Advertisement

ಕೊಡಗು ನೆರೆ: ದಸರಾ ಕ್ರೀಡಾಕೂಟಕ್ಕೆ ಬರೆ!

10:48 AM Sep 24, 2018 | |

ಉಡುಪಿ: ಕೊಡಗು ಜಿಲ್ಲೆಯಲ್ಲಿ ಉಂಟಾದ ನೆರೆ, ಭೂಕುಸಿತ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲು ಸರಕಾರ ನಿರ್ಧರಿಸಿರುವುದರಿಂದ ದಸರಾ ಕ್ರೀಡಾಕೂಟವೂ ನಡೆದಿಲ್ಲ. ವಿಶೇಷವೆಂದರೆ ಕ್ರೀಡಾಕೂಟಗಳಿಗಾಗಿ ಅನುದಾನ ಸಿದ್ಧವಿದ್ದು, ಕ್ರಿಯಾ ಯೋಜನೆಗೆ ಅನುಮೋದನೆಯೂ ದೊರೆತಿದೆ. ಆದರೆ ನಡೆಸಲು ಸರಕಾರದ ಆದೇಶ ಮಾತ್ರ ಬಂದಿಲ್ಲ.

Advertisement

ದಸರಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸಾರ್ವ ಜನಿಕರು ಪಾಲ್ಗೊಳ್ಳಲು ಅವಕಾಶವಿತ್ತು. ತಾಲೂಕು, ಜಿಲ್ಲೆ ಮತ್ತು ವಲಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಪಾಲ್ಗೊಳ್ಳುವವರಿಗೆ ಪ್ರಯಾಣ ಭತ್ತೆ, ಸಮವಸ್ತ್ರ ನೀಡಲಾಗುತ್ತಿತ್ತು. ಉಡುಪಿ ಜಿ.ಪಂ.ನಲ್ಲಿ ಹಲವು ತಿಂಗಳ ಹಿಂದೆಯೇ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಗಿದೆ. ತಾಲೂಕು ಮಟ್ಟಕ್ಕೆ ಪ್ರತೀ ತಾಲೂಕಿಗೆ ತಲಾ 50,000 ರೂ. ಹಾಗೂ ಜಿಲ್ಲಾ ಮಟ್ಟಕ್ಕೆ 1.5 ಲ. ರೂ. ತೆಗೆದಿರಿಸಲಾಗಿದೆ. ಸರಕಾರದ ಆದೇಶ ಬಾರದೆ ಜಿಲ್ಲೆಯ ಆಡಳಿತ ವರ್ಗ ಮುಂದುವರೆದಿಲ್ಲ. ಹಣ ಇದೆಯಾದರೂ ಖರ್ಚು ಮಾಡಿದರೆ ವಾಪಸು ನೀಡಬೇಕು ಎಂದು ಸರಕಾರ ಆದೇಶಿಸಿದರೆ  ಎಂಬ ಆತಂಕ ಅಧಿಕಾರಿಗಳಲ್ಲಿದೆ. ಜಿ.ಪಂ. ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಕ್ರೀಡಾಕೂಟ ನಡೆಸಬಹುದಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ. 

ದಸರಾ ಕ್ರೀಡಾಕೂಟ ಮಾತ್ರ 
ಹಿಂದೆ ಪೈಕಾ (ಪಂಚಾಯತ್‌ ಯುವ ಕ್ರೀಡಾ ಔರ್‌ ಖೇಲ್‌ ಅಭಿಯಾನ್‌) ಕ್ರೀಡಾಕೂಟವಿತ್ತು. ಅನಂತರ ರಾಜೀವ್‌ಗಾಂಧಿ ಖೇಲ್‌ ಅಭಿಯಾನವಿತ್ತು. ಬಳಿಕ ಇವೆರಡನ್ನೂ ರದ್ದು ಮಾಡಿ ಖೇಲೋ ಇಂಡಿಯಾ ಕ್ರೀಡಾಕೂಟಗಳನ್ನು ನಡೆಸಲಾಯಿತು. ಕಳೆದ ವರ್ಷದಿಂದ ಇದೂ ಸ್ಥಗಿತವಾಗಿದೆ. ಹೀಗಾಗಿ ಕ್ರೀಡಾಕೂಟಗಳೇ ಅಪರೂಪ ಎನ್ನುವಂತಾಗಿದೆ. ಸದ್ಯ ಶಾಲೆ ಕಾಲೇಜುಗಳಲ್ಲಿ ಆಯೋಜಿಸುವಂಥವು ಮಾತ್ರವೇ ಕ್ರೀಡಾ ಸಾಧನೆ ಪ್ರದರ್ಶನಕ್ಕೆ ಅವಕಾಶ. ಹೀಗಾಗಿ ವಿದ್ಯಾರ್ಥಿಗಳು ಮಾತ್ರವಲ್ಲ, ಇತರ ಕ್ರೀಡಾಳುಗಳು, ವಿಶೇಷವಾಗಿ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕೈತಪ್ಪಿದಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. 

ದಸರಾ ಕ್ರೀಡಾಕೂಟಕ್ಕೆ ಜಿಲ್ಲೆಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿತ್ತು. ಉಡುಪಿ ಜಿಲ್ಲೆಯಿಂದ ವಿಭಾಗ ಮಟ್ಟಕ್ಕೆ 190 ರಷ್ಟು ಮಂದಿ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಆದೇಶ ಬಾರದೆ ಕ್ರೀಡಾಳುಗಳಲ್ಲಿ ನಿರುತ್ಸಾಹ ಕಂಡುಬಂದಿದೆ. ಇಷ್ಟರಲ್ಲಿ ಕ್ರೀಡಾಕೂಟ ನಡೆಯಬೇಕಿತ್ತು. 

ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ. ನಮ್ಮ ಜಿ.ಪಂ.ನಲ್ಲಿ ಅನುದಾನ ನಿಗದಿಪಡಿಸಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಕ್ರಿಯಾ ಯೋಜನೆ  ಮಾಡಿದ್ದೇವೆ. ಆದರೆ ಸರಕಾರದ ಆದೇಶ ಬಂದಿಲ್ಲ. ಹಿಂದೆ ನಾಲ್ಕೈದು ಕ್ರೀಡಾಕೂಟಗಳಿಂದಾಗಿ ಕ್ರೀಡಾಳುಗಳಿಗೆ ಅನುಕೂಲವಾಗುತ್ತಿತ್ತು. ಈಗ ಒಂದೊಂದೇ ರದ್ದಾಗುತ್ತಿದೆ. ದಸರಾ ಕ್ರೀಡಾಕೂಟವೂ ರದ್ದಾಗುತ್ತಿರುವುದು ಬೇಸರ ಉಂಟು ಮಾಡಿದೆ. ಸರಳ ದಸರಾ ಎಂದು ಬೇರೆ ಎಲ್ಲ ಚಟುವಟಿಕೆಗಳನ್ನು ನಡೆಸಿ ಕ್ರೀಡಾಕೂಟ ಮಾತ್ರ ರದ್ದು ಮಾಡುವುದಾದರೆ ಅದು ಸರಿಯಲ್ಲ. ಅನುದಾನ ಇರುವುದರಿಂದ ಕ್ರೀಡಾಕೂಟಕ್ಕೆ ತೊಂದರೆಯಾಗುತ್ತಿರಲಿಲ್ಲ. 
ದಿನಕರ ಬಾಬು,  ಅಧ್ಯಕ್ಷರು, ಉಡುಪಿ ಜಿ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next