“ಎಲ್ಲಾ ಚಾನೆಲ್‌ಗಳ ಕ್ಯಾಮೆರಾ ಆನ್ ಆಗಿದೆಯಾ … ಎಷ್ಟ್ ಜನ ಕ್ಯಾಮೆರಾಮೆನ್‌ಗಳಿದ್ದೀರಾ ಕೈ ಎತ್ರಪ್ಪಾ, ಎಲ್ಲಾ ಒಂದ್ಸಲ ಕೈ ಎತ್ತಿ. ಬರ್ರಣ್ಣ, ಎಲ್ರೂ ಈ ಕಡೆ ಬರ್ರಣ್ಣ… ವೇದಿಕೆಗೆ ಬರ್ಬೇಕು ಎಲ್ರೂ ಬನ್ನಿ ಬನ್ನಿ …’ – ಹೀಗೆ ಹೇಳಿದ್ದು ಬೇರಾರೂ ಅಲ್ಲ, ದರ್ಶನ್. ಅವರು ಆ ಕಲರ್‌ಫುಲ್ ವೇದಿಕೆಗೆ ಆಹ್ವಾನಿಸಿದ್ದು ಎಲ್ಲಾ ವಾಹಿನಿಗಳ ಕ್ಯಾಮೆರಾಮೆನ್‌ಗಳನ್ನ. ಅಷ್ಟಕ್ಕೂ ಅವರು ಅವರನ್ನೆಲ್ಲಾ ಆಹ್ವಾನಿಸಲು ಕಾರಣ ಅವರ “ಚಕ್ರವರ್ತಿ’ ಚಿತ್ರದ ಆಡಿಯೋ ಬಿಡುಗಡೆ ಮಾಡಲು.
ಅದಕ್ಕೂ ಮುನ್ನ, ಸಿನಿಮಾ ಬಗ್ಗೆ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರೆಲ್ಲರೂ ಮಾತಾಡಿಯಾಗಿತ್ತು. ಕೊನೆಯಲ್ಲಿ ದರ್ಶನ್ ಕೂಡ ಸಿನಿಮಾ ಕುರಿತು ಸವಿಸ್ತಾರವಾಗಿ ಮಾತಾಡೋಕೆ ವೇದಿಕೆಗೆ ಬಂದರು. ಮೈಕ್ ಹಿಡಿದು, ಮಾತಿಗೆ ನಿಂತ ದರ್ಶನ್, ಮೊದಲು ಮಾಧ್ಯಮಕ್ಕೆ ಥ್ಯಾಂಕ್ಸ್ ಅಂತಾನೇ ಮಾತು ಶುರುಮಾಡಿದರು. ಸಿನಿಮಾ ಶುರುವಾದಾಗ ಮಾಧ್ಯಮದ ಜತೆ ಮಾತಾಡಿದ್ದೆ. ಈಗ ಸಿನಿಮಾ ಮುಗಿದಿದೆ.
ಮತ್ತೆ ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ ಎನ್ನುತ್ತಲೇ “ಚಕ್ರವರ್ತಿ’ ಸಿನಿಮಾದ ಆಡಿಯೋ ಬಿಡುಗಡೆ ಮಾಡಲು ಅಂದು ಅಲ್ಲಿದ್ದ ಎಲ್ಲಾ ಚಾನೆಲ್‌ಗಳ ಕ್ಯಾಮೆರಾಮೆನ್‌ಗಳನ್ನು ಪ್ರೀತಿಯಿಂದ ವೇದಿಕೆಗೆ ಕರೆದಿದ್ದು ವಿಶೇಷವಾಗಿತ್ತು. ದರ್ಶನ್ ಕ್ಯಾಮೆರಾಮೆನ್‌ಗಳನ್ನು ಕರೆದು ಅವರ ಮೂಲಕವೇ ಆಡಿಯೋ ರಿಲೀಸ್ ಮಾಡಿಸುತ್ತಾರೆ ಅಂತ ಯಾರೊಬ್ಬರೂ ಅಂದು ಭಾವಿಸಿರಲಿಲ್ಲ. ದರ್ಶನ್ ಎಲ್ಲಾ ವಾಹಿನಿಗಳ ಕ್ಯಾಮೆರಾಮೆನ್‌ಗಳನ್ನು ವೇದಿಕೆಗೆ ಆಹ್ವಾನಿಸಿದಾಗ, ಅಲ್ಲಿ ಶಿಳ್ಳೆ, ಚಪ್ಪಾಳೆಗಳ ಸದ್ದು ಹೊರತಾಗಿ ಬೇರೇನೂ ಇರಲಿಲ್ಲ.
ಒಬ್ಬೊಬ್ಬರನ್ನೇ ವೇದಿಕೆಗೆ ಕರೆದ ದರ್ಶನ್, ಎಲ್ಲರನ್ನೂ ಪ್ರೀತಿಯಿಂದ ತಬ್ಬಿಕೊಂಡು, ಕೈ ಕುಲುಕಿ, ನೀವೇ ಆಡಿಯೋ ಬಿಡುಗಡೆ ಮಾಡಿ ಅಂತ ಹೇಳುವ ಮೂಲಕ ಹೊಸದೊಂದು ಟ್ವಿಸ್ಟ್ ಕೊಟ್ಟರು. ಯಾಕೆಂದರೆ, ಅಂದು “ಚಕ್ರವರ್ತಿ’ ಆಡಿಯೋ ರಿಲೀಸ್ ಫಂಕ್ಷನ್‌ಗೆ ಚಿತ್ರರಂಗದ ಗಣ್ಯರೆಲ್ಲ ಆಗಮಿಸಿದ್ದರು. ಅವರೆಲ್ಲರೂ ವೇದಿಕೆಗೆ ಬಂದು, ಆಡಿಯೋ ಸಿಡಿ ಬಿಡುಗಡೆ ಮಾಡುತ್ತಾರೆ ಅಂತಾನೇ ಅಲ್ಲಿದ್ದವರು ನಿರೀಕ್ಷಿಸಿದ್ದರು. ಆದರೆ, ದರ್ಶನ್ ಇದ್ದಕ್ಕಿದ್ದಂತೆಯೇ ಕ್ಯಾಮೆರಾಮೆನ್‌ಗಳನ್ನ ವೇದಿಕೆಗೆ ಕರೆದಿದ್ದು ನಿಜಕ್ಕೂ ಅಚ್ಚರಿ ತಂದಿತ್ತು.
ದರ್ಶನ್ “ಚಕ್ರವರ್ತಿ’ ಬಗ್ಗೆ ಮಾತಾಡಿದ ಬಳಿಕ, “ಎಲ್ಲಾ ಕ್ಯಾಮೆರಾಗಳು ಆನ್ ಆಗಿದೆಯಾ, ಎಷ್ಟ್ ಜನ ಕ್ಯಾಮೆರಾಮೆನ್‌ಗಳಿದ್ದೀರಿ ಕೈ ಎತ್ರಪ್ಪಾ, ಕೈ ಎತ್ತಿ ಎಲ್ಲರೂ ಬರ್ರಣ್ಣಾ … ಎಲ್ಲಾ ಕ್ಯಾಮೆರಾಗಳ ಫ್ರೆಮ್ ಕರೆಕ್ಟ್ ಆಗಿದೆಯಾ, ಫ್ರೆಮ್‌ಗೆ ಕರೆಕ್ಟ್ ಆಗಿ ಎಲ್ಲರೂ ಸಿಗ್ತಿವಾ … ಬರ್ರಪ್ಪಾ, ನಿಮ್ ಕ್ಯಾಮೆರಾಗಳನ್ನೆಲ್ಲಾ ಅಲ್ಲೇ ಬಿಟ್ಟು ಬನ್ನಿ. ನೀವೇ ಆಡಿಯೋ ಸಿಡಿ ರಿಲೀಸ್ ಮಾಡಿ, ತೆಗಿರಪ್ಪಾ … ಅಂತ ಪ್ರೀತಿಯಿಂದ ಹೇಳಿದ ಮಾತುಗಳಿಗೆ ಅಲ್ಲಿ ಮತ್ತದೇ ಜೋರು ಶಿಳ್ಳೆ ಚಪ್ಪಾಳೆಗಳ ಸದ್ದು ಮೇರೆ ಮೀರಿತ್ತು.
ಸುಮಾರು ಹದಿನೈದಕ್ಕೂ ಹೆಚ್ಚು ಮಂದಿ ವಾಹಿನಿಗಳ ಕ್ಯಾಮೆರಾಮೆನ್‌ಗಳು ವೇದಿಕೆಗೆ ಹೋಗಿ, ದರ್ಶನ್ ಕೊಟ್ಟ ಸಿಡಿ ಬಾಕ್ಸ್ ಹಿಡಿದು ಒಟ್ಟಿಗೆ ಓಪನ್ ಮಾಡಿ ಆಡಿಯೋ ರಿಲೀಸ್ ಮಾಡಿ ಹಾಗೊಂದು ಸ್ಮೈಲ್ ಕೊಡುವ ಹೊತ್ತಿಗೆ ದರ್ಶನ್, ಸಿನಿಮಾದ ಕಲಾವಿದರು, ತಂತ್ರಜ್ಞರನ್ನೆಲ್ಲಾ ವೇದಿಕೆಗೆ ಆಹ್ವಾನಿಸಿ, ಕ್ಯಾಮೆರಾಮೆನ್‌ಗಳ ನಡುವೆಯೇ ಕೆಳಗೆ ಕುಳಿತು ಅವರೊಂದಿಗೆ ಒಂದು ಫೋಟೋ ತೆಗೆಸಿಕೊಂಡರು.
ಅಂದು ನಿರ್ಮಾಪಕ ಸಿದ್ಧಾಂತ್, ಕಾರ್ಯಕಾರಿ ನಿರ್ಮಾಪಕ ಅಣಜಿ ನಾಗರಾಜ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕುಮಾರ್‌ಬಂಗಾರಪ್ಪ, ಆದಿತ್ಯ, ಸೃಜನ್ ಲೋಕೇಶ್, ಯಶಸ್, ಸತ್ಯ, ದೀಪಾಸನ್ನಿಧಿ ಇತರರು ಫೋಟೋಗೆ ಫೋಸ್ ಕೊಟ್ಟರು.