಸ್‌ಬುಕ್ ಮಾಹಿತಿ ವೆಬ್‌ಸೈಟ್ ಒಂದರಲ್ಲಿ ಅಪ್‌ಲೋಡ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಹ್ಯಾಕರ್‌ಗಳಿಗೆ ಬಹಳಷ್ಟು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹೇಳಿಕೆ ಬಿಡುಗಡೆ ಮಾಡಿದ ಫೇಸ್‌ಬುಕ್, “ಇದು 2019ರಲ್ಲಿ ನಡೆದ ಪ್ರಕರಣ. ಜತೆಗೆ ಈ ಬಗ್ಗೆ ಏನು ಕ್ರಮ ಕೈಗೊಳ್ಳಬೇಕಾಗಿತ್ತೋ, ಅದನ್ನು 2019ರ ಆಗಸ್ಟ್‌ನಲ್ಲಿ ಕೈಗೊಂಡಿದ್ದವು’ ಎಂದು ಸ್ಪಷ್ಟನೆ ನೀಡಿದೆ.
ಫೇಸ್‌ಬುಕ್‌ನ ಹೇಳಿಕೆಯ ಹೊರತಾಗಿಯೂ ಸೈಬರ್ ರಕ್ಷಣಾ ವ್ಯವಸ್ಥೆಯ ವಿಶೇಷಜ್ಞರು ಹೇಳುವ ಪ್ರಕಾರ ಜಾಲತಾಣಗಳು ಸಂಗ್ರಹಿಸುವ ವೈಯಕ್ತಿಕ ವಿವರಗಳು ಸುರಕ್ಷಿತವಾಗಿ ಇರುವುದಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾದಂತಾಗಿದೆ ಎನ್ನುತ್ತಾರೆ.
ಇದನ್ನೂ ಓದಿ :ಮನೆಕೆಲಸದವಳ ಮೇಲೆ ಪ್ರೀತಿ, ತನ್ನ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಪತಿ
“ಬ್ಯುಸಿನೆಸ್ ಇನ್‌ಸೈಡರ್’ನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ 106 ದೇಶಗಳ ಗ್ರಾಹಕರ ಹೆಸರು, ವಿಳಾಸ, ಫೋನ್ ನಂಬರ್, ಸ್ಥಳ, ಹುಟ್ಟಿದ ದಿನಾಂಕ, ಇ-ಮೇಲ್ ವಿವರಗಳು ಸಾರ್ವಜನಿಕಗೊಂಡಿವೆ. ವೈಯಕ್ತಿಕ ಮಾಹಿತಿ ಸುರಕ್ಷತೆಯ ಬಗ್ಗೆ ಫೇಸ್‌ಬುಕ್ ವಿರುದ್ಧ ಹಲವು ಆರೋಪಗಳನ್ನು ಎದುರಿಸುತ್ತಾ ಬಂದಿದೆ.
2018ರಲ್ಲಿ ಜಾಲತಾಣ ಫೋನ್ ನಂಬರ್ ಮೂಲಕ ಇತರರ ವಿವರಗಳನ್ನು ಹುಡುಕುವ ವ್ಯವಸ್ಥೆ ರದ್ದುಗೊಳಿಸಿತ್ತು.