ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿಸಂರಕ್ಷಿತ ಅರಣ್ಯ ಪ್ರದೇಶದ ಅಂಚಿನಲ್ಲಿರುವ ದಾಸನಹುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೇ ಮುಚ್ಚುವ ಹಂತದಲ್ಲಿದ್ದು, ಇದಕ್ಕೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮದಲ್ಲಿ 150 ಒಕ್ಕಲಿಗ, 20 ಪರಿಶಿಷ್ಟ ಪಂಗಡದ ಕುಟುಂಬ ಇದ್ದು, ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಬಾರಿ 5ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು ತೇರ್ಗಡೆ ಆಗಿ ಬೇರೆ ಶಾಲೆಗೆ ಹೋಗಿದ್ದಾರೆ. ಉಳಿದ 13 ವಿದ್ಯಾರ್ಥಿಗಳು ಯಳಂದೂರು ಪಟ್ಟಣದ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಅಲ್ಲದೆ, ಹೊಸ ದಾಖಲಾತಿಯೂ ಆಗಿಲ್ಲ. ಹಾಗಾಗಿ, ಈ ಶಾಲೆಯಲ್ಲಿ ಈಗ ಶೂನ್ಯ ದಾಖಲಾತಿ ಇದ್ದು, ಶಾಲೆ ಮುಚ್ಚುವ ಭೀತಿ ಎದುರಿಸುತ್ತಿದೆ.
ಸರಿಯಾಗಿ ಪಾಠ ಮಾಡಲ್ಲ: ಶಾಲೆಯಲ್ಲಿ ಸಮರ್ಪಕ ಶಿಕ್ಷಣ ದೊರೆಯುತ್ತಿಲ್ಲ. ಎಲ್ಲಾ ತರಗತಿಗೂ ಒಬ್ಬರೇ ಶಿಕ್ಷಕರು ಪಾಠ ಪ್ರವಚನ ಮಾಡಬೇಕಾದ ಪರಿಸ್ಥಿತಿ ಇದೆ. ಅವರ ಬೋಧನೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಪೋಷಕರಿಂದ ಕೇಳಿಬಂದಿದೆ. ಹೀಗಾಗಿ, 1 ರಿಂದ 5 ತರಗತಿಯ ಒಟ್ಟು 13 ವಿದ್ಯಾರ್ಥಿಗಳು ಇತರೆ ಶಾಲೆಗಳತ್ತ ಮುಖ ಮಾಡಿದ್ದಾರೆ.
ಶಿಕ್ಷಣ ಇಲಾಖೆ ನಿರ್ಲಕ್ಷ: ಶಾಲೆಯ ಬಹುತೇಕ ವಿದ್ಯಾರ್ಥಿಗಳು ಬೇರೆ ಶಾಲೆಗೆ ಸೇಪೆìಡೆಯಾಗಿ ಹಲವು ದಿನ ಕಳೆದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆ, ಬಿಇಒ ಪೋಷಕರ, ವಿದ್ಯಾರ್ಥಿಗಳ ಸಭೆಯನ್ನೇ ನಡೆಸಿಲ್ಲ. ಕನಿಷ್ಠ ಹೊಸದಾಗಿ ಮಕ್ಕಳ ಸೇರ್ಪಡೆಗಾಗಲಿ, ಬೇರೆ ಶಾಲೆಗೆ ಹೋಗಿರುವ ಮಕ್ಕಳ ಮನವೊಲಿಸಿ ವಾಪಸ್ ಕರೆ ತರುವ, ಸೌಲಭ್ಯ ಒದಗಿಸಿಕೊಡುವ ಕೆಲಸವನ್ನೂ ಮಾಡಿಲ್ಲ. ಈ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡೆ, ಸಾಂಸ್ಕೃತಿ ಚಟುವಟಿಕೆಗಳು, ಮೂಲ ಸೌಲಭ್ಯಗಳ ಕೊರತೆ ಸೇರಿ ಅನೇಕ ಸಮಸ್ಯೆಗಳ ಬಗೆಹರಿಸುವಲ್ಲಿ ಮುಂದಾಗದೆ ವಿಳಂಬ ಮಾಡಿರುವ ಪರಿಣಾಮ, ಸರ್ಕಾರಿ ಶಾಲೆಯು ಗ್ರಾಮದಲ್ಲಿ ಮುಚ್ಚುವ ಹಂತಕ್ಕೆ ತಲುಪಿರುವುದು ದೊಡ್ಡ ದುರಂತವೇ ಸರಿ ಎಂದು ಸ್ಥಳೀಯರ ದೂರಾಗಿದೆ.
ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ: ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗಲು ಪೋಷಕರು ಮನಸ್ಥಿತಿ ಒಂದೆಡೆಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಜನಸಾಂದ್ರತೆ ಕಡಿಮೆ ಇರುವುದು ಸಹ ಕಾರಣ ವಾಗಿದೆ. ನುರಿತ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮ ವಸ್ತ್ರ, ಬಿಸಿಯೂಟ, ವಿದ್ಯಾರ್ಥಿ ವೇತನ, ಬೈಸಿಕಲ್, ಉಚಿತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಏಕೆ ಸೇರಿಸುತ್ತಿಲ್ಲ ಎಂದು ಪೋಷಕರನ್ನು ಕೇಳಿದರೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದಿಲ್ಲ, ಮೂಲ ಸೌಕರ್ಯ ಇಲ್ಲ, ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತೇವೆ ಎಂದರೆ ಜನ ಕೀಳು ಮಟ್ಟದಲ್ಲಿ ನೋಡುತ್ತಾರೆ ಎಂದು ಹೇಳುತ್ತಾರೆ.
ದಾಸನಹುಂಡಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಸಮರ್ಪಕವಾಗಿ ಬೋಧನೆ ಮಾಡದ ಕಾರಣ ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಮತ್ತೆ ಪೋಷಕರ ಸಭೆ ಕರೆದು ಇವರ ಮನವೊಲಿಸಿ ಮತ್ತೆ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ ಗಮನ ಹರಿಸು ತ್ತೇನೆ. ಇಲ್ಲಿಗೆ ಬೇರೆ ಶಿಕ್ಷಕರನ್ನು, ಜೊತೆಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮ ವಹಿಸಲಾಗುವುದು.
●ಕೆ.ಕಾಂತರಾಜು, ಬಿಇಒ, ಯಳಂದೂರು.
ಗ್ರಾಮದಲ್ಲಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇಲ್ಲಿಗೆ ನೇಮಕಗೊಂಡಿದ್ದ ಶಿಕ್ಷಕ ಸಮರ್ಪಕವಾಗಿ ಪಾಠ ಪ್ರವಚನಗಳನ್ನು ಮಾಡುತ್ತಿರಲಿಲ್ಲ. ಈ ಕಾರಣ ಮಕ್ಕಳ ಕಲಿಕಾ ದೃಷ್ಟಿಯಿಂದ ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ 50 ವರ್ಷಕ್ಕೂ ಹಳೆಯದಾದ ನಮ್ಮ ಗ್ರಾಮದ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳು ಉತ್ತಮ ಇಬ್ಬರ ಶಿಕ್ಷಕರ ನಿಯೋಜನ ಮಾಡಬೇಕು. ಶಾಲೆಗೆ ಪೋಷಕ ವರ್ಗದ ಸಭೆ ಕರೆದು, ಮತ್ತೆ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ, ಇಲ್ಲಿಗೆ ಮಕ್ಕಳನ್ನು ಸೇರಿಸುವಂತೆ ಮನವೊಲಿಸುವಲ್ಲಿ ಶಿಕ್ಷಣ ಇಲಾಖೆ ಬಿಇಒ ಕ್ರಮವಹಿಸಬೇಕಾಗಿದೆ.
●ಡಿ.ಸಿ.ಬಾಬು, ಗ್ರಾಪಂ ಸದಸ್ಯ, ದಾಸನಹುಂಡಿ ಗ್ರಾಮ
– ಫೈರೋಜ್‌ಖಾನ್