ಮೈಸೂರು: ಮಹಿಷಾಸುರ ಮೈಸೂರು ಜನರ ರಕ್ಷಣೆಗಾಗಿ ಹೋರಾಡಿದ ಸ್ವಾಭಿಮಾನಿ ಸಾಂಸ್ಕೃತಿಕ ನಾಯಕನಾಗಿದ್ದು ಈ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಗರದ ದಲಿತ ವೆಲ್‌ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ಮಾನಸಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ಆಚರಿಸಲಾದ ಮೂಲ ನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬದ ಅಂಗವಾಗಿ ನಡೆದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ವೈದಿಕ ಧಾರ್ಮಿಕ ವಕ್ತಾರರು, ಅವರ ಧಾರ್ಮಿಕ ಸಾಹಿತ್ಯ, ಪುರಾಣ ಕಥೆಗಳು, ಪ್ರವಚನಗಳು, ನಾಟಕ, ನಾಟ್ಯಗಳಲ್ಲಿ ಮಹಿಷಾಸುರನನ್ನು ರಾಕ್ಷಸ, ದುಷ್ಟ, ನೀಚ, ಲೋಕಕಂಟಕ ಎಂದೆಲ್ಲಾ ಚಿತ್ರಿಸಿ ಜನರಿಗೆ ಮಹಿಷಾಸುರನ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡಲಾಗಿದೆ.
ಆದರೆ, ಮಹಿಷಾಸುರನ ಸತ್ಯಾಸತ್ಯತೆ ತಿಳಿಯಲು ಹೊರಟ ಚಿಂತಕರಿಗೆ ಕಂಡ ಸತ್ಯಸಂಗತಿಯಂತೆ ಮಹಿಷಾಸುರ ಕೆಟ್ಟವನಲ್ಲ, ದುಷ್ಟನೂ ಅಲ್ಲ, ಲೋಕಕಂಟಕನೂ ಅಲ್ಲ. ಬದಲಿಗೆ ಆತ ಮೈಸೂರು ಜನರ ರಕ್ಷಣೆಗಾಗಿ ಹೋರಾಡಿದ ಸ್ವಾಭಿಮಾನಿ ಸಾಂಸ್ಕೃತಿಕ ನಾಯಕ ಹಾಗೂ ಮೈಸೂರಿನ ಮೂಲ ಅರಸನಾಗಿದ್ದಾನೆ.
ಹೀಗಾಗಿ ಚಾಮುಂಡೇಶ್ವರಿ ಮಹಿಷಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ 5 ವರ್ಷಗಳಿಂದ ಮಹಿಷ ಹಬ್ಬ ಆಚರಿಸಲಾಗುತ್ತಿದೆ. ಈ ಮೂಲಕ ಮಹಿಷಾಸುರನ ಬಗ್ಗೆ ಮಹಿಷಮಂಡಲದ ಮೂಲನಿವಾಸಿಗಳಿಗೆ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಇದಕ್ಕೂ ಮುನ್ನ ನಗರದ ಪುರಭವನದ ಮುಂಭಾಗದಿಂದ ಚಾಮುಂಡಿಬೆಟ್ಟಕ್ಕೆ ಬೈಕ್ ರ್ಯಾಲಿ ನಡೆಸಲಾಯಿತು. ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ದಲಿತ ವೆಲ್‌ಫೇರ್ ಟ್ರಸ್ಟ್‌ನ ಶಾಂತರಾಜು, ಲೇಖಕ ಬನ್ನೂರು ಕೆ.ರಾಜು, ಪ್ರೊ.ಮಹೇಶ್ ಚಂದ್ರ ಗುರು, ಶಬ್ಬೀರ್ ಮುಸ್ತಫಾ ಮತ್ತಿತರರಿದ್ದರು.