ನಟ ದರ್ಶನ್ ಈಗಾಗಲೇ ಸಂಗೊಳ್ಳಿ ರಾಯಣ್ಣ ಆಗಿದ್ದಾರೆ. “ಕುರುಕ್ಷೇತ್ರ’ದಲ್ಲಿ ದುರ್ಯೋಧನ ಆಗಿ ಅಬ್ಬರಿಸಿದ್ದಾರೆ. ಮದಕರಿ ನಾಯಕ ಆಗಲು ಸಿದ್ಧತೆ ಜೋರಾಗಿದೆ. ಈ ನಡುವೆಯೇ ದರ್ಶನ್ ಮತ್ತೂಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಅದು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯ ಪಾತ್ರ ಮಾಡುವುದು. ದರ್ಶನ್ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಐತಿಹಾಸಿ, ಪೌರಾಣಿಕ ಸಿನಿಮಾಗಳಿಗೂ ಹೆಚ್ಚಿನ ಮಹತ್ವ ಕೊಡುತ್ತಾರೆ. ಪಾತ್ರಕ್ಕೆ ತಾನು ಜೀವ ತುಂಬಬಲ್ಲೆ ನಂಬಿಕೆ ಬಂದರೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಈಗ ಶ್ರೀಕೃಷ್ಣದೇವರಾಯ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರ ಈ ಆಸೆಗೆ ವೇದಿಕೆಯಾಗಿದ್ದು ಹಂಪಿ ಉತ್ಸವ. ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಭಾಗಿಯಾಗಿರುವ ದರ್ಶನ್‌ಗೆ ಮಾಧ್ಯಮಗಳಿಂದ ಪ್ರಶ್ನೆಯೊಂದು ಎದುರಾಗುತ್ತದೆ. ಅದು “ನೀವು ಶ್ರೀಕೃಷ್ಣದೇವರಾಯನ ಪಾತ್ರ ಮಾಡುತ್ತೀರಾ’ ಎಂದು. ಇದಕ್ಕೆ ಉತ್ತರಿಸಿದ ದರ್ಶನ್, “ನಿರ್ಮಾಪಕ ಮುನಿರತ್ನ ಅವರು ಅವಕಾಶ ಕೊಟ್ಟರೆ ಖಂಡಿತಾ ಮಾಡುತ್ತೇನೆ’ ಎನ್ನುವ ಮೂಲಕ ತಾನು ರೆಡಿ ಎಂದಿದ್ದಾರೆ.
ಇನ್ನು, ಮುನಿರತ್ನ ಕೂಡಾ ತಾನು ಶ್ರೀಕೃಷ್ಣದೇವರಾಯ ಅವರ ಕುರಿತಾದ ಸಿನಿಮಾ ನಿರ್ಮಿಸಲು ಸಿದ್ಧ ಎನ್ನುವ ಮೂಲಕ ಮುಂದಿನ ಕುತೂಹಲಕ್ಕೆ ನಾಂದಿಯಾಡಿದ್ದಾರೆ. ಹಾಗಾದರೆ ಶ್ರೀಕೃಷ್ಣದೇವರಾಯ ಕುರಿತಾದ ಸಿನಿಮಾ ಆಗುತ್ತಾ ಎಂದರೆ ಈಗಲೇ ಉತ್ತರಿಸೋದು ಕಷ್ಟ. ಏಕೆಂದರೆ ಅದಕ್ಕೆ ಸಾಕಷ್ಟು ಪೂರ್ವತಯಾರಿ ಬೇಕು. ಅದಕ್ಕಿಂತ ಹೆಚ್ಚಾಗಿ ಎಲ್ಲವೂ ಕೂಡಿಬರಬೇಕು. ಒಂದು ವೇಳೆ ದರ್ಶನ್ ಹಾಗೂ ಮುನಿರತ್ನ ಇಬ್ಬರೂ ಮನಸ್ಸು ಮಾಡಿ, ಸಿನಿಮಾ ಮಾಡಲು ಮುಂದಾದರೆ ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ದೊಡ್ಡ ಸಿನಿಮಾವಾಗಿ ಸದ್ದು ಮಾಡಲಿದೆ.
ಅಂದಹಾಗೆ, 1970ರಲ್ಲಿ ಬಂದ “ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರು ಶ್ರೀಕೃಷ್ಣದೇವರಾಯ ಆಗಿ ನಟಿಸಿದ್ದರು. ಸದ್ಯ ದರ್ಶನ್ ನಾಯಕರಾಗಿರುವ “ಯಜಮಾನ’ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ.