Advertisement
ಅದೇ ರೀತಿ ಹಲವು ಮನೆಗಳಲ್ಲಿ ಸಂಪ್ರದಾಯ ಪೂರ್ವಕವಾಗಿ ದಸರಾ ಗೊಂಬೆಗಳನ್ನು ಇಟ್ಟು ಪೂಜಿಸುತ್ತಿರುವುದನ್ನೂ ಇಲ್ಲಿ ಕಾಣಬಹುದಾಗಿದೆ. ಆ ರೀತಿಯಲ್ಲಿಟ್ಟಿರುವ ಗೊಂಬೆ ಪ್ರದರ್ಶನಗಳಲ್ಲಿ ಹಳೇನಗರದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ಅರ್ಚಕ ರಂಗನಾಥ ಶರ್ಮ ಅವರ ಮನೆಯಲ್ಲಿ ಕೂಡಿಸಿರುವ ವೈವಿಧ್ಯಮಯ ದಸರಾ ಗೊಂಬೆಗಳ ಪ್ರದರ್ಶನ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.
ಮೈಸೂರು ದಸರಾ ಕಲಾಕೃತಿ: ಮೈಸೂರಿನ ಅರಮನೆ, ವಿಜಯದಶಮಿಯ ಮೆರವಣಿಗೆಯ ಮಾರ್ಗ, ದೊಡ್ಡಗಡಿಯಾರದ ವೃತ್ತ, ಜಾನಪದ ಕುಣಿತದ ಗೊಂಬೆಗಳು, ಆನೆ- ಅಂಬಾರಿ ಸೇರಿದಂತೆ ಮೈಸೂರಿನ ದಸರಾ ಮೆರವಣಿಗೆಯನ್ನು ನೆನೆಪಿಸುವ ಯಥಾವತ್ತಾದ ಮೂರ್ತಿಗಳನ್ನು ಜೋಡಿಸಿಡಲಾಗಿದೆ. ಅದೇರೀತಿ ಜೋಗ್‌ಫಾಲ್ಸ್ ಸೇರಿದಂತೆ ವಿವಿಧ ತರಾವರಿ ಗೊಂಬೆಗಳನ್ನು ಹಾಗೂ ವಿವಿಧ ರೀತಿಯ ಫಲಪುಷ್ಪಗಳ ಮಾದರಿಗಳನ್ನು ಇಡಲಾಗಿದೆ.
Related Articles
Advertisement
ಗ್ರಾಮೀಣ ದೃಶ್ಯ: ಕಮ್ಮಾರಿಕೆ, ಕುಲುಮೆ, ಕುಂಬಾರಿಕೆ, ರೈತಾಪಿ ಕೆಲಸ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ವಿವಿಧ ವೃತ್ತಿಗಳನ್ನು ಸಾರುವ ಗೊಂಬೆಗಳನ್ನು ಸಹ ಕಾಣಬಹುದಾಗಿದೆ. ವಿಧಾನಸೌಧ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸಾರುವ ವಿಧಾನಸೌಧದ ಮಾದರಿಯನ್ನುಸಹ ಇಲ್ಲಿ ಕಾಣಬಹುದಾಗಿರುತ್ತದೆ. ಚರ್ಚ್ ಮತ್ತು ಮಸೀದಿ: ಇದೆಲ್ಲದರ ಜೊತೆಗೆ ಕ್ರಿಸ್ಮಸ್ ಹಬ್ಬದ ಕ್ರಿಸ್ಮಸ್ ಟ್ರೀ, ಸಾಂತಾಕ್ಲಾಸ್ ಬೊಂಬೆ ಸೇರಿದಂತೆ ಕ್ರಿಸ್ಮಸ್ ಹಬ್ಬವನ್ನು ನೆನಪಿಸುವ ಬೊಂಬೆಗಳನ್ನೂ, ಮುಸ್ಲಿಂ ಜನಾಂಗದ ಮಸೀದಿ ಸೇರಿದಂತೆ ವಿವಿಧ ಧರ್ಮಗಳ ಗೊಂಬೆಗಳನ್ನು ಇಡುವ ಮೂಲಕ ಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ಸರ್ವ ಜನಾಂಗದ ಶಾತಿಯ ತೋಟ ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದೂ- ಕ್ರೈಸ್ತ- ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಂಬ ನಾಡಗೀತೆಯ ಸಾಲನ್ನು ಕಣ್ಮುಂದೆ ತಂದು ನಿಲ್ಲಿಸುವ ರೀತಿಯಲ್ಲಿ ದಸರಾ ಬೊಂಬೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿರುವುದು ವಿಶೇಷ. ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್: ಕ್ರೀಡೆಗಳಾದ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿರುವ ದೃಶ್ಯಾವಳಿಯ ಬೊಂಬೆಗಳನ್ನೂ ಸಹ ಇಲ್ಲಿ ಪ್ರದರ್ಶಿಸಲಾಗಿದೆ. ಇದೆಲ್ಲದರ ಜೊತೆಗೆ ಧಾರ್ಮಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ವಿವಿಧ ಆಯುಧಗಳನ್ನೂ ಸಹ ಆಯುಧ ಪೂಜೆ ಮತ್ತು ಶಾರದಾ ಪೂಜೆಯಂದು ಇರಿಸುವ ಮೂಲಕ ಕನ್ನಡನಾಡ ಪರಂಪರಾಗತ ದಸರಾ ಬೊಂಬೆ ಪೂಜೆ ಪ್ರದರ್ಶನವನ್ನು ಇಲ್ಲಿ ನಡೆಸಿಕೊಂಡು ಬರುತ್ತಿರುವುದು ಹೆಚ್ಚಿನ ಜನರ ಶ್ಲಾಘನೆಗೆ ಪಾತ್ರವಾಗಿದೆ. ಈ ಗೊಂಬೆಗಳ ಸಂಗ್ರಹ ಮತ್ತು ಅದನ್ನು ಆಸಕ್ತಿಯಿಂದ ಜೋಡಿಸುವ ಕಾರ್ಯವನ್ನು ಕುಟುಂಬದ ಎಲ್ಲರ ಸಹಕಾರದೊಂದಿಗೆ ಸಹಾಯಕ ಅರ್ಚಕ ಶ್ರೀನಿವಾಸ್ ಅವರ ಪತ್ನಿ ಮೈಥಿಲಿ ಮಾಡುತ್ತಾ ಬರುತ್ತಿದ್ದಾರೆ. ದಸರಾ ಹಬ್ಬದ ಹತ್ತು ದಿನಗಳು ಮುಗಿದ ಮೇಲೂಸಹ ಈ ಗೊಂಬೆ ಪ್ರದರ್ಶನವನ್ನು 4-5 ದಿನಗಳ ಕಾಲ ಜನರ ವೀಕ್ಷಣೆಗಾಗಿ ಅವಕಾಶ ನೀಡುವ ಪದ್ಧತಿಯನ್ನು ಇಲ್ಲಿ ಮಾಡಿಕೊಂಡು ಬರಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಬೊಂಬೆಗಳನ್ನು ಇಲ್ಲಿ ಕಾಣಬಹುದಾಗಿದೆ. ಕೆ.ಎಸ್. ಸು ಧೀಂದ್ರ ಭದ್ರಾವತಿ