ಕೆ.ಆರ್.ಪೇಟೆ: ಪಾಂಡವಪುರ ಕ್ಷೇತ್ರದಾದ್ಯಂತ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರ ಪರವಾದ ಭಾರೀ ಅನುಕಂಪದ ಅಲೆ ಕಂಡು ಬರುತ್ತಿದೆ. ಹೀಗಾಗಿ ದರ್ಶನ್ ಅವರ ಗೆಲುವು ಖಚಿತವಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕಟ್ಟಡದಲ್ಲಿರುವ ತಾಲೂಕು ರೈತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ದರ್ಶನ್ ಪುಟ್ಟಣ್ಣಯರ ವಿರುದ್ಧ ಎದುರಾಳಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ದರ್ಶನ್ ಪುಟ್ಟಣ್ಣಯ್ಯ ಅವರು ಪದವೀಧರರಾಗಿದ್ದು ಉತ್ತಮ ಪ್ರತಿಭಾವಂತರಾಗಿದ್ದಾರೆ. ಹೊರದೇಶವನ್ನು ಸುತ್ತಿ ರೈತರ ಪರವಾದ ನಿಲುವು ಹೊಂದಿದ್ದಾರೆ. ತಂದೆಯಿಂದ ರೈತ ಚಳವಳಿ ರಕ್ತಗತವಾಗಿ ಬಂದಿದೆ. ತಂದೆಯ ಎರಡು ಚುನಾವಣೆಯಲ್ಲಿ ಉತ್ತಮ ಸಂಘಟನೆ ಕೆಲಸ ಮಾಡಿದ್ದಾರೆ. ಜೊತೆಗೆ ಜನಪರ ಚಳವಳಿ ಮತ್ತು ಸಭೆಗಳಲ್ಲಿ ಭಾಗವಹಿಸಿದ್ದು ಉಂಟು. ಇದರಿಂದ ಅವರಿಗೆ ಸಾಕಷ್ಟು ಅನುಭವವಿದೆ.
ಮೊದಲ ರಾಜಕಾರಣಿಗಳು ಈ ಸಮಾಜಕ್ಕೆ, ನಮ್ಮ ಕೊಡುಗೆಯೇನು ಎಂಬುದನ್ನು ಅರಿಯಲಿ. ನಂತರ ರೈತರ ಚಳವಳಿ ಬಗ್ಗೆ ಮಾತನಾಡಲಿ. ರೈತ ಸಂಘದ ನಾಯಕರು ಸತ್ತಾಗ, ಅವರ ಮಕ್ಕಳು ಚಳವಳಿಯನ್ನು ಮುಂದುವರಿ ಸುತ್ತಿದ್ದಾರೆ. ನಂಜುಂಡಸ್ವಾಮಿ ಬಳಿಕ ಇಬ್ಬರು ಮಕ್ಕಳು ಚುಕ್ಕಿ, ಪಚ್ಚೆ ನಂಜುಂಡಸ್ವಾಮಿ, ಹಾಗೆ ಪುಟ್ಟಣ್ಣಯ್ಯರ ಬಳಿಕ ದರ್ಶನ್ ಪುಟ್ಟಣ್ಣಯ್ಯ ಚಳವಳಿಯ ನೇತೃತ್ವ ವಹಿಸಿಲಿದ್ದಾರೆ ಎಂದರು.
ಈಗಾಗಲೇ ಉದಾರೀಕರಣ, ಜಾಗತೀಕರಣದಿಂದ ರೈತ ಕುಲ ಸಂಪೂರ್ಣ ಹಾಳಾಗಿದೆ. ನಿರುದ್ಯೋಗದ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶದ ರೈತರು ಉಳಿಯ ಬೇಕಾದರೆ ಆಡಳಿತ ವಿಕೇಂದ್ರೀಕರಣಗೊಳ್ಳಬೇಕು. ಜತೆಗೆ ಗುಡಿ, ಸಣ್ಣ ಕೈಗಾರಿಕೆಗಳು ಬರಬೇಕು ಎಂಬುವ ಅವರ ವಾದದಲ್ಲಿಯೇ ಹೊರಾಟಗಾರನ ಕಿಚ್ಚಿದೆ. ಇವನ್ನು ಸರ್ಕಾರದ ಕಣ್ಣ ತೆರೆಸಲು ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಬೇಕು.
ಅದಕ್ಕಾಗಿ ರಾಜ್ಯದ ವಿವಿಧ ಮೂಲೆಗಳಿಂದ ರೈತ ಸಂಘದ ಸಾವಿರಾರು ಕಾರ್ಯಕರ್ತರು ಆಗಮಿಸಿ ದರ್ಶನ್ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ತಾಲೂಕಿನಿಂದಲೂ ರೈತ ಸಂಘದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಪಾಂಡವಪುರ ಕ್ಷೇತ್ರದಲ್ಲಿ ಮನೆ ಮನೆಗೆ ಪ್ರಚಾರ ಕೈಗೊಂಡು ದರ್ಶನ್ ಪುಟ್ಟಣ್ಣಯ್ಯ ಅವರ ಗೆಲುವಿಗೆ ಹಗಲಿರುಳು ಶ್ರಮಿಸಲಿದ್ದಾರೆ ಎಂದು ಹೇಳಿದರು.
ರೈತಸಂಘದ ಮುಖಂಡರಾದ ಎಲ್.ಬಿ.ಜಗದೀಶ್, ತಾಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ್, ಗೌರವಾಧ್ಯಕ್ಷ ನಾಗಣ್ಣ, ಕಾರಿಗನಹಳ್ಳಿ ಪುಟ್ಟೇಗೌಡ, ಕೃಷ್ಣಾಪುರ ಮಿಲ್ ರಂಗರಾಜು, ನೀತಿಮಂಗಲ ಮಹೇಶ್, ದೇವರಾಜು ಮುಂತಾದವರಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ದರ್ಶನ್ ಬಗ್ಗೆ ಅಪಪ್ರಾಚಾರ ಮಾಡುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ, ಅವರ ತಂದೆ ಸತ್ತ 6 ದಿನಕ್ಕೆ ಸೂತಕದ ವಾತವರಣವಿದ್ದರೂ ಬ್ಯಾಂಕ್‌ನಲ್ಲಿ ರೈತನ ಜಮೀನು ಹರಾಜಿಗೆ ಬಂದಾಗ ಬೀದಿಗಿಳಿದು ಹೋರಾಟ ಮಾಡಿ ಹರಾಜು ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇವರ ಬಗ್ಗೆ ಮಾತನಾಡಲು ಯಾವ ರಾಜಕೀಯ ಪಕ್ಷದವರಿಗೂ ನೈತಿಕತೆಯಿಲ್ಲ.
ಕೆ.ಆರ್.ಜಯರಾಂ, ರಾಜ್ಯ ರೈತ ಸಂಘದ ಉಪಾಧ್ಯಕ್ಷ