ಬೆಂಗಳೂರು: ರಾಜ್ಯ ಹೈಕೋರ್ಟಿನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ಅ.11ರಿಂದ 16ರ ವರೆಗೆ ದಸರಾ ರಜೆ ನೀಡಲಾಗಿದೆ.
ಹಂಗಾಮಿ ಮುಖ್ಯ ನ್ಯಾ| ಸತೀಶ ಚಂದ್ರ ಶರ್ಮ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್ (ನ್ಯಾಯಾಂಗ) ಕೆ.ಎಸ್. ಭರತ್ ಕುಮಾರ್ ಅವರು ರಜೆ ಬಗ್ಗೆ ನೋಟಿಫಿಕೇಷನ್ ಹೊರಡಿಸಿದ್ದಾರೆ.
ಒಂದು ವಾರದ ರಜಾ ದಿನಗಳ ಅವಧಿಯಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ, ಮೇಲ್ಮನವಿ ಸ್ವೀಕರಿಸುವುದಿಲ್ಲ. ಈ ಸಂದರ್ಭದಲ್ಲಿ ತುರ್ತಾಗಿ ಮಧ್ಯಾಂತರ ಆದೇಶ, ತಡೆಯಾಜ್ಞೆ ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆಗಳ ಅಗತ್ಯವಿದ್ದಲ್ಲಿ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಗಳನ್ನು ಅ. 11ರ ಬೆಳಗ್ಗೆ 10.30ರಿಂದ 12.30ರ ನಡುವೆ ಸಲ್ಲಿಸಿದರೆ, ಅರ್ಜಿಗಳನ್ನು ಆಯಾ ಪೀಠಗಳ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುವುದು. ಅ. 12ರಂದು ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡದಲ್ಲಿ ರಜಾಕಾಲದ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ.
ಇದನ್ನೂ ಓದಿ:ಗೊಜನೂರ ಗ್ರಾಮಕ್ಕೆ 2ನೇ ಬಾರಿಗೂ ಗಾಂಧಿ ಗ್ರಾಮ ಪುರಸ್ಕಾರ
ಅದೇ ರೀತಿ ರಜಾ ಅವಧಿಯಲ್ಲಿ ರಿಜಿಸ್ಟ್ರಾರ್ (ನ್ಯಾಯಾಂಗ) ಅವರ ಮುಂದೆ ಸಲ್ಲಿಸುವ ಮೆಮೋಗಳನ್ನು ಪರಿಗಣಿಸಲಾಗುವುದಿಲ್ಲ. ಬಾಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕಾಲತ್ತು, ಶುಲ್ಕಕ್ಕೆ ಸಂಬಂಧಿಸಿದ ಮೆಮೋಗಳನ್ನು ಸೋಮವಾರ ಹಾಗೂ ಬುಧವಾರ ಬೆಳಗ್ಗೆ 10 ರಿಂದ 12.30ರ ನಡುವೆ ಆಯಾ ಕೌಂಟರ್‌ಗಳಲ್ಲಿ ಸ್ವೀಕರಿಸಲಾಗುವುದು. ರಜಾಕಾಲದ ಪೀಠ ಕಲಾಪ ನಡೆಸುವ ದಿನದಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಸ್ವೀಕರಿಸಲಾಗುವುದು ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ.