ದರ್ಶನ್ ಅವರ “ಒಡೆಯರ್’ ಚಿತ್ರ ಆಗಸ್ಟ್ 16 ರಂದು ಮೈಸೂರಿನಲ್ಲಿ ಸೆಟ್ಟೇರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಸಿನಿಮಾ ಮುಹೂರ್ತ ನಿಗದಿಯಾದ ದಿನದಿಂದಲೇ ಚಿತ್ರದ ಟೈಟಲ್ ವಿರುದ್ಧದ ಧ್ವನಿ ಜೋರಾಗಿ ಕೇಳಿಬರತೊಡಗಿದೆ. ಯಾವ ಕಾರಣಕ್ಕೂ “ಒಡೆಯರ್’ ಚಿತ್ರ ಇಡಬಾರದು ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಪೊಲೀಸ್ ಠಾಣೆಗೆ ದೂರು ಕೂಡಾ ನೀಡಿದೆ. ಸಹಜವಾಗಿಯೇ ಒಂದು ಕುತೂಹಲವಿತ್ತು. ಅದೇನೆಂದರೆ ರಾಜಮಾತೆ ಪ್ರಮೋದಾ ದೇವಿಯರು “ಒಡೆಯರ್’ ಟೈಟಲ್ ಬಗ್ಗೆ ಏನನ್ನುತ್ತಾರೆಂದು. ಈಗ ಅವರು ಟೈಟಲ್ ಬಗ್ಗೆ ಮಾತನಾಡಿದ್ದಾರೆ. “ಒಡೆಯರ್’ ಶೀರ್ಷಿಕೆ ಇಡುವುದಕ್ಕೆ ತಮ್ಮದೇನೂ ತಕರಾರಿಲ್ಲ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, “”ಒಡೆಯರ್’ ಟೈಟಲ್‌ಗೆ ನಮ್ಮದೇನೂ ವಿರೋಧವಿಲ್ಲ. ಆದರೆ, ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಬಾರದು. ಒಂದು ವೇಳೆ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ವಿರೋಧವಿದೆ. ಇವತ್ತು “ಒಡೆಯರ್’ ಎಂದು ತುಂಬಾ ಜನ ಹೆಸರಿಟ್ಟುಕೊಂಡಿದ್ದಾರೆ. ಆ ಬಗ್ಗೆ ನಮ್ಮದೇನೂ ಆಕ್ಷೇಪವಿಲ್ಲ’ ಎಂದಿದ್ದಾರೆ. ಈ ಮೂಲಕ “ಒಡೆಯರ್’ ಶೀರ್ಷಿಕೆ ಮತ್ತೆ ಸುದ್ದಿಯಾಗಿದೆ.
ದರ್ಶನ್ ಅಭಿನಯದ “ಒಡೆಯರ್’ ಚಿತ್ರ ತಮಿಳಿನ “ವೀರಂ’ ಚಿತ್ರದ ರೀಮೇಕ್ ಆಗಿದ್ದು, ಎಂ.ಡಿ.ಶ್ರೀಧರ್ ಈ ಚಿತ್ರದ ನಿರ್ದೇಶಕರು. ನಿರ್ದೇಶಕ ಎಂ.ಡಿ.ಶ್ರೀಧರ್, ಇದೀಗ ಸ್ಕ್ರಿಪ್ಟ್ ಕೆಲಸವನ್ನು ಪೂರ್ಣಗೊಳಿಸಿ, ಒಂದಷ್ಟು ಅಂತಿಮ ಸ್ಪರ್ಶದಲ್ಲಿದ್ದಾರೆ. ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆಯಾಗಿಲ್ಲ. ದರ್ಶನ್‌ಗೆ ಸರಿಯಾದ ನಾಯಕಿಯ ಹುಡುಕಾಟದಲ್ಲಿ ನಿರ್ದೇಶಕರು ಬಿಜಿಯಾಗಿದ್ದು, ಆದಷ್ಟು ಕನ್ನಡದ ನಾಯಕಿಯನ್ನೇ ಆಯ್ಕೆ ಮಾಡಲು ಜೋರು ಹುಡುಕಾಟ ನಡೆಸಿದ್ದಾರೆ.
ಈಗಾಗಲೇ ಕೆಲ ಪಾತ್ರಗಳಿಗೆ ಉಳಿದ ಕಲಾವಿದರ ಜೊತೆ ಮಾತನಾಡಿರುವ ನಿರ್ದೇಶಕರು, ಇಷ್ಟರಲ್ಲೇ ದೊಡ್ಡ ತಾರಾಬಳಗದ ಆಯ್ಕೆಯನ್ನೂ ಅಂತಿಮಗೊಳಿಸಲಿದ್ದಾರೆ.
ಇನ್ನು, ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ಈ ಹಿಂದೆ ದರ್ಶನ್ ಅಭಿನಯದಲ್ಲಿ “ಪೊರ್ಕಿ’ ಮತ್ತು “ಬುಲ್‌ಬುಲ್’ ಚಿತ್ರವನ್ನು ನಿರ್ದೇಶಿಸಿದ್ದರು. ಆ ಎರಡು ಚಿತ್ರಗಳು ಭರ್ಜರಿ ಯಶಸ್ಸು ಪಡೆದಿದ್ದವು. ಈಗ ನಿರ್ದೇಶನದ ಮೂರನೇ ಚಿತ್ರ “ಒಡೆಯರ್’ಗೆ ತಯಾರಿ ನಡೆಸಿರುವ ಎಂ.ಡಿ.ಶ್ರಿಧರ್, “ಹ್ಯಾಟ್ರಿಕ್’ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಸಂದೇಶ್ ನಾಗರಾಜ್ “ಯಜಮಾನ’ ಚಿತ್ರವನ್ನು ನಿರ್ಮಿಸುತ್ತಿದ್ದು, ಮೈಸೂರಿನಲ್ಲಿ ಅದ್ಧೂರಿಯಾಗಿ ಮುಹೂರ್ತ ನಡೆಯಲಿದೆ. ಸದ್ಯ ದರ್ಶನ್ “ಯಜಮಾನ’ ಚಿತ್ರದಲ್ಲಿ ಬಿಝಿಯಾಗಿದ್ದು, ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ.