ಹುಣಸೂರು: ಗಿಡಮೂಲಿಕೆ ಔಷಧ,ಕೇಶ ತೈಲ ಮಾರಾಟ ಮಾಡಿ ಜೀವನ ನಿರ್ವಹಣೆಗಾಗಿ ದೂರದ ಸುಡಾನ್‌ಗೆ ಹೋಗಿ ಸಂಕಷ್ಟಕ್ಕೆ ಸಿಲುಕಿ, ಸರಕಾರದ ನೆರವಿನಿಂದ ವಾಪಾಸ್ ಆಗಿರುವ ಹಕ್ಕಿಪಿಕ್ಕಿ ಸಮುದಾಯಕ್ಕೆ ನೆರವಾಗಬೇಕೆಂದು ದಲಿತ ಸಂಘರ್ಷಸಮಿತಿಯ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಆಗ್ರಹಿಸಿದ್ದಾರೆ.
ಸೂಡಾನ್ ದೇಶದಲ್ಲಿ ಮಿಲ್ಟ್ರಿ-ಅರೆಮಿಲ್ಟ್ರಿ ಅಂತರಿಕ ಯುದ್ದದಿಂದ ನರಕಯಾತನೆ ಅನುಭವಿಸಿ ಪ್ರಾಣ ಉಳಿಸಿಕೊಂಡು ಪಕ್ಷಿರಾಜಪುರಕ್ಕೆ ವಾಪಸ್ ಆಗಿರುವವರನ್ನು ಭೇಟಿ ಮಾಡಿದ ದಸಂಸದ ನಿಂಗರಾಜಮಲ್ಲಾಡಿ ನೇತೃತ್ವದ ತಂಡವು ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ15 ಕುಟುಂಬಗಳಿಗೆ ಧೈರ್ಯ ಹೇಳಿ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಯುದ್ಧದ ಭಯಾನಕ ಪರಿಸ್ಥಿತಿಯನ್ನು ಎದುರಿಸಿ ಪ್ರಾಣ ಉಳಿಸಿಕೊಂಡು ಬಂದಿರುವ ಪಕ್ಷಿರಾಜಪುರದ 15 ಕುಟುಂಬಗಳಿಗೆ ಅವರು ವ್ಯಾಪಾರಕ್ಕಾಗಿ ತೆಗೆದುಕೊಂಡು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷಧಿಯನ್ನು ಅಲ್ಲೆ ಬಿಟ್ಟು ಬಂದಿರುವ ಈ ಕುಟುಂಬಗಳು ತುಂಬಾ ಸಂಕಷ್ಟದಲ್ಲಿದ್ದು, ಈ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರದಿಂದ ಪರಿಹಾರವನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕೆಂದು ದಸಂಸ ಒತ್ತಾಯಿಸುತ್ತದೆ ಎಂದು ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮನವಿ ಮಾಡಿದರು.
ವಾಪಸ್ ಆಗಿರುವ ಮಹಿಳೆಯರು ಅಲ್ಲಿನ ಪರಿಸ್ಥಿತಿ ತಾವು ಅನುಭವಿಸಿದ ಯಾತನೆಯನ್ನು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟು, ಪೇಪರ್ ನವರು ಮತ್ತು ಟಿವಿಗಳು ನಾವು ಮಾಡಿಕೊಂಡ ಮನವಿಯನ್ನು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ನಾವು ಪ್ರಾಣ ಉಳಿಸಿಕೊಂಡು ಸ್ವಗ್ರಾಮಕ್ಕೆ ಮರಳಿದ್ದೇವೆಂದು ಮಹಿಳೆಯರು ಪತ್ರಿಕೆಗಳಿಗೆ ಕೃತಜ್ಷತೆ ಸಮರ್ಪಿಸಿದರು.
ನಮ್ಮ ಗ್ರಾಮದ ತಂದೆ, ತಾಯಿ ಮಕ್ಕಳನ್ನು ನೆನೆದುಕೊಂಡು ಬರೆ ಅಳುವುದೇ ನಮ್ಮ ಪರಿಸ್ಥಿತಿಯಾಗಿತ್ತು ಎಂದು ಹೇಳುವ ಮಹಿಳೆಯ ಮಾತಿನಲ್ಲಿ ಒಂದು ರೀತಿಯ ಅಂತಕ ಉಂಟಾಗಿತ್ತು. ಇಂತಹ ಕಿಟಕಿಗಳಿಂದ ಹೊರಗಡೆ ನೋಡಿದರೆ ಬೀದಿಗಳಲ್ಲಿ ಹೆಣಗಳ ರಾಶಿ ಬಿದ್ದಿದ್ದು ಆ ಹೆಣಗಳನ್ನು ಬೀದಿ ನಾಯಿಗಳು ಆಹಾರ ಇಲ್ಲದೆ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಭಯಂಕರವಾದ ಪರಿಸ್ಥಿತಿಯಿಂದ ನಾವುಗಳು ಜೀವ ಉಳಿಸಿಕೊಳ್ಳುವ ನಂಬಿಕೆ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮಗಳ ಸಾವು ಬದುಕಿನ ಪರಿಸ್ಥಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಿತು ಮೈಸೂರು ಜಿಲ್ಲಾಡಳಿತವತಿಯಿಂದ ನಮ್ಮಗಳ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಅಂತಹ ಪರಿಸ್ಥಿತಿಯ ಸೂಡಾನ್ ದೇಶದಿಂದ ನಮ್ಮ ಊರಿಗೆ ಬರುವವರೆಗೂ ನಮ್ಮಗಳಿಂದ ಯಾವುದೇ ಖರ್ಚು ಇಲ್ಲದೆ ಉಚಿತವಾಗಿ ಊಟ ತಿಂಡಿ ಕೊಟ್ಟು ವಿಮಾನದ ಮೂಲಕ ನಮ್ಮ ತವರು ಗ್ರಾಮಕ್ಕೆ ಕರೆ ತರಲು ಕಾರಣವಾದ ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರ ತಂಡದ ಅಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆಂದರು.
ನಮ್ಮ ದೇಶದಲ್ಲೇ ನಾವು ಮಾರಾಟ ಮಾಡುವ ಗಿಡಮೂಲಿಗೆ ಔಷಧಗಳಿಗೆ ಬ್ರಾಂಡ್ ಸಿಕ್ಕರೆ ಇಲ್ಲೇ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಸಿದ್ದರಿದ್ದು, ಅಲೆಮಾರಿ ಸಮುದಾಯಕ್ಕೆ ಮೀಸಲಿರುವ ಅನುದಾನ ಕೊಡಿಸುವ ಬಗ್ಗೆ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆತಂದು ನೆರವಾಗುವಂತೆ ಮನವಿ ಮಾಡಿದರು.
ಈ ವೇಳೆ ದಸಂಸದ ದೇವೇಂದ್ರ, ಕೆಂಪರಾಜು, ಕಟ್ಟೆಮಳಲವಾಡಿ ನಸ್ರುಲ್ಲಾ ಖಾನ್ ಸೇರಿದಂತೆ ಅನೇಕ ದಸಶಸ ಮುಖಂಡರಿದ್ದರು.