ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಬುಧವಾರ(ಜು.24ರಂದು) ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ.
ಮಂಗಳವಾರ ರಾತ್ರಿ (ಜು.23ರಂದು) ನಟ ದರ್ಶನ್ ಗೆ ಅನ್ಯಾಯವಾಗಿದಲ್ಲಿ ನ್ಯಾಯಕೊಡುಸುತ್ತೇನೆ ಎಂದು ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK SHIVAKUMAR) ಹೇಳಿದ್ದರು.
ಅದರಂತೆ ಬುಧವಾರ ಬೆಳಗ್ಗೆ ವಿಜಯಲಕ್ಷ್ಮೀ(Vijayalakshmi Darshan) ಹಾಗೂ ದಿನಕರ್ ಡಿಸಿಎಂ ಅವರನ್ನು ಭೇಟಿ ಆಗಿದ್ದಾರೆ.
ಭೇಟಿ ಆದದ್ದು ಯಾಕೆ?: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy case) ಮಾತನಾಡುವ ಸಲುವಾಗಿ ಡಿಕೆಶಿ ಅವರನ್ನು ವಿಜಯಲಕ್ಷ್ಮೀ ಭೇಟಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಸಂಬಂಧ ಭೇಟಿ ಆಗಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಅವರೊಂದಿಗೆ ನಿರ್ದೇಶಕ ಪ್ರೇಮ್ ಕೂಡ ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ನಿವಾಸದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ಪ್ರೇಮ್ “ನಾನು ಆಗಾಗ ಡಿಕೆಶಿ ಅವರನ್ನು ಭೇಟಿ ಮಾಡೋಕೆ ಆಗಾಗ ಬರುತ್ತಲೇ ಇರುತ್ತೇನೆ. ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ದರ್ಶನ್ ಪತ್ನಿ ಮತ್ತು ದಿನಕರ್ ತೂಗುದೀಪ್ ಅವರು ಡಿಕೆಶಿ ಅವರ ಭೇಟಿಗೆ ಬಂದಿದ್ದರು. ನನ್ನ ಮಗ ಮತ್ತು ದರ್ಶನ್ ಮಗ ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್ ಈಗ ಬೇರೆ ಸ್ಕೂಲ್‌ಗೆ ಶಿಫ್ಟ್ ಆಗಿದ್ದಾನೆ. ಹೀಗಾಗಿ ವಿಜಯಲಕ್ಷ್ಮೀ ಅವರು ಭೇಟಿಯಾದರು ಅಷ್ಟೇ ಎಂದು ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ.
ದರ್ಶನ್ ಅವರು ನನ್ನ ಸ್ನೇಹಿತ ಆದರೆ ಈ ಭೇಟಿಗೂ ಪ್ರಕರಣಕ್ಕೂ ನನಗೆ ಸಂಬಂಧವಿಲ್ಲ ಎಂದು ಪ್ರೇಮ್ ಹೇಳಿದ್ದಾರೆ.
ಇತ್ತ ವಿಜಯಲಕ್ಷ್ಮೀ ಭೇಟಿ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ. ವಿಜಯಲಕ್ಷ್ಮೀ ಹಾಗೂ ಅವರ ಸಹೋದರ ಭೇಟಿಯಾಗಿ ದರ್ಶನ್ ಪುತ್ರ ವಿನೀಶ್ ಅವರ ಶಾಲೆಯ ವಿಚಾರವಾಗಿ ಮಾತನಾಡಿದ್ದಾರೆ. ಪ್ರಕರಣ ಸಂಬಂಧ ಯಾವ ಚರ್ಚೆಯೂ ಆಗಿಲ್ಲ. ಇದರಲ್ಲಿ ಮಧ್ಯ ಪ್ರವೇಶ ಮಾಡಲ್ಲ ಎಂದು ಅವರು ಹೇಳಿದ್ದಾರೆ.
ಮಗನನ್ನು ಮತ್ತೆ ನಮ್ಮ ಸ್ಕೂಲ್ ಗೆ ಸೇರಿಸಿಕೊಳ್ಳಿ ಎಂದಿದ್ದಾರೆ. ಈ ಬಗ್ಗೆ ನಾನು ಪ್ರಾಂಶುಪಾಲರಿಗೆ ಹೇಳುತ್ತೇನೆ ಎಂದಿದ್ದೇನೆ ಅಷ್ಟೇ. ರೇಣುಕಾಸ್ವಾಮಿ ಪ್ರಕರಣ ಕೋರ್ಟ್ ನಲ್ಲಿದೆ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ. ಇದರಲ್ಲಿ ನಾನು ಯಾವುದೇ ರೀತಿ ಮಧ್ಯ ಪ್ರವೇಶ ಮಾಡಲ್ಲ ಎಂದಿದ್ದಾರೆ.