ಶಹಾಪುರ: ತಾಲೂಕಿನ ದರ್ಶನಾಪುರ ಗ್ರಾಮದಲ್ಲಿ 2021, ಜ. 21ರಂದು ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳ ವಿರುದ್ಧದ ತನಿಖಾ ವರದಿಯನ್ನು ನ್ಯಾಯಾಂಗಕ್ಕೆ ಸಲ್ಲಿಸಲಾಗುತ್ತದೆ ಎಂದು ಎಸ್ಪಿ ಡಾ| ವೇದಮೂರ್ತಿ ತಿಳಿಸಿದರು.
ನಗರದ ವೃತ್ತ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣ ಕುರಿತು ಮಾಹಿತಿ ನೀಡಿದರು.
ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ವಿದ್ಯಾರ್ಥಿ ಮಂಜುನಾಥ ಮಲ್ಲಪ್ಪ ಪೂಜಾರಿ (18) ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಕುರಿತು ಮೃತನ ತಂದೆ ಗೋಗಿ ಠಾಣೆಗೆ ದೂರು ಸಲ್ಲಿಸಿದ್ದರು. ಸಿಆರ್‌ಪಿಸಿ ರೀತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯಿಂದ ಆರೋಪಿತರು ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆ ಒಂದು ವರ್ಷದಿಂದ ಸಮಗ್ರ ತನಿಖೆ ಕೈಗೊಳ್ಳಲಾಗಿದ್ದು, ಆರೋಪಿಗಳು ಸಂಚು ರೂಪಿಸಿ ಯುವಕನ ಶವವನ್ನು ದರ್ಶನಾಪುರ ಗ್ರಾಮದ ಶಾಲಾ ಕಾಂಪೌಂಡ್ ಬಳಿ ನೇಣು ಬಿಗಿದ ರೀತಿಯಲ್ಲಿ ಹಾಕಲಾಗಿತ್ತು. ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅವಳ ತಂದೆ ಸೇರಿದಂತೆ ಇತರೆ ನಾಲ್ವರು ಸೇರಿ ಈ ಕೃತ್ಯ ಎಸಗಿರುವುದು ತನಿಖಾ ವೇಳೆ ತಿಳಿದು ಬಂದಿದೆ.
ಆರೋಪಿತರಾದ ಅಶೋಕ ಬಂಗಾರಿ, ಭೀಮರಡ್ಡಿ ಮಕಾಶಿ, ಮಲ್ಲಪ್ಪ ಮಕಾಶಿ, ರಾಯಪ್ಪ ಮಕಾಶಿ ಮತ್ತು ರಾಮಣ್ಣ ಬಿರಾದಾರ ಪೂರ್ವ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಸುರಪುರ ಉಪ ವಿಭಾಗ ಡಿವೈಎಸ್ಪಿ ಡಾ| ದೇವರಾಜ ಮಾರ್ಗದರ್ಶನದಲ್ಲಿ ಶಹಾಪುರ ವೃತ್ತ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಗೋಗಿ ಠಾಣೆ ಪಿಎಸ್‌ಐ ಅಯ್ಯಪ್ಪ ಹಾಗೂ ಪೊಲೀಸ್ ಸಿಬ್ಬಂದಿ ತನಿಖೆ ನಡೆಸುವ ಮೂಲಕ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವೃತ್ತ ಠಾಣೆ ಸಿಪಿಐ ಚನ್ನಯ್ಯ ಹಿರೇಮಠ, ಪಿಐ ಶ್ರೀನಿವಾಸ ಅಲ್ಲಾಪೂರೆ, ಭೀ.ಗುಡಿ ಪಿಎಸ್‌ಐ ಸಂತೋಷ ರಾಠೊಡ ಉಪಸ್ಥಿತರಿದ್ದರು.