Advertisement
ಎರಡು-ಮೂರು ಬಾರಿ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದರೂ, “ದಶರಥ’ ಪ್ರೇಕ್ಷಕರಿಗೆ ನಿಗದಿತ ದಿನಗಳಂದು ದರ್ಶನ ಕೊಡಲೇ ಇಲ್ಲ. ಹಾಗಾದರೆ “ದಶರಥ’ ತೆರೆಗೆ ಬರಲು ಸಾಧ್ಯವಾಗದಿರುವುದಕ್ಕೆ ಕಾರಣಗಳೇನು ಎನ್ನುವುದರ ಬಗ್ಗೆ ಚಿತ್ರತಂಡ ಮತ್ತು ಗಾಂಧಿನಗರದಿಂದ ಒಂದಷ್ಟು ಮಾತುಗಳು ಕೇಳಿ ಬರುತ್ತಿರುವುದಂತೂ ಸುಳ್ಳಲ್ಲ. ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಎಂ.ಎಸ್.ರಮೇಶ್ ಮಾತನಾಡಿದ್ದು, ಈ ಬಾರಿ “ದಶರಥ’ನ ದರ್ಶನ ಪಕ್ಕಾ ಎನ್ನುತ್ತಿದ್ದಾರೆ.
Related Articles
Advertisement
“ದಶರಥ’ ತಡವಾಗಿರುವುದಕ್ಕೆ ನಿರ್ದೇಶಕರು ಏನಂತಾರೆ?: “ದಶರಥ’ ಚಿತ್ರದ ನಿರ್ದೇಶಕ ಎಂ.ಎಸ್ ರಮೇಶ್ “ದಶರಥ’ನ ಬಿಡುಗಡೆ ತಡವಾಗಿರುವುದಕ್ಕೆ ಹಲವು ಕಾರಣಗಳನ್ನು ಮುಂದಿಡುತ್ತಾರೆ. ಈ ಬಗ್ಗೆ ಮಾತನಾಡುವ ಎಂ.ಎಸ್ ರಮೇಶ್, “ಚಿತ್ರರಂಗದಲ್ಲಿ ಒಂದು ಚಿತ್ರದ ಬಿಡುಗಡೆ ವೇಳೆ ಈ ಥರ ಆಗೋದು ಸಹಜ.
ನಾವು ಅಂದುಕೊಂಡ ಪ್ರಕಾರ ಇಷ್ಟೊತ್ತಿಗೆ “ದಶರಥ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಹಣಕಾಸು ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆಗಳು ಎದುರಾದ ಕಾರಣ ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಬೇಕಾಯಿತು. ಈಗ ನಮ್ಮ ಅನುಕೂಲ ನೋಡಿಕೊಂಡು ಚಿತ್ರದ ಬಿಡುಗಡೆ ಮಾಡುತ್ತಿದ್ದೇವೆ.
ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಅಂದುಕೊಂಡ ಸಮಯಕ್ಕೆ ರಿಲೀಸ್ ಆಗದಿದ್ದರೆ, ಅವರಿಗೂ ಅವರ ಅಭಿಮಾನಿಗಳಿಗೂ ಬೇಸರವಾಗೋದು ಸಹಜ. ಆದರೆ ಉದ್ದೇಶಪೂರ್ವಕವಾಗಿ ಚಿತ್ರದ ರಿಲೀಸ್ ವಿಳಂಬ ಮಾಡಿಲ್ಲ. ಹಾಗಾಗಿ “ದಶರಥ’ನ ರಿಲೀಸ್ ತಡವಾಗಿರುವುದಕ್ಕೆ ಅವರಲ್ಲಿ ನಾವು ವಿಷಾದಿಸಿ, ಕ್ಷಮೆ ಕೇಳಬಹುದುದೇ ಹೊರತು ಅದಕ್ಕಿಂತ ಹೆಚ್ಚಾಗಿ ಏನೂ ಮಾಡಲಾಗದು’ ಎನ್ನುವ ಉತ್ತರ ನೀಡುತ್ತಾರೆ.
ಜು. 26 “ದಶರಥ’ದರ್ಶನ ಪಕ್ಕಾ: ಇನ್ನು “ದಶರಥ’ ಚಿತ್ರದ ಬಿಡುಗಡೆಯನ್ನು ಮತ್ತೂಮ್ಮೆ ಘೋಷಿಸಿರುವ ಚಿತ್ರತಂಡ, ಇದೇ ಜುಲೈ 26ರಂದು “ದಶರಥ’ನನ್ನು ತೆರೆಮೇಲೆ ತರುತ್ತಿದ್ದೇವೆ ಎಂದಿದೆ. ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ದಶರಥ’ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು ಈ ಬಾರಿ “ದಶರಥ’ನ ದರ್ಶನ ಪಕ್ಕಾ ಎನ್ನುತ್ತಾರೆ ನಿರ್ದೇಶಕ ಎಂ.ಎಸ್ ರಮೇಶ್.
ಒಟ್ಟಾರೆ ಪ್ರೇಮಲೋಕದ ಸರದಾರನನ್ನು ತೆರೆಮೇಲೆ ನೋಡಿ ಬಹಳ ಸಮಯವಾಯಿತು ಎನ್ನುತ್ತಿದ್ದ ಅಭಿಮಾನಿಗಳ ಮುಂದೆ ರವಿಚಂದ್ರನ್ “ದಶರಥ’ ರೂಪದಲ್ಲಿ ತೆರೆಮೇಲೆ ದರ್ಶನ ಕೊಡೋದಕ್ಕೆ ರೆಡಿಯಾಗಿದ್ದು, “ದಶರಥ’ ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತಾನೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.