Advertisement
ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ದಸರಾ ಧಾರ್ಮಿಕ ಕಾರ್ಯಕ್ರಮಗಳು ಅಂತ್ಯಗೊಂಡವು. ವಿಜಯದಶಮಿ ನಿಮಿತ್ತ ಮಂಗಳವಾರ ಪಟ್ಟಣದ ಹೊರವಲಯದಲ್ಲಿದ್ದ ಬನ್ನಿ ಮರಕ್ಕೆ ಮಂಗಳ ವಾದ್ಯ ಉತ್ಸವದೊಂದಿಗೆ ತೆರಳಿ ಧಾರ್ಮಿಕ ವಿಧಿಯನ್ನು ನೆರವೇರಿಸಲಾಯಿತು. ನಂತರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬನ್ನಿಯನ್ನು ಭಕ್ತರಿಗೆ ವಿತರಿಸಲಾಯಿತು.
Related Articles
Advertisement
ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುತ್ತಿರುವ ಪುಣ್ಯಸಾಗರ ಮಹಾರಾಜರು ಮತ್ತು ಕ್ಷುಲ್ಲಿಕಾ ವಿಶುದ್ಧಮತಿ ಮಾತಾಜಿ ಸಾನ್ನಿಧ್ಯದಲ್ಲಿ ಭಂಡಾರ ಬಸದಿಯಲ್ಲಿ ನಿತ್ಯವೂ ಆರಾಧನೆ ಮತ್ತು ಪ್ರತಿನಿತ್ಯ ಸಂಜೆ ಶ್ರಾವಕ ಶ್ರಾವಕಿ ಧರ್ಮಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮುನಿಶ್ರೀಗಳವರಲ್ಲಿ ಕೇಳಿ ಉತ್ತರ ಪಡೆಯುವ ಶಂಕಾ ಸಮಾಧಾನ ಕಾರ್ಯಕ್ರಮ ನಡೆದವು.
ಸೌಭಾಗ್ಯ: ಪುಣ್ಯಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿ, ಕ್ಷೇತ್ರದ ಚಾರುಕೀರ್ತಿ ಶ್ರೀಗಳು 48 ದಿನಗಳ ಮೌನವ್ರತ ಕೈಗೊಂಡು ನಿರಂತರವಾಗಿ ಮಹಾಮಂತ್ರ ಜಪಿಸಿದರು. ದಸರಾ ನವರಾತ್ರಿಯ ಸಮಯದಲ್ಲಿ ಚಾವುಂಡರಾಯ ಸಭಾ ಮಂಟಪದಲ್ಲಿ 24 ತೀರ್ಥಂಕರರ ಸಮವಸರಣವನ್ನು ಏಕ ಕಾಲದಲ್ಲಿ ಕಾಣುವ ಸೌಭಾಗ್ಯ ಭಕ್ತರಿಗೆ ಒಲಿದು ಬಂದಿತು.
10 ದಿನ ಸಂಗೀತದ ಮೂಲಕ ಪೂಜಾಷ್ಟಕ ಮತ್ತು ಸರಸ್ವತಿ ಸ್ತೋತ್ರವಾದ ಚಂದ್ರಾರ್ಕ ಕೋಟಿ ಘಟಿತೋಜ್ವಲ ದಿವ್ಯ ಮೂರ್ತೆ ಸ್ತೋತ್ರವನ್ನು ಸಾಂಗ್ಲಿಯ ಕುಬೇರ್ ಚೌಗಲೆ ನಡೆಸಿಕೊಟ್ಟರು. ಮಂಗಳವಾದ್ಯ ಸಂಗೀತ ಸೇವೆಯನ್ನು ತುಕಾರಾಂ ಮಣಿಕಂಠ ತಂಡ, ಸ್ಯಾಕ್ಸೋ ಫೋನ್ ಸೇವೆಯನ್ನು ಗುರುಮೂರ್ತಿ ಮತ್ತು ತಂಡದಿಂದ ನಡೆಯಿತು.
ಅಷ್ಟಾವಧಾನದ ಪೂಜೆಯನ್ನು ಪ್ರತಿಷ್ಟಾಚಾರ್ಯರಾದ ಎಸ್.ಪಿ.ಉದಯಕುಮಾರ್ ಶಾಸ್ತ್ರಿ, ಎಸ್.ಡಿ.ನಂದಕುಮಾರ, ಕಿರಣ್, 10 ದಿನ ತತ್ವಾರ್ಥಸೂತ್ರ ಪಠಣವನ್ನು ರಾಜೇಶ್ ಶಾಸ್ತ್ರಿ ಮತ್ತು ವೃಷಭಾಸ್ ಶಾಸ್ತ್ರಿ ನಡೆಸಿಕೊಟ್ಟರು. ಪ್ರೊ.ಜೀವಂಧರ ಹೋತಪೇಟೆ, ಆಡಳಿತ ಮಂಡಳಿ ಸದಸ್ಯರಾದ ಎಚ್.ಪಿ.ಅಶೋಕ್‌ಕುಮಾರ, ದೇವೇಂದ್ರ ಕುಮಾರ, ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಮತ್ತಿತರರಿದ್ದರು.