Advertisement
ಅವರ ಮಾತಿನಲ್ಲಿ ಅರ್ಥವಿತ್ತು. ಒಂದು ಸಿನಿಮಾದ ಗೆಲುವು ಇಡೀ ಚಿತ್ರರಂಗಕ್ಕೆ ದೊಡ್ಡ ಸ್ಫೂರ್ತಿ ನೀಡುತ್ತದೆ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಅದರಲ್ಲೂ ನಮ್ಮ ನೆಲದ, ನಮ್ಮ ಮಣ್ಣಿನ ಕಥೆಗಳು ಗೆದ್ದಾಗಲಂತೂ ಆ ಗೆಲುವಿನ ಮಹತ್ವ ಇನ್ನೂ ಹೆಚ್ಚಿರುತ್ತದೆ. 2022ರಲ್ಲಿ “ಕಾಂತಾರ’ ಚಿತ್ರ ನಮ್ಮ ನೆಲದ ಚಿತ್ರವಾಗಿ ಅಭೂತಪೂರ್ವ ಗೆಲುವು ಸಾಧಿಸಿತು. ಆ ಚಿತ್ರ ವಿಶ್ವಮಟ್ಟದಲ್ಲಿ ಮನ್ನಣೆ ಪಡೆಯುತ್ತದೆ ಎಂದು ಸ್ವತಃ ಆ ಸಿನಿಮಾ ತಂಡ ಕೂಡಾ ಅಂದುಕೊಂಡಿರಲಿಲ್ಲ. ಸಿನಿಮಾ ಸಹವಾಸ ಸಾಕು ಎಂದುಕೊಂಡಿದ್ದವರನ್ನು, ಸಿನಿಮಾದಲ್ಲಿ ಕಥೆಯೇ ಇರಲ್ಲ ಎಂದುಕೊಂಡು ಚಿತ್ರಮಂದಿರದಿಂದ ದೂರವೇ ಉಳಿದಿದ್ದವರನ್ನು ಮತ್ತೆ ಸಿನಿಮಾ ರಂಗಕ್ಕೆ, ಚಿತ್ರಮಂದಿರಕ್ಕೆ ಕರೆತಂದಿತು. ಈಗ “ಕಾಟೇರ’ ಕೂಡಾ ಅದೇ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಸದ್ಯ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಮುಂದೆ ಪರಭಾಷೆಗಳಿಗೂ ಲಗ್ಗೆ ಇಟ್ಟು ಅಲ್ಲೂ ಜನಮನ ಗೆಲ್ಲುವ ಸೂಚನೆ ನೀಡಿದೆ. ಈ ಮೂಲಕ ವರ್ಷಾರಂಭದಲ್ಲೇ ಚಿತ್ರರಂಗಕ್ಕೆ ಜೋಶ್ ತುಂಬಿದ್ದು ಖ್ಯಾತಿ “ಕಾಟೇರ’ ಸಿನಿಮಾದ್ದು.
Related Articles
Advertisement
ಒಂದು ಸಿನಿಮಾಕ್ಕೆ ಬೇಕಾಗಿರೋದು ನಮ್ಮ ನೆಲದ, ಸೊಗಡಿನ ಕಥೆ ಎಂಬುದನ್ನು ಮತ್ತೂಮ್ಮೆ ಸಾಬೀತು ಮಾಡಿದೆ “ಕಾಟೇರ’. ಯಾವುದೋ ಊರಿನ ಕಥೆಯನ್ನು ಪ್ರೇಕ್ಷಕನಿಗೆ ಬಲವಂತವಾಗಿ ಒಪ್ಪಿಸೋದಕ್ಕೆ, ನಮ್ಮ ನೆಲದ, ನಮ್ಮ ಜನ ಅನುಭವಿಸಿದ, ಇವತ್ತಿಗೂ ಕೆಲವು ಕಡೆಗಳಲ್ಲಿ ಆಚರಣೆಯಲ್ಲಿರುವ ಕಥೆಯನ್ನು ಹೇಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆ ನಿಟ್ಟಿನಲ್ಲಿ ಊರಿನ ನೇಟಿವಿಟಿಗೆ ತಕ್ಕಂತೆ ಕಥೆ ಹೇಳಿದ್ದು “ಕಾಟೇರ’ದ ದೊಡ್ಡ ಪ್ಲಸ್ ಮಾತು ಕಮ್ಮಿ ಕೆಲಸ ಜಾಸ್ತಿ.
ಇನ್ನು, ಚಿತ್ರರಂಗದಲ್ಲಿ ಒಂದಷ್ಟು ಮಂದಿ ನಿರ್ಮಾಪಕ, ನಿರ್ದೇಶಕರಿಗೆ ತಮ್ಮ ಸಿನಿಮಾ ಬಗ್ಗೆ ತುಂಬಾನೇ ಹೇಳಿಕೊಳ್ಳಬೇಕು, ಆ ಸಿನಿಮಾ ಬಗ್ಗೆ ಅತಿಯಾಗಿ ಮಾತನಾಡಬೇಕೆಂಬ ಆಸೆ. ಅದೇ ಕಾರಣದಿಂದ ಸಿನಿಮಾದೊಳಗಿನ ಸಣ್ಣ ಸಣ್ಣ ವಿಚಾರವನ್ನು ಪ್ರಮೋಶನ್‌ಗೆ ಬಳಸುತ್ತಾರೆ. ಅಷ್ಟೆಲ್ಲಾ ಮಾತನಾಡಿದ ಆ ಸಿನಿಮಾ ತೆರೆಕಂಡ ನಂತರ ಸೋಲುತ್ತದೆ. ಅಲ್ಲಿಗೆ ಒಂದು ಸ್ಪಷ್ಟ, ಸಿನಿಮಾ ಬಗ್ಗೆ ನಾವು ಮಾತನಾಡಬಾರದು, ಸಿನಿಮಾ ನೋಡಿ ಜನರೇ ಮಾತನಾಡುವಂತಿರಬೇಕು ಎಂಬುದು. ಆ ವಿಚಾರದಲ್ಲಿ “ಕಾಟೇರ’ದ ಸಾಧನೆ ದೊಡ್ಡದು.
ಸಿನಿಮಾ ಆರಂಭವಾಗಿ ಬಿಡುಗಡೆಯಾಗುವವರೆಗೂ ಚಿತ್ರತಂಡ ಅತಿಯಾಗಿ ಎಲ್ಲೂ ಮಾತನಾಡಿಲ್ಲ. ಮಾಧ್ಯಮಗಳ ಪ್ರಶ್ನೆಗಳಿಗೂ ಎಷ್ಟು ಬೇಕೋ, ಅಷ್ಟೇ ಮಾತನಾಡಿ, ಸಿನಿಮಾವನ್ನು ಮಾತನಾಡಲು ಬಿಟ್ಟಿತು. ಇವತ್ತು ಸಿನಿಮಾ ನೋಡಿ ಜನ ಮಾತನಾಡುತ್ತಿದ್ದಾರೆ. ಇದೇ ಕಾರಣದಿಂದ ದರ್ಶನ್ ಒಂದು ಹೇಳಿದ್ದು, “ನಾನು ಸಿನಿಮಾ ಬಿಡುಗಡೆ ಪೂರ್ವದಲ್ಲಿ ಹೆಚ್ಚು ಮಾತನಾಡಿಲ್ಲ. ಏಕೆಂದರೆ ಪ್ರತಿ ಬಾರಿ ನಾವೇ ಮಾತನಾಡಿದರೆ ಚೆನ್ನಾಗಿರಲ್ಲ, ಬದಲು ಸಿನಿಮಾ ಬಿಡುಗಡೆ ನಂತರ ಮಾತನಾಡಿದರೆ ಅದಕ್ಕೊಂದು ಅರ್ಥವಿರುತ್ತದೆ ಎಂದು’. ಅದು ಸತ್ಯ ಕೂಡಾ.
ಈ ಸಿನಿಮಾ ತಯಾರಾಗಿದ್ದು ಕೇವಲ ಕನ್ನಡದಲ್ಲಿ. ಚಿತ್ರತಂಡಕ್ಕೂ ಇದನ್ನು ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಆದರೆ, ಈಗ ಸಿನಿಮಾ ಬಿಡುಗಡೆಯಾದ ನಂತರ ಈ ಚಿತ್ರ ಕನ್ನಡದಲ್ಲಿ ಹಿಟ್ ಆದ ಪರಿ ಕಂಡು ಬೇರೆ ಬೇರೆ ಭಾಷೆಗಳಿಂದ ಈ ಸಿನಿಮಾಕ್ಕೆ ಬೇಡಿಕೆ ಬರುತ್ತಿರುವುದಂತೂ ಸುಳ್ಳಲ್ಲ. ಇನ್ನು, ಗ್ಲಾಮರ್‌ಗಿಂತ ಗ್ರಾಮರ್ ಮುಖ್ಯ ಎಂದು ಮತ್ತೂಮ್ಮೆ ಸಾಬೀತು ಮಾಡಿದ ಸಿನಿಮಾ “ಕಾಟೇರ’. ಈ ಸಿನಿಮಾ ನೋಡಿದವರಿಗೆ ಎಲ್ಲೂ ಗ್ಲಾಮರ್ ಕಾಣುವುದಿಲ್ಲ. ಆದರೆ, ಸಿನಿಮಾ ಮಾತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈ ಮೂಲಕ ಗ್ಲಾಮರ್ ಗಿಂತ ಸಿನಿಮಾಕ್ಕೆ ಬೇಕಾಗಿರೋದು ಗ್ರಾಮರ್ ಎಂಬುದನ್ನು ಸಾಬೀತು ಮಾಡಿದೆ.
ನಾವು ಸಿನಿಮಾ ಚೆನ್ನಾಗಿ ಮಾಡಿದ್ದೆವು, ಆದರೆ ಜನ ಬರಲಿಲ್ಲ ಎಂದು ಪ್ರೇಕ್ಷಕರನ್ನು ದೂರುವ ಒಂದು ವರ್ಗ ಚಿತ್ರರಂಗದಲ್ಲಿದೆ. ಆದರೆ, ಸಿನಿಮಾ ನಿಜವಾಗಿಯೂ ಚೆನ್ನಾಗಿದ್ದರೆ, ಆ ಸಿನಿಮಾವನ್ನು ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಯಾವ ಮಳೆ, ಗಾಳಿ, ಷಡ್ಯಂತ್ರ, ಥಿಯೇಟರ್ ಸಮಸ್ಯೆ… ಎಲ್ಲವನ್ನು ದಾಟಿ ಮುನ್ನುಗ್ಗುತ್ತದೆ ಎಂಬುದಕ್ಕೆ “ಕಾಟೇರ’ ಒಂದು ಒಳ್ಳೆಯ ಉದಾಹರಣೆ. ಸದ್ಯ “ಕಾಟೇರ’ದ ಜೋಶ್ ಅನ್ನು ಮುಂದವರೆಸಿಕೊಂಡು ಹೋಗುವಂತಹ ಗೆಲುವು ಬೇರೆ ಸಿನಿಮಾಗಳಿಂದ ಸಿಕ್ಕರೆ ಈ ವರ್ಷ ಸ್ಯಾಂಡಲ್‌ವುಡ್ ಮತ್ತೂಮ್ಮೆ ಮಿಂಚುವುದರಲ್ಲಿ ಯಾವುದೇ ಸಂದೇಹವಿಲ್ಲ
100 ಕೋಟಿ ಕ್ಲಬ್‌ಗ ಕಾಟೇರ
ಬಿಡುಗಡೆಯಾದ ದಿನದಿಂದಲೇ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುಂದೆ ಸಾಗಿದ ಚಿತ್ರ ಈಗ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎನ್ನಲಾಗಿದೆ. ಈ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದರ್ಶನ್ ಸಿನಿಮಾದ ಹವಾ ಜೋರಾಗಿಯೇ ಇದೆ ಎಂಬುದು ಸಾಬೀತಾಗಿದೆ.
ರವಿಪ್ರಕಾಶ್ ರೈ