Advertisement

ಹನಗೋಡಲ್ಲಿ ವೈಭವದ ದಸರಾ

04:58 PM Oct 13, 2018 | |

ಹುಣಸೂರು: ತಾಲೂಕಿನ ಹೋಬಳಿ ಕೇಂದ್ರ ಹನಗೋಡಿನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಗ್ರಾಮೀಣ ದಸರಾದಲ್ಲಿ
ಕಾಡಕುಡಿಗಳ ಸಂಸ್ಕೃತಿ ಪ್ರತಿಬಿಂಬಿಸುವ ಅದ್ದೂರಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.

Advertisement

ಗ್ರಾಮದ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಯಲ್ಲಿ ಬೆಳ್ಳಿ ರಥದಲ್ಲಿ ವಿರಾಜಮಾನಳಾಗಿದ್ದ ಚಾಮುಂಡೇಶ್ವರಿ ಅಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಎಚ್‌.
ವಿಶ್ವನಾಥ್‌, ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್‌.ಬಿ.ಮಧು ಮೆರವಣಿಗೆಗೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಗ್ರಾಮದ ಮುಖಂಡರು ನಂದಿಕಂಬಕ್ಕೆ ಪೂಜೆ ಸಲ್ಲಿಸಿದರು. ಹತ್ತಾರು ಗ್ರಾಮೀಣ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳು, ಗ್ರಾಮದ ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳ ಮಹಿಳೆಯರು ಹುಣಸೂರು ರಸ್ತೆಯಲ್ಲಿರುವ ಪ್ರೌಢಶಾಲಾ ಮೈದಾನಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದರು. ತಾಲೂಕು ಆಡಳಿತದ ಅಧಿಕಾರಿಗಳು,
ಸಿಬ್ಬಂದಿ ಕಾಡಂಚಿನ ಗ್ರಾಮದಲ್ಲಿ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ಭಾಗವಹಿಸಿದ್ದರು.

ಕಳೆಗಟ್ಟಿನ ಸಾಂಸ್ಕೃತಿಕ ಮೆರವಣಿಗೆ: ಹೋಬಳಿ ಮಟ್ಟದ ದಸರಾ ಉತ್ಸವದಲ್ಲಿ ಹನಗೋಡಿನ ನಂದಿಕಂಬ ಧ್ವಜದ ಕುಣಿತ ಮೈನವಿರೇಳಿಸುವಂತಿತ್ತು. ಬಿರುಬಿಸಿಲ ನಡುವೆಯೂ ಗಾವಡಗೆರೆಯ ಶ್ರೀ ಮಹದೇಶ್ವರ ಕಲಾತಂಡದ ಡೊಳ್ಳುಕುಣಿತದಲ್ಲಿ ಕಾಲೇಜಿನ ಯುವತಿಯರ ತಂಡ ಡೊಳ್ಳುಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದರು. ವೀರಗಾಸೆ
ಕುಣಿತದ ಕಲಾವಿದರು ಶೌರ್ಯ ಸಾಹಸಗಳ ಪ್ರತೀಕವಾಗಿ ಕೀರೀಟ ಹೊತ್ತು ಕುಣಿದು ಜನರನ್ನು ರಂಜಿಸಿದರು.

ಸ್ತಬ್ಧಚಿತ್ರಗಳು: ಕಾವೇರಿ ನೀರಾವರಿ ನಿಗಮದಿಂದ ಲಕ್ಷ್ಮಣತೀರ್ಥ ನದಿ – ಹನಗೋಡು ಅಣೆಕಟ್ಟೆ ಮನಮೋಹಕ
ಸ್ಥಬ್ದಚಿತ್ರ ಗಮನ ಸೆಳೆದರೆ, ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದವರು ಆಯುರ್ವೇದ ಗಿಡಮೂಲಿಕೆಗಳಿಂದ
ತಯಾರಿಸಿದ್ದ ಕೇಶವರ್ಧಿತ ತೈಲದ ಮಹತ್ವ ಕುರಿತಾದ ಸ್ತಬ್ಧಚಿತ್ರ, ನಾಗರಹೊಳೆ ಉದ್ಯಾನವನದಿಂದ ಪುನರ್ವಸತಿಗೊಂಡು ಹೆಬ್ಬಳ್ಳದಲ್ಲಿ ನೆಲೆಸಿರುವ ಕಾಡಕುಡಿಗಳು ದೂರಿ-ದೂರಿ ಹಾಡಿಗೆ ತಮ್ಮದೇ ಆದ ಶೈಲಿಯಲ್ಲಿ
ಕೋಲಾಟದ ನೃತ್ಯ ಹಾಗೂ ಕುಂಡೆ ಹಬ್ಬದ ವೇಷಧಾರಿಗಳು ನಡೆಸಿಕೊಟ್ಟ ನೃತ್ಯವಂತೂ ರಸ್ತೆಯ ಇಕ್ಕೆಲಗಳಲ್ಲಿ
ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತ್ತು.

Advertisement

ಕಳಶ ಹೊತ್ತ ಮಹಿಳೆಯರು: ನೂರಕ್ಕೂ ಹೆಚ್ಚು ಮಂದಿ ಸುಮಂಗಲಿಯರು, ಕಳಶ ಹೊತ್ತು ಸಾಗಿಬಂದು ಮೆರವಣಿಗೆಗೆ ಕಳಶಪ್ರಾಯವಾಗಿದ್ದರು. ಹನಗೋಡು ನೇರಿದಂತೆ ಕಾಡಂಚಿನ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಗ್ರಾಮೀಣ ದಸರಾ ಸಂಭ್ರಮದಲ್ಲಿ ಮಿಂದೆದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು
ಗ್ರಾಮಸ್ಥರು ಮೊದಲ ಗ್ರಾಮೀಣ ದಸರಾವನ್ನು ಕಣ್ತುಂಬಿ ಕೊಂಡರು. ಮೆರವಣಿಗೆಯಲ್ಲಿ ಜಿಪಂ ಸದಸ್ಯ ಕಟ್ಟನಾಯಕ,
ಗ್ರಾಪಂಅಧ್ಯಕ್ಷ ಎಚ್‌.ಬಿ.ಮಧು, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್‌, ಸದಸ್ಯರಾದ ರೂಪಾ, ಮಂಜುಳ,
ರಾಜೇಂದ್ರಬಾಯಿ, ಪುಷ್ಪಲತಾ, ಪುಟ್ಟಮ್ಮ, ಇಒ ಕೃಷ್ಣಕುಮಾರ್‌, ಪಿಡಿಒ ನಾಗೇಂದ್ರಕುಮಾರ್‌, ನಾಡಕಚೇರಿ
ಡಿ.ಟಿ.ಗುರುಸಿದ್ದಯ್ಯ, ಶಿರಸ್ತೆದಾರ್‌ ಗುರುರಾಜ್‌, ಆರ್‌ಐ ಶ್ರೀನಿವಾಸ್‌, ತಹಶೀಲ್ದಾರ್‌ ಮೋಹನ್‌, ಕಸಾಪ ಹೋಬಳಿ
ಘಟಕದ ಅಧ್ಯಕ್ಷ ಶ್ರೀನಿವಾಸ್‌, ಮುಖಂಡರಾದ ಹನಗೋಡು ಮಂಜುನಾಥ್‌, ಗಣಪತಿ, ದಾ.ರಾ.ಮಹೇಶ್‌, ಪ್ರಾಚಾರ್ಯ
ಡಾ.ಹನುಮಂತರಾಯ, ಉಪನ್ಯಾಸಕ ಬಸವರಾಜು, ಅಂಗನವಾಡಿ, ಆಶಾ-ಆರೋಗ್ಯ ಕಾರ್ಯಕರ್ತೆಯರು ಹಾಗೂ
ಹನಗೋಡು ಹೋಬಳಿಯ ವಿವಿಧ ಗ್ರಾ.ಪಂ.ಗಳ ಪ್ರತಿನಿಗಳು ಹಾಗೂ ಪಿಡಿಇಗಳು, ಪ್ರಥಮ ದರ್ಜೆ ಕಾಲೇಜಿನ
ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಸಂಘ-ಸಂಸ್ಥೆಗಳ
ನೆರವಿನಿಂದ 7 ಮಂದಿ ಪ್ರಗತಿಪರ ರೈತರು ಸನ್ಮಾನಿಸಲಾಯಿತು.

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮೂರು ಅಂಗನವಾಡಿ ಕೇಂದ್ರಗಳಿಗೆ ಬಹುಮಾನ ವಿತರಿಸಲಾಯಿತು.
ಜಗಮಗಿಸುತ್ತಿರುವ ಹನಗೋಡು: ಗ್ರಾಮೀಣ ದಸರಾ ಅಂಗವಾಗಿ ಕಳೆದೆರಡು ದಿನಗಳಿಂದ ಗ್ರಾಮದ ಮುಖ್ಯರಸ್ತೆಯ
ಲ್ಲಿರುವ ಗ್ರಾಪಂ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡಕಚೇರಿ, ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳು
ವಿದ್ಯುತ್‌ ದೀಪಾಲಂಕಾರಗಳಿಂದ ಜಗಮಗಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next