ನಂಜನಗೂಡು: ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶ್ರೀಕಂಠೇಶ್ವರನ ಸನ್ನಿಧಿಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಂಗಳವಾರ ಹುಣ್ಣಿಮೆ ವಿಶೇಷ ಜೊತೆಗೆ ಗುರು ನಾನಕರ ಜಯಂತಿ ಪ್ರಯುಕ್ತ ರಜೆಯಿದ್ದ ಹಿನ್ನೆಲೆಯಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.
ಕಾರ್ತಿಕ ಮಾಸದ ಎರಡನೇ ಸೋಮವಾರವೇ ನಂಜನಗೂಡಿಗೆ ಆಗಮಿಸಿದ್ದ ಭಕ್ತರು ಮಂಗಳವಾರ ಹುಣ್ಣಿಮೆ ಸುರ್ಯೋದಯಕ್ಕೂ ಮುನ್ನ ಕಪಿಲಾ ನದಿಯಲ್ಲಿ ಮಿಂದೆದ್ದು, ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಶ್ರೀಕಂಠೇಶ್ವರನ ದರ್ಶನ ಪಡೆದು ಪುನೀತರಾದರು.
ಹುಣ್ಣಿಮೆಯಾದ್ದರಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಶ್ರೀಕಂಠೇಶ್ವರ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತರ ನೇತೃತ್ವದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ಪಂಚತೀರ್ಥ, ಬಿಲ್ವಪತ್ರೆ, ಪಂಚಾಮೃತ, ಶಾಲ್ಯಾನ್ನ, ಕರ್ಜೂರ, ಜೇನುತುಪ್ಪ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಹಸ್ರಾರು ಭಕ್ತರು ದೇವಾಲಯದ ಸುತ್ತ ಉರುಳುಸೇವೆ, ಸಲ್ಲಿಸಿ ತುಲಾಭಾರ ನೆರವೇರಿಸಿದರು. ಹರಕೆ ಹೊತ್ತ ಸಹಸ್ರಾರು ಭಕ್ತರು ಮುಡಿ ಕೊಟ್ಟು ಕಪಿಲೆ ನದಿಯಲ್ಲಿ ಪುಣ್ಯಸ್ನಾನ ಮಾಡಿ ಧನ್ಯತಾ ಭಾವ ಮೆರೆದರು.
ಶ್ರೀಕಂಠೇಶ್ವರಸ್ವಾಮಿಯ ಮುಂಭಾಗದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪಗಳನ್ನು ಹಚ್ಚಿದ ಭಕ್ತರು ಶ್ರದ್ಧಾಭಕ್ತಿಯಿಂದ ದೀಪೋತ್ಸವ ಸೇವೆ ಸಲ್ಲಿಸಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಹಾಗೂ ಗಂಗಯ್ಯ ನೇತೃತ್ವದಲ್ಲಿ ದೇವಾಲಯದ ಸಿಬ್ಬಂದಿಗಳು ಅರಕ್ಷಕರ ಸಹಕಾರದೊಂದಿಗೆ ಭಕ್ತರ ಸುಗಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ವಿಶೇಷ ಟಿಕೆಟ್ ದರ್ಶನದಿಂದ ದಾಖಲೆಯ ಹಣ ಸಂಗ್ರಹ: ಹುಣ್ಣಿಮೆ ಪ್ರಯುಕ್ತ ಮಂಗಳವಾರ 50 ಸಾವಿರಕ್ಕೂ ಅಧಿಕ ಮಂದಿ ಶ್ರೀಕಂಠೇಶ್ವರನ ದರ್ಶನ ಪಡೆದರು. ವಿಶೇಷ ದರ್ಶನ ವ್ಯವಸ್ಥೆಯಿಂದ ದಾಖಲೆಯ ಹಣ ಸಂಗ್ರವಾಗಿದೆ. 100 ರೂ. ವಿಶೇಷ ಟಿಕೆಟ್ ದರ ದರ್ಶನದಿಂದ 4.33 ಲಕ್ಷ ರೂ. ಹಾಗೂ 50 ರೂ. ವಿಶೇಷ ಟಿಕೆಟ್ ದರ ದರ್ಶನದಿಂದ 2.16 ಲಕ್ಷ ರೂ. ಸಂಗ್ರಹವಾಗಿದೆ. ಒಟ್ಟು 6.5 ಲಕ್ಷ ರೂ. ದಾಖಲೆಯ ಹಣ ದೇಗುಲಕ್ಕೆ ಸಂದಾಯವಾಗಿದೆ. ಇದು ಸಂಜೆಯ ಅಂಕಿ ಅಂಶವಾಗಿದೆ. ಇನ್ನೂ ಹೆಚ್ಚಿನ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ.