Advertisement

ದಶರಥನ ಸಾರ್ಥಕ ಕಾನೂನು ಹೋರಾಟ

09:24 AM Jul 28, 2019 | Nagendra Trasi |

“ಮನುಷ್ಯನನ್ನು ಸೋಲಿಸುವುದಕ್ಕಿಂತ ಮನುಷ್ಯತ್ವವನ್ನು ಗೆಲ್ಲಬೇಕು… ‘- ಹೀಗೆ ಹೇಳುವ ಮೂಲಕ ಆ ಲಾಯರ್‌ ದಶರಥ ಪ್ರಸಾದ್‌, ವಿಚ್ಛೇದನ ಕೋರಿ ನ್ಯಾಯಾಯಲದ ಮೊರೆ ಹೋಗಿದ್ದ ದಂಪತಿಯನ್ನು ಪುನಃ ಒಟ್ಟಿಗೆ ಬಾಳುವಂತೆ ಮಾಡುತ್ತಾನೆ. ಆ ಕೇಸ್‌ನಂತೆ ಹಲವಾರು ಕೇಸ್‌ ಗೆದ್ದಿರುವ ದಶರಥ ಪ್ರಸಾದ್‌, ಒಬ್ಬ ಪ್ರಾಮಾಣಿಕ ಮತ್ತು ಅಷ್ಟೇ ಮಾನವೀಯತೆ ಹೊಂದಿರುವ ಲಾಯರ್‌. “ದಶರಥ’ ಸಿನಿಮಾ ನೋಡಿದವರಿಗೆ ಹಾಗೊಮ್ಮೆ “ದೃಶ್ಯ’ ಚಿತ್ರ ನೆನಪಾದರೂ ಅಚ್ಚರಿ ಇಲ್ಲ.

Advertisement

ಅಲ್ಲಿ ರಾಜೇಂದ್ರ ಪೊನ್ನಪ್ಪ ಲಾಯರ್‌ ಅಲ್ಲದಿದ್ದರೂ, ತನ್ನ ಮಗಳ ಪರ ನಿಂತು, ಕುಟುಂಬಕ್ಕಾಗಿ ಹೋರಾಡಿ ನ್ಯಾಯ ಗೆಲ್ಲುತ್ತಾನೆ. ಇಲ್ಲಿ ಪಕ್ಕಾ ನ್ಯಾಯಕ್ಕಾಗಿ ಹೋರಾಡುವ ಲಾಯರ್‌ ಆಗಿ, ತನ್ನ ಮಗಳ ಪರ ನಿಂತು ನ್ಯಾಯ ಗೆಲ್ಲುತ್ತಾನೆ. ಅಷ್ಟಕ್ಕೂ ದಶರಥ ಪ್ರಸಾದ್‌, ಮಗಳ ಪರ ಯಾಕಾಗಿ ಹೋರಾಡುತ್ತಾನೆ, ಏನೆಲ್ಲಾ ಸಾಕ್ಷ್ಯಗಳನ್ನು ನ್ಯಾಯಾಧೀಶರ ಮುಂದಿಡುತ್ತಾನೆ ಅನ್ನೋದೇ ಚಿತ್ರದ ರೋಚಕತೆ.

ನಿರ್ದೇಶಕ ಎಂ.ಎಸ್‌.ರಮೇಶ್‌ ಬಹಳ ದಿನಗಳ ನಂತರ ಒಂದೊಳ್ಳೆಯ ಕಥೆ ಹಿಡಿದು ಮನಸ್ಸಿಗೆ ನಾಟುವ, ಅಲ್ಲಲ್ಲಿ ತೀವ್ರವಾಗಿ ಕಾಡುವ ಮತ್ತು ಪ್ರತಿ ಪಾತ್ರಗಳನ್ನೂ ಪ್ರೀತಿಸುವಷ್ಟರ ಮಟ್ಟಿಗೆ ಚಿತ್ರ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ರವಿಚಂದ್ರನ್‌ ಅವರಿಗೆ ಹೇಳಿ ಮಾಡಿಸಿದ ಪಾತ್ರ ಕೊಡುವ ಮೂಲಕ ಇನ್ನಷ್ಟು ಇಷ್ಟವಾಗಿಸಿದ್ದಾರೆ. ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಅದು ಚಿತ್ರಕಥೆ ಮತ್ತು ಪ್ರತಿ ಪಾತ್ರಗಳಿಗೆ ಪೋಣಿಸಿರುವ ಸಂಭಾಷಣೆ. ಒಂದು ಕೋರ್ಟ್‌ ಹಾಲ್‌ನಲ್ಲಿ ನಡೆಯುವ ಕಥೆ ಮತ್ತು ಸನ್ನಿವೇಶವನ್ನು ಪ್ರಬುದ್ಧವಾಗಿ ಕಟ್ಟಿಕೊಡುವುದರ ಜೊತೆಗೊಂದು, ಕುತೂಹಲ ಕಾಯ್ದುಕೊಂಡು ಹೋಗುವ ಸಿನಿಮಾ, ಆರಂಭದಿಂದಲೇ ಸಾಕಷ್ಟು ಆಸಕ್ತಿ ಕೆರಳಿಸುತ್ತಾ ಹೋಗುತ್ತದೆ.

ದ್ವಿತಿಯಾರ್ಧದಲ್ಲೊಂದಷ್ಟು ಫ್ಲ್ಯಾಶ್‌ಬ್ಯಾಕ್‌ ಸೀನ್‌ ಬಂದು ಎಲ್ಲೋ ಒಂದು ಕಡೆ ನೋಡುಗರ ತಾಳ್ಮೆ ಕೆಡಿಸುತ್ತದೆ ಅನ್ನುವುಷ್ಟರಲ್ಲೇ, ಮತ್ತೆ ಕೋರ್ಟ್‌ ಹಾಲ್‌ನ ವಾದ- ವಿವಾದ ಇನ್ನಷ್ಟು ಥ್ರಿಲ್ಲಿಂಗ್‌ ಎನಿಸಿಬಿಡುತ್ತದೆ. ಮುಖ್ಯವಾಗಿ ಇಲ್ಲಿ ಯೂಥ್‌ಗೊಂದು ಸಂದೇಶವಿದೆ. ಅಷ್ಟೇ ಅಲ್ಲ, ಪೋಷಕರಿಗೂ
ಸಮಾಜದಲ್ಲಾಗುವ ಕೆಲ ನ್ಯೂನ್ಯತೆಗಳ ಬಗ್ಗೆ ಸೂಕ್ಷ್ಮವಾಗಿ ಹೇಳಲಾಗಿದೆ. ಆರಂಭದಿಂದ ಅಂತ್ಯದವರೆಗೂ “ದಶರಥ’ನ ಕಾನೂನು ಹೋರಾಟ, ಅವನ ಪ್ರಾಮಾಣಿಕತೆ, ಕುಟುಂಬದ
ಮೇಲಿನ ಕಾಳಜಿ, ದುಷ್ಟರ ವಿರುದ್ಧ ತೊಡೆತಟ್ಟಿ ನಿಲ್ಲುವ ಮೊಂಡುತನ ಇವೆಲ್ಲವೂ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ.

ಇಂತಹ ಚಿತ್ರಗಳನ್ನು ಮಾಡುವಾಗ, ಒಂದಷ್ಟು ಕಾನೂನು ಅರಿವು ಇರಬೇಕು. ಅದೆಲ್ಲವನ್ನೂ ಮನಗಂಡು ಮಾಡಿದಂತಿರುವ ಚಿತ್ರದಲ್ಲಿ ಕೆಲ ಸಣ್ಣಪುಟ್ಟ ತಪ್ಪುಗಳೂ ಇವೆ. ನ್ಯಾಯಾಲಯದ ಒಳಗೆ ನ್ಯಾಯಾಧೀಶರ ಮುಂದೆ ಕುಡುಕನೊಬ್ಬ ನಿಂತು ಮಾತನಾಡುವುದಾಗಲಿ, ನ್ಯಾಯಾಲಯ ಆವರಣ ದೊಳ ಗಿರುವ ವಕೀಲರ ಕಚೇರಿಗೆ ಆಗಮಿಸುವುದಾಗಲಿ ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಕಾಡುವುದು ಸುಳ್ಳಲ್ಲ. ಕೆಲ ಸರಿ, ತಪ್ಪುಗಳ ನಡುವೆಯೂ ಸಿನಿಮಾ ನೋಡಿಸಿಕೊಂಡು ಹೋದರೆ, “ದಶರಥ’ ಆಪ್ತವೆನಿಸುತ್ತಾನೆ.

Advertisement

ಚಿತ್ರದಲ್ಲಿ ದಶರಥ ಪ್ರಸಾದ್‌, ತನ್ನ ಮಗಳ ಗೆಲುವಿಗೆ ಹೋರಾಡಲು ಹುಡುಕುವ ನೂರೆಂಟು ಉಪಾಯಗಳು, ಅಲ್ಲಲ್ಲಿ ಬರುವ ಹೊಸ ತಿರುವುಗಳು ಸಿನಿಮಾದ ಗಟ್ಟಿತನವನ್ನು ಪ್ರದರ್ಶಿಸುತ್ತವೆ. ಇಲ್ಲಿ ಬರೀ ಕಾನೂನು ಹೋರಾಟ ಮಾತ್ರವಲ್ಲ, ಮಗಳನ್ನು ಕಾಳಜಿಯಿಂದ ನೋಡಿಕೊಳ್ಳುವುದು ಹೇಗೆ, ಮಕ್ಕಳನ್ನು ಹೇಗೆಲ್ಲಾ ಬೆಳೆಸಬೇಕು, ಕುಟುಂಬವನ್ನು ಯಾವ ರೀತಿ ಪ್ರೀತಿಸಬೇಕು, ಹೆಣ್ಣನ್ನು ಯಾವ ರೀತಿ ಕಾಣಬೇಕು ಎಂಬ ಅಂಶಗಳು ಚಿತ್ರಕ್ಕೆ ತೂಕವಾಗಿವೆ. ಇಡೀ ಸಿನಿಮಾದಲ್ಲಿ ವಕೀಲರ ಬಗ್ಗೆ ಒಳ್ಳೆಯ ಸಂದೇಶವೂ ಇದೆ.

ಕೆಲವೆಡೆ ಭಾವುಕತೆ ಹೆಚ್ಚಿಸುವ ದೃಶ್ಯಗಳಿಗೂ ಜಾಗವಿದೆ. ಹಾಗಾಗಿ ಇದೊಂದು ಕುಟುಂಬ ಸಮೇತ ನೋಡುವ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ, ಇಲ್ಲಿ ಎಲ್ಲವೂ ಪಕ್ಕಾ ಅಂದುಕೊಳ್ಳುವಂತೂ ಇಲ್ಲ. ಸಿನಿಮಾ ಚೆನ್ನಾಗಿ ಸಾಗುತ್ತಿರುವ ಮಧ್ಯೆ, ಬೇಡದ ಹಾಡೊಂದು ಬಂದು ಕಿರಿಕಿರಿ ಉಂಟುಮಾಡುತ್ತದೆ, ಹಾಡಲ್ಲಿ ಸಂಗೀತದ ಅಬ್ಬರವೇ ಹೊರತು, ಸಾಹಿತ್ಯದ ಹೂರಣ ಎಳ್ಳಷ್ಟೂ ರುಚಿಸಲ್ಲ. ಹಾಡಿಲ್ಲದಿದ್ದರೂ, “ದಶರಥ’ ಸೊರಗುತ್ತಿರಲಿಲ್ಲ.

ದಶರಥ ಪ್ರಸಾದ್‌ ಒಬ್ಬ ಪ್ರಾಮಾಣಿಕ ವಕೀಲ. ಆತನಿಗೆ ತನ್ನ ಕುಟುಂಬವೇ ಪ್ರಪಂಚ. ಸದಾ ಜಾಲಿಯಾಗಿರುವ ಕುಟುಂಬದಲ್ಲಿ ಒಂದು ಘಟನೆ ನಡೆದು ಹೋಗುತ್ತದೆ. ವಯಸ್ಸಿಗೆ ಬಂದ ಮಗಳನ್ನು ಪ್ರೀತಿಸಿ, ಮೋಸ ಮಾಡುವ ಹುಡುಗನ ವಿರುದ್ಧವೇ ದಶರಥ ತನ್ನ ಮಗಳ ಮೂಲಕ ದೂರು ಕೊಡಿಸಿ, ಕೋರ್ಟ್‌ ಮೆಟ್ಟಿಲು ಏರುವಂತೆ ಮಾಡುತ್ತಾನೆ. ಅಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತವೆ. ಮಗಳ ಪರ ನಿಂತು ವಾದ ಮಾಡುವ ದಶರಥ ಒಂದು ಹಂತದಲ್ಲಿ ಕೇಸು ಕೈ ಮೀರಿ ಹೋಯ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೂಂದು ಟ್ವಿಸ್ಟ್‌ ಸಿಗುತ್ತದೆ. ಅದೇ ಚಿತ್ರದ ಹೈಲೈಟ್‌. ಆ ಕುತೂಹಲವಿದ್ದರೆ, “ದಶರಥ’ನ ಕಾನೂನು ಹೋರಾಟವನ್ನು ನೋಡಬಹುದು.

ರವಿಚಂದ್ರನ್‌ ಎಂದಿಗಿಂತ ಇಷ್ಟವಾಗುತ್ತಾರೆ. ಒಳ್ಳೆಯ ಗಂಡನಾಗಿ, ಪ್ರೀತಿಯ ಅಪ್ಪನಾಗಿ, ನ್ಯಾಯದ ವ್ಯಕ್ತಿಯಾಗಿ, ಭಾವುಕ ಜೀವಿಯಾಗಿ ಇಡೀ ಪಾತ್ರವನ್ನು ಜೀವಿಸಿದ್ದಾರೆ. ಅತ್ತ
ಸೋನಿಯಾ ಅಗರ್‌ವಾಲ್‌, ಅಭಿರಾಮಿ ಕೂಡ ಗಮನಸೆಳೆಯುತ್ತಾರೆ. ರಂಗಾಯಣ ರಘು ಗಂಭೀರ
ವಕೀಲನಾಗಿ ಸೈ ಎನಿಸಿಕೊಂಡರೆ, ತಬಲನಾಣಿ ಮಾತಿನ ಕಚಗುಳಿ ಮೂಲಕ ಆಗಾಗ ನಗುವಿನ ಅಲೆ ಎಬ್ಬಿಸುತ್ತಾರೆ. ಮೇಘಶ್ರೀ ನಟನೆಯಲ್ಲಿ ಲವಲವಿಕೆ ಇದೆ. ಉಳಿದಂತೆ ಬಂದು ಹೋಗುವ ಪಾತ್ರಗಳಿಗೂ ಸ್ಪಷ್ಟತೆ ಇದೆ. ಗುರುಕಿರಣ್‌ ಹಾಡಿಗಿಂತ ಹಿನ್ನೆಲೆ ಸಂಗೀತ ಖುಷಿ ಕೊಡುತ್ತದೆ. ಜಿ.ಎಸ್‌.ವಿ ಸೀತಾರಾಮ್‌ ಛಾಯಾಗ್ರಹಣದಲ್ಲಿ “ದಶರಥ’ನ ಪ್ರಾಮಾಣಿಕ ಪ್ರಯತ್ನ ಫ‌ಲಿಸಿದೆ.

ಚಿತ್ರ: ದಶರಥ
*ನಿರ್ಮಾಣ: ಅಕ್ಷಯ್‌ ಸಮರ್ಥ
*ನಿರ್ದೇಶನ: ಎಂ.ಎಸ್‌.ರಮೇಶ್‌
*ತಾರಾಗಣ: ರವಿಚಂದ್ರನ್‌, ಸೋನಿಯಾ ಅಗರ್‌ವಾಲ್‌, ಅಭಿರಾಮಿ, ರಂಗಾಯಣ ರಘು, ಶೋಭರಾಜ್‌, ಮೇಘಶ್ರೀ,
ತಬಲನಾಣಿ ಇತರರು.

*ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next