Advertisement

ದೇವ್ರಂಥಾ ಮನುಷ್ಯ ಕೆಂಡದಂಥಾ ಮಾತು

10:43 AM Feb 02, 2018 | Team Udayavani |

“ಸ್ಕಾನಿಂಗ್‌ ಮಾಡೋವಾಗ ಮಗು ಹೇಗಿದೆ, ಎಷ್ಟು ಬೆಳದಿದೆ ಅಂತ ಹೇಳ್ತಾರೆ ಹೊರತು, ಮಗು ಗಂಡಾ, ಹೆಣ್ಣಾ ಅಂತ ಹೇಳ್ತಾರಾ ಸಾರ್‌? ಅದು ಕ್ರೈಮ್‌ ಅಲ್ವಾ ಸಾರ್‌?’ ಬಹಳ ಮುಗ್ಧವಾಗಿ ಕೇಳಿದರು ಪ್ರಥಮ್‌. ಅದಕ್ಕೂ ಮುನ್ನ “ದೇವ್ರಂಥಾ ಮನುಷ್ಯ’ ಚಿತ್ರದ ಕಥೆ ಏನು, ಚಿತ್ರದಲ್ಲಿ ದೇವ್ರಂಥಾ ಮನುಷ್ಯ ಏನೆಲ್ಲಾ ಮಾಡ್ತಾನೆ, ರಾತ್ರಿ ಹೊತ್ತು ಯಾಕೆ ಸಿಗಬಾರದು ಅಂತೆಲ್ಲಾ ಹಲವು ಪ್ರಶ್ನೆಗಳು ಬಂದಿತ್ತು. ಇನ್ನೇನು ಚಿತ್ರ ಬಿಡುಗಡೆಯಾಗುತ್ತದೆ, ಆಗ ತನ್ನಿಂತಾನೇ ಗೊತ್ತಾಗತ್ತೆ ಎಂದು ಚಿತ್ರತಂಡದವರು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಪ್ರಶ್ನೆಗಳ ಸುರಿಮಳೆ ಮುಂದುವರೆಯುತ್ತಿದ್ದಂತೆಯೇ, ಪ್ರಥಮ್‌ ಎಂಟ್ರಿ ಕೊಟ್ಟು, ಹೀಗೆ ಹೇಳಿ ಸುಮ್ಮನಾದರು.

Advertisement

ಅಂದಹಾಗೆ, ಪ್ರಥಮ್‌ ಅಭಿನಯದ “ದೇವ್ರಂಥಾ ಮನುಷ್ಯ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಚಿತ್ರದ ಕುರಿತು ಮಾತನಾಡುವುದಕ್ಕೆ ಚಿತ್ರತಂಡದವರು ಬಂದಿದ್ದರು. ಪ್ರಥಮ್‌ ಜೊತೆಗೆ ನಾಯಕಿಯರಾದ ವೈಷ್ಣವಿ ಮೆನನ್‌, ಶ್ರುತಿ ರಾಜ್‌, ನಿರ್ದೇಶಕ ಕಿರಣ್‌ ಶೆಟ್ಟಿ, ನಿರ್ಮಾಪಕರಾದ ಮಂಜುನಾಥ್‌, ತಿಮ್ಮರಾಜು ಮುಂತಾದವರು ವೇದಿಕೆಯ ಮೇಲಿದ್ದು, ಚಿತ್ರದ ಬಗ್ಗೆ ಮಾತನಾಡಿದರು.

ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ನಿರ್ದೇಶಕ ಕಿರಣ್‌ ಶೆಟ್ಟಿ. ಇದು ಅವರಿಗೆ ಮೊದಲ ಚಿತ್ರ. “ಚಿತ್ರದ ಹಾಡುಗಳನ್ನು ಕೇಳಿ ಮುಖ್ಯಮಂತ್ರಿಗಳು ಸಹ ಮೆಚ್ಚಿದ್ದಾರೆ. ಚಿತ್ರದಲ್ಲಿ ಪ್ರಥಮ್‌ ಅವರ ಪಾತ್ರ ಬಹಳ ಚೆನ್ನಾಗಿದೆ. ಕಾಮಿಡಿಯಾದರೂ ಅವರ ಪಾತ್ರಕ್ಕೆ ಹಲವು ಶೇಡ್‌ಗಳಿವೆ. ಹತ್ತು ನಿಮಿಷಕ್ಕೊಮ್ಮೆ ಅವರ ಪಾತ್ರ ಬದಲಾಗುತ್ತಿರುತ್ತದೆ. ಈ ಚಿತ್ರದಲ್ಲಿ ನೀವು ಪ್ರಥಮ್‌ ಅವರ 10 ಅವತಾರಗಳನ್ನು ನೋಡಬಹುದು’ ಎನ್ನುತ್ತಾರೆ 
ಕಿರಣ್‌ ಶೆಟ್ಟಿ.

ಚಿತ್ರದ ಕಥೆಯೇನು ಎಂದರೆ, ರಿಚ್‌ ಅಪ್ಪನ ಪೆಚ್ಚು ಮಗ ಎಂಬ ಉತ್ತರ ಅವರಿಂದ ಬರುತ್ತದೆ. “ಇಲ್ಲಿ ನಾಯಕನಿಗೆ ಜವಾಬ್ದಾರಿ ಇಲ್ಲ. ಅನುಭವದ ಮೂಲಕ ಜವಾಬ್ದಾರಿ ಹೆಚ್ಚಾಗುತ್ತದೆ. ಇಲ್ಲಿ ನನ್ನ ನಿಜ ಜೀವನಕ್ಕೂ, ಪಾತ್ರಕ್ಕೂ ಸಂಬಂಧ ಇಲ್ಲ. ನಿಜ ಜೀವನದಲ್ಲಿ ನಾನು ಸಿಗರೇಟು, ಹೆಂಡ ಮುಟ್ಟುವುದಿಲ್ಲ. ಇಲ್ಲಿ ಕಥೆಗೆ ತಕ್ಕಂತೆ ಮುಟ್ಟಬೇಕಾಗುತ್ತದೆ’ ಎಂದರು ಪ್ರಥಮ್‌.

ಹತ್ತು ಅವತಾರಗಳೇನು ಎಂಬ ಪ್ರಶ್ನೆ ಬಂದಾಗ, “ಎಲ್ಲಾ ರಸಗಳೂ ಒಂದೊಂದು ಘಟ್ಟದಲ್ಲಿ ಬರುತ್ತಾ ಹೋಗುತ್ತದೆ. ಒಮ್ಮೆ ಮಜವಿದ್ದರೆ, ಇನ್ನೊಮ್ಮೆ ಎಮೋಷನ್‌ ಎಲ್ಲವೂ ಈ ಪಾತ್ರದಲ್ಲಿದೆ. ಇಲ್ಲಿ ನನಗಿಂತ ನಾಯಕಿಯರು ಬಹಳ ಚೆನ್ನಾಗಿ ಮಾಡಿದ್ದಾರೆ. ಅವರಿಂದ ಸಾಕಷ್ಟು ಕಲಿತೆ. ಇನ್ನು ಈ ಚಿತ್ರದ ನಿಜವಾದ ನಾಯಕರೆಂದರೆ ಸುಚೇಂದ್ರ ಪ್ರಸಾದ್‌ ಮತ್ತು ತಬಲಾ ನಾಣಿ’ ಎಂದರು ಪ್ರಥಮ್‌. ನಂತರ ಇಬ್ಬರು ನಾಯಕಿಯರು, ಇಬ್ಬರು ನಿರ್ಮಾಪಕರು ಎರಡೆರೆಡು ಮಾತುಗಳನ್ನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next