ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಗೋವಿಂದಸಿಂಗ್ ಹಾಗೂ ಮಹಿಳಾ ವಿಭಾಗದಲ್ಲಿ ಎ.ಅಕ್ಷತಾ ಪ್ರಥಮಸ್ಥಾನ ಪಡೆದರು. ನಗರದ ಮೈಸೂರು ವಿವಿ ಓವಲ್ ಮೈದಾನದಲ್ಲಿ ಭಾನುವಾರ ನಡೆದ 13ನೇ ಮೈಸೂರು ದಸರಾ ಹಾಪ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಊಟಿಯ ಗೋವಿಂದಸಿಂಗ್ ಗುರಿಮುಟ್ಟುವ ಮೂಲಕ ಅಗ್ರಸ್ಥಾನ ಪಡೆದರು.
ಇವರೊಂದಿಗೆ ಬೆಂಗಳೂರಿನ ಪರ್ವಿಶ್ ದ್ವಿತೀಯ ಹಾಗೂ ವಿಜಯಪುರದ ನಾಗೇಶ್ ಪವಾರ್ ತೃತೀಯ ಸ್ಥಾನ ಪಡೆದರು. ಉಳಿದಂತೆ ಬೆಂಗಳೂರಿನ ಪ್ರವೀಣ್ ಕಾಂಬ್ಳೆ, ಊಟಿಯ ಕುಲಪುದಿಯಾರಿ, ಬೆಳಗಾವಿಯ ಎಂ.ಸಾಯಿದಪ್ಪ, ಬೆಂಗಳೂರಿನ ನಂಜುಂಡಪ್ಪ, ಬಾಗಲಕೋಟೆಯ ಐರಪ್ಪ, ಬೆಳಗಾವಿಯ ರಾಜ ಹಾಗೂ ಮಂಗಳೂರಿನ ಸಂತೋಷ್‌ಕುಮಾರ್ ನಂತರದ ಹತ್ತು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಮಹಿಳಾ ವಿಭಾಗ: ಮಹಿಳೆಯರ ಮ್ಯಾರಥಾನ್‌ನಲ್ಲಿ ದಾವಣರೆಗೆಯ ಎ.ಅಕ್ಷತಾ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಇವರಿಗೆ ತೀವ್ರ ಪೈಪೋಟಿ ನೀಡಿದ ಬೆಂಗಳೂರಿನ ಕುಮಾರಿ ಮಮತಾ ದ್ವಿತೀಯ ಹಾಗೂ ಮೈಸೂರಿನ ಕವನಾ ತೃತೀಯ ಸ್ಥಾನಪಡೆದರು. ಇವರೊಂದಿಗೆ ಮೈಸೂರಿನ ಅಶ್ವಿನಿ, ಗದಗ್‌ನ ಮೇಘನಾ, ಚಳ್ಳಕೆರೆಯ ರಂಜಿತಾ, ಬೆಂಗಳೂರಿನ ಅರ್ಪಿತ, ಮೈಸೂರಿನ ಕೆ.ಎಸ್.ಮೇಘಾ, ಬಳ್ಳಾರಿಯ ಉಷಾ ರೋಹಿಣಿ ಮತ್ತು ಬೆಂಗಳೂರಿನ ದೇವಿಕ ಶ್ರೀಕಾಂತ್ ಮೊದಲ ಹತ್ತು ಸ್ಥಾನಗಳಲ್ಲಿ ಗುರುತಿಸಿಕೊಂಡರು.
ಓಟ: ದಸರೆಯ ಅಂಗವಾಗಿ ನಡೆದ ಪುರುಷರ 10 ಕಿ.ಮೀ ಓಟ ಸ್ಪರ್ಧೆಯಲ್ಲಿ ಬಾದಾಮಿಯ ಮಹಾಕುಟ್ಟೇಶ್ವರ, ಮೈಸೂರಿನ ಚೇತನ್ ಹಾಗೂ ಬೆಳಗಾವಿಯ ಮಲ್ಲೇಶ್ ಪಾಟೀಲ್‌ಮೊದಲ ಮೂರು ಸ್ಥಾನಪಡೆದರು. ಮಹಿಳೆಯರ ವಿಬಾಗದ 6ಕಿ.ಮೀ ಓಟದಲ್ಲಿ ಬೆಂಗಳೂರಿನ ಸ್ಪಪ್ನ ಪಾಟೀಲ್, ಪ್ರಥಮ, ಮಂಗಳೂರಿನ ಚೈತ್ರ ದೇವಾಂಗ್ ದ್ವಿತೀಯ ಹಾಗೂ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ ತೃತೀಯ ಸ್ಥಾನವನ್ನು ಪಡೆದರು.
ನಗರದ ಮೈಸೂರು ವಿವಿ ಓವಲ್ ಮೈದಾನದಿಂದ ಆರಂಭಗೊಂಡ ಹಾಫ್ ಮ್ಯಾರಥಾನ್‌ಗೆ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ನವನೀತ ಹಾಗೂ ಅಂತಾರಾಷ್ಟ್ರೀಯ ಅಥ್ಲೀಟ್ ರೀನಾ ಹಸಿರು ನಿಶಾನೆ ತೋರಿದರು. ವಿವಿಧ ವಯೋಮಾನದ ಸಾವಿರಾರು ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಹೆಜ್ಜೆಹಾಕಿದ ಜಿಲ್ಲಾಧಿಕಾರಿ: ದಸರೆಯ ಅಂಗವಾಗಿ ನಡೆದ ಓಟ ಸ್ಪರ್ಧೆಯಲ್ಲಿ ಬಾಗವಹಿಸಿದ್ದ ಸ್ಪರ್ಧಿಗಳ ಜತೆಗೆ ಜಿಲ್ಲಾಧಿಕಾರಿ ರಂದೀಪ್ ಡಿ. ಸಹ ಓಟದಲ್ಲಿ ಹೆಜ್ಜೆಹಾಕಿದರು. ಜಿಲ್ಲಾಧಿಕಾರಿ ಸಾಮಾನ್ಯ ಸ್ಪರ್ಧಿಗಳೊಂದಿಗೆ ಓಟದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಅಲ್ಲದೆ ಓವಲ್ ಮೈದಾನದಿಂದ ಆರಂಭವಾದ ಓಟಕ್ಕಾಗಿ ನಿಗದಿಗೊಳಿಸಿದ್ದ ಮಾರ್ಗದಲ್ಲೇ ಸಾಗಿದ ಡೀಸಿ ನಿಗದಿತ 10ಕೆ ಗುರಿ ತಲುಪಿ ಯಶಸ್ವಿಯಾದರು.