Advertisement

ಹೈದರಾಬಾದ್‌ನತ್ತ ದರ್ಶನ್‌ ಮದಕರಿ

10:05 AM Mar 06, 2020 | Lakshmi GovindaRaj |

ದರ್ಶನ್‌ ಅವರ “ರಾಬರ್ಟ್‌’ ಚಿತ್ರದ “ಬಾ ಬಾ ನಾ ರೆಡಿ’ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. “ಡಿ ಬಾಸ್‌’ ಅಭಿಮಾನಿಗಳಿಗೆ ಸಾಹಿತ್ಯದ ತುಂಬಾ ಇರುವ “ಡಿ’ ತುಂಬಾ ಖುಷಿ ಕೊಡುತ್ತಿದೆ. ಅಭಿಮಾನಿಗಳಿಗೆ ಹಾಡು ಇಷ್ಟವಾದ ಮೇಲೆ ದರ್ಶನ್‌ ಖುಷಿಯಾಗದೇ ಇರುತ್ತಾರೆಯೇ? ದರ್ಶನ್‌ ಕೂಡಾ “ರಾಬರ್ಟ್‌’ ಚಿತ್ರದ ಮೊದಲ ಹಾಡು ಗೆದ್ದ ಖುಷಿಯಲ್ಲೇ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.

Advertisement

ಹಾಗಂತ “ರಾಬರ್ಟ್‌’ ಚಿತ್ರೀಕರಣಕ್ಕಾಗಿ ಅಲ್ಲ, “ರಾಜವೀರ ಮದಕರಿನಾಯಕ’ ಚಿತ್ರೀಕರಣಕ್ಕಾಗಿ. ಹೌದು, ದರ್ಶನ್‌ ಅಭಿನಯದ “ರಾಜವೀರ ಮದಕರಿನಾಯಕ’ ಚಿತ್ರ ಮತ್ತೆ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಫೆಬ್ರವರಿಯಲ್ಲಿ ಕೇರಳದಿಂದ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು.ಆ ನಂತರ ಬ್ರೇಕ್‌ ನೀಡಿದ್ದ ಚಿತ್ರ ಈಗ ಮತ್ತೆ ಚಿತ್ರೀಕರಣಕ್ಕೆ ಅಣಿಯಾಗಿದೆ. ಹೈದರಾಬಾದ್‌ನ ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಮಾರ್ಚ್‌ 10 ರಿಂದ ಆರಂಭವಾಗಲಿದೆ.

ಈಗಾಗಲೇ ಅದಕ್ಕೆ ಬೇಕಾದ ಪೂರ್ವ ತಯಾರಿಯಲ್ಲಿ ಚಿತ್ರತಂಡ ತೊಡಗಿದೆ. ಮಾರ್ಚ್‌ 10 ರಿಂದ ಸತತ 10ಕ್ಕೂ ಹೆಚ್ಚು ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ಚಿತ್ರೀಕರಣದಲ್ಲಿ ಸುಮಲತಾ ಅಂಬರೀಶ್‌ ಕೂಡಾ ಭಾಗಿಯಾಗಲಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರವನ್ನು ರಾಜೇಂದ್ರ ಸಿಂಗ್‌ ಬಾಬು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರವಿಶಂಕರ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಇತರ ಪಾತ್ರಗಳ ಆಯ್ಕೆ ನಡೆಯಬೇಕಿದೆ. ಈ ಹಿಂದೆ “ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ರಮ್ಯಾ ನಟಿಸಲಿದ್ದಾರೆಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದರೆ, ಚಿತ್ರತಂಡ ಹೇಳುವಂತೆ ಇತರ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಇನ್ನು, ದರ್ಶನ್‌ ಅವರ “ರಾಬರ್ಟ್‌’ ಚಿತ್ರ ಏಪ್ರಿಲ್‌ 10ಕ್ಕೆ ತೆರೆಕಾಣುತ್ತದೆ ಎನ್ನಲಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದ್ದು, ಹಾಡಿನ ಚಿತ್ರೀಕರಣ ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next