ಹೊಸಬರಿಗೆ ಮೊದಲಿನಿಂದಲೂ ದರ್ಶನ್ ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ. ಆ ಸಾಲಿಗೆ ಈಗ “ಮಹಿರ’ ಸಿನಿಮಾ ಕೂಡ ಸೇರಿದೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ ದರ್ಶನ್, “ಈ ಚಿತ್ರದ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ನನಗೆ ಪರಿಚಯವಿಲ್ಲ. ಆದರೆ, ರಾಜಣ್ಣ ಅವರು ಹಲವು ತಿಂಗಳಿನಿಂದಲೂ ಈ ಚಿತ್ರದ ಆಡಿಯೋ ಬಿಡುಗಡೆಗೆ ಬರಬೇಕು ಎಂದು ಒತ್ತಾಯಿಸಿದ್ದರು. ಅವರು ನನ್ನ ಬಳಿ ಏನನ್ನೂ ಕೇಳಿಲ್ಲ. ಹಾಗಾಗಿ ನಾನು ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದೇನೆ. ಇನ್ನು, ನಿರ್ದೇಶಕರು ಲಂಡನ್‌ನಲ್ಲಿ ಇದ್ದಂತಹ ಒಳ್ಳೆಯ ಕೆಲಸವನ್ನು ಬಿಟ್ಟು ಚಿತ್ರರಂಗಕ್ಕೆ ಬಂದಿರುವುದು ಸಂತಸದ ವಿಷಯ. “ಮಹಿರ’ ಶೀರ್ಷಿಕೆ ಬಗ್ಗೆ ಗೊತ್ತಿಲ್ಲ. ಆದರೆ, ಅದೊಂದು ಸಂಸ್ಕೃತ ಪದ ಎಂಬುದು ಅರ್ಥವಾಗಿದೆ. ಚಿತ್ರದ ಟ್ರೇಲರ್ ನೋಡಿದಾಗ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎನಿಸುತ್ತೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು ದರ್ಶನ್.
ದರ್ಶನ್ ಅವರ ಮಾತಿಗೂ ಮುನ್ನ ಚಿತ್ರದ ಎರಡು ಲಿರಿಕಲ್ ವಿಡಿಯೋ ಮತ್ತು ಟ್ರೇಲರ್ ತೋರಿಸಲಾಯಿತು. ನಿರ್ಮಾಪಕ ವಿವೇಕ್ ಕೋಡಪ್ಪ, “ಚಿತ್ರ ಅಂದುಕೊಂಡಂತೆ ಮೂಡಿಬಂದಿದೆ. ಒಳ್ಳೆಯ ಚಿತ್ರವನ್ನು ಕನ್ನಡಿಗರು ಎಂದೂ ಬಿಟ್ಟಿಲ್ಲ. ನಮ್ಮ ಚಿತ್ರಕ್ಕೆ ಎಲ್ಲರ ಬೆಂಬಲ ಇರಲಿ’ ಎಂದರು ಅವರು.
ನಿರ್ದೇಶಕ ಮಹೇಶ್ ಅವರಿಗೆ ಇದು ಮೊದಲ ಚಿತ್ರ. ಈ ಹಿಂದೆ ಸಿನಿಮಾ ಮಾಡಲು ಸಾಕಷ್ಟು ಓಡಾಟ ನಡೆಸಿದ್ದ ಅವರಿಗೆ ನಿರ್ಮಾಪಕ ವಿವೇಕ್ ಕೋಡಪ್ಪ, ಕಥೆ ಕೇಳಿ ಬೆಂಬಲಕ್ಕೆ ನಿಂತಿದ್ದಕ್ಕೆ ಈ ಚಿತ್ರವಾಗಿದೆ ಅಂತ ನೆನಪಿಸಿಕೊಂಡರು ಮಹೇಶ್. ಕುಟುಂಬದ ಪ್ರೋತ್ಸಾಹ, ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾನು ಚಿಕ್ಕಂದಿನಿಂದಲೂ ದರ್ಶನ್ ಸರ್ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದೇನೆ. ನಮ್ಮ ಚಿತ್ರದ ಆಡಿಯೋ ಬಿಡುಗಡೆಗೆ ಬರುತ್ತೇನೆ ಎಂದು ಮಾತುಕೊಟ್ಟಿದ್ದರು. ಅದರಂತೆ ಬಂದು ನಮಗೆ ಶುಭಹಾರೈಸಿದ್ದಾರೆ. ದರ್ಶನ್ ಅವರ ಮುಂದೆ ನಿಂತಿರುವುದಕ್ಕೆ ಮಾತುಗಳೇ ಬರುತ್ತಿಲ್ಲ ಅಂತ ಮೈಕ್ ಅನ್ನು ರಾಜ್.ಬಿ.ಶೆಟ್ಟಿಗೆ ಕೊಟ್ಟರು. “ನಾನಿಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ರಿಯಲ್ ಸ್ಟಂಟ್ಸ್ ಇದೆ. ಬರೀ ಬುದ್ಧಿಶಕ್ತಿಯಿಂದಲೇ ತೆಗೆದುಕೊಂಡ ನಿರ್ಧಾರದಿಂದ ಹೇಗೆ ಅಪರಾಧಿಯನ್ನು ಬಂಧಿಸಲಾಗುತ್ತದೆ ಎಂಬುದು ಇಲ್ಲಿ ಹೈಲೈಟ್’ ಅಂದರು ಅವರು.
ಇನ್ನು, ಚೈತ್ರಾ ಈ ಚಿತ್ರದ ನಾಯಕಿ. ಅವರಿಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಅಮ್ಮನ ಜೊತೆ ಇರುವ ಆ ಹುಡುಗಿ ಒಂದು ಹಂತದಲ್ಲಿ ಗಂಭೀರವಾಗುತ್ತಾಳೆ. ಯಾಕೆ ಹಾಗೆ ಆಗುತ್ತಾಳೆ ಎಂಬುದು ಸಸ್ಪೆನ್ಸ್ ಅಂದರು ಚೈತ್ರಾ. ಚಿತ್ರಕ್ಕೆ ನಿಲಿಮರಾವ್ ಮತ್ತು ರಾಕೇಶ್ ಸಂಗೀತ ನೀಡಿದ್ದಾರೆ. ಪೂಜಾ, ನಿಖೀತಾ, ಚೇತನ್‌ಡಿಸೋಜ ಇತರರು ಆಡಿಯೋ ಬಿಡುಗಡೆ ವೇಳೆ ಇದ್ದರು. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.