Advertisement
ಕಳೆದ ಹತ್ತು ದಿನಗಳಿಂದ ಜನರಿಂದ ತುಂಬಿ ತುಳುಕುತ್ತಿದ್ದ ಮೈಸೂರಿನ ರಸ್ತೆಗಳು ಮೊದಲಿನ ಸ್ಥಿತಿಗೆ ಮರಳಿದ್ದು, ಮೈಸೂರು ನಗರದಲ್ಲಿರುವ ಹೋಟೆಲ್, ವಸತಿ ಗೃಹಗಳಲ್ಲಿ ಸುಮಾರು 6 ಸಾವಿರ ಕೊಠಡಿಗಳಿದ್ದು, ಕಳೆದ ಮೂರು ದಿನಗಳಲ್ಲಿ ಶೇ.100ರಷ್ಟು ಭರ್ತಿಯಾಗಿತ್ತು. ಇದೀಗ ದಸರಾ ಮುಗಿದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಕೊಠಡಿಗಳನ್ನು ಖಾಲಿ ಮಾಡಿ ತೆರಳುತ್ತಿದ್ದರೆ, ಶಾಲಾ-ಕಾಲೇಜುಗಳಿಗೆ ದಸರಾ ರಜೆ ಇರುವ ಕಾರಣ ಮೈಸೂರು ಸುತ್ತಮುತ್ತಲಿನ ಕೊಡಗು, ಊಟಿ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ.
Related Articles
Advertisement
ಜಂಬೂಸವಾರಿ ವೀಕ್ಷಣೆಗಾಗಿ ಅರಮನೆ ಆವರಣದಲ್ಲಿ 26 ಸಾವಿರ, ಪಂಜಿನ ಕವಾಯತು ವೀಕ್ಷಣೆಗಾಗಿ ಬನ್ನಿಮಂಟಪ ಮೈದಾನದಲ್ಲಿ 32 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಅರಮನೆ ಆವರಣದಲ್ಲಿ ಬೆಳಗ್ಗಿನಿಂದಲೇ ಬಂದು ಕುಳಿತವರು ತಿಂದು ಬಿಸಡಿದ ಬಿಸ್ಕೆಟ್ ಮತ್ತಿತರೆ ತಿಂಡಿಗಳ ಪ್ಲಾಸ್ಟಿಕ್ ಕವರ್‌ಗಳು, ದಾಹತಣಿಸಿಕೊಳ್ಳಲು ತಂದಿದ್ದ ನೀರಿನ ಬಾಟಲಿಗಳು, ತಂಪುಪಾನೀಯಗಳ ಬಾಟಲಿ, ಟೆಟ್ರಾಪ್ಯಾಕ್‌ಗಳನ್ನು ಬಿಸಾಡಿ ಹೋಗಿದ್ದನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
ದಸರೆ ಮುಗಿದ ಬೆನ್ನಲ್ಲೇ ಬುಧವಾರ ನಗರದ ರಸ್ತೆಗಳೆಲ್ಲ ನಿರಾಳವಾಗಿವೆ. ಹಬ್ಬದ ರಜೆಗೆ ಮನೆಗೆ ಬಂದಿದ್ದವರು ಕರ್ತವ್ಯಕ್ಕೆ ಮರಳಲು ಹೊರಟದ್ದರಿಂದ ಬುಧವಾರ ಬೆಳಗಿನ ವೇಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತು ಬಸ್‌ಗಳಲ್ಲಿ ಜನ ದಟ್ಟಣೆ ವಿಪರೀತವಾಗಿತ್ತು.
ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ವಿಶ್ರಾಂತಿ: ಜಂಬೂಸವಾರಿ ಮೆರವಣಿಗೆಗಾಗಿ ಒಂದೂವರೆ ತಿಂಗಳ ಹಿಂದೆ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಕಾಡಿನ ವಿವಿಧ ಆನೆ ಶಿಬಿರಗಳಿಂದ ಕರೆತರಲಾಗಿದ್ದ ಗಜಪಡೆ ಅರಣ್ಯ ಇಲಾಖೆಯ ವಿಶೇಷ ಆರೈಕೆಯಲ್ಲಿ ನಿತ್ಯ ತಾಲೀಮು ನಡೆಸಿದ್ದವು. ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ಬುಧವಾರ ವಿಶ್ರಾಂತಿ ನೀಡಲಾಗಿದ್ದು,
ಅರಮನೆ ಆವರಣದಲ್ಲಿ ಆನೆಗಳಿಗೆ ಮಜ್ಜನ ಮಾಡಿಸಿ ಜಂಬೂಸವಾರಿಗೆ ಅಲಂಕರಿಸಲಾಗಿದ್ದ ಬಣ್ಣವನ್ನು ತೊಳೆದು, ಆಹಾರ ನೀಡಿ ವಿಶ್ರಾಂತಿ ನೀಡಿ, ಆನೆಗಳಿಗೆ ಧರಿಸಿದ್ದ ವಸ್ತ್ರಗಳನ್ನು ಅರಮನೆ ಮಂಡಳಿಗೆ ಹಿಂದಿರುಗಿಸಿ, ಮಾವುತರು ಮತ್ತು ಕಾವಾಡಿಗಳು ಸಹ ವಿಶ್ರಾಂತಿಯ ಮೊರೆ ಹೋಗಿದ್ದರು. ಅವರ ಕುಟುಂಬದವರು ತಾವು ಬೀಡುಬಿಟ್ಟಿದ್ದ ಟೆಂಟ್‌ಗಳಲ್ಲಿ ತಮ್ಮ ಹಾಡಿಗಳಿಗೆ ಹಿಂತಿರುಗಲು ಅಗತ್ಯ ಸಿದ್ಧತೆ ನಡೆಸುತ್ತಿದ್ದರೆ, ಮತ್ತೆ ಕೆಲವರು ಮಕ್ಕಳನ್ನು ಕರೆದೊಯ್ದು ನಗರವನ್ನು ತೋರಿಸಿ, ತಿಂಡಿ-ಆಟಿಕೆಗಳನ್ನು ಕೊಡಿಸುತ್ತಿದ್ದ ದೃಶ್ಯ ಕಂಡುಬಂತು.
ಮತ್ತೊಂದು ಹೊಣೆ: ದಸರಾ ಮುಗಿದ ಬೆನ್ನಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಬಳಿ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಕೊಂದಿರುವ ಹುಲಿ ಸೆರೆ ಕಾರ್ಯಾಚರಣೆಗೆ ಅರ್ಜುನ, ಅಭಿಮನ್ಯು ಆನೆಗಳನ್ನು ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಎಲ್ಲರ ಸಹಕಾರದಿಂದ ದಸರಾ ಸಂಪೂರ್ಣ ಯಶಸ್ವಿಯಾಗಿದೆ. ದಸರಾ ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.-ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ * ಗಿರೀಶ್ ಹುಣಸೂರು