ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಅಭಿನಯಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಆ ಚಿತ್ರದ ಶೀರ್ಷಿಕೆ ಬಗ್ಗೆ ಒಂದಷ್ಟು ಅಂತೆ-ಕಂತೆಗಳಿದ್ದವು. ಅದಕ್ಕೀಗ ಚಿತ್ರತಂಡ ತೆರೆ ಎಳೆದಿದೆ. ಹೌದು, ಕ್ರಿಸ್ಮಸ್ ಹಬ್ಬದ ದಿನದಂದ ದರ್ಶನ್ ತಮ್ಮ ಅಭಿಮಾನಿಗಳಿಗೆ “ರಾಬರ್ಟ್’ ಚಿತ್ರದ ಶೀರ್ಷಿಕೆ ಜೊತೆಗೊಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ. ಮಂಗಳವಾರ ತಮ್ಮ ಟ್ವಿಟರ್ ಹಾಗು ಫೇಸ್‌ಬುಕ್ ಖಾತೆಯಲ್ಲಿ ಅವರು “ರಾಬರ್ಟ್’ ಶೀರ್ಷಿಕೆ ಇರುವ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ್ದಾರೆ.
ಸಾಕಷ್ಟು ಕುತೂಹಲ ಕೆರಳಿಸಿದ್ದ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನ ಚಿತ್ರಕ್ಕೆ ಅಂತೂ ಶೀರ್ಷಿಕೆ ಪಕ್ಕಾ ಆಗಿದೆ. ಮಂಗಳವಾರ ಬೆಳಗ್ಗೆ ದರ್ಶನ್ ಅವರ ಫೇಸ್‌ಬುಕ್, ಟ್ವೀಟರ್ ಖಾತೆಯಲ್ಲಿ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಆಗಿದ್ದೇ, ತಡ, ಅವರ ಅಭಿಮಾನಿ ವರ್ಗ ಮೆಚ್ಚುಗೆ ಸೂಚಿಸಿದ್ದಲ್ಲದೆ, ಸಾಕಷ್ಟು ಕಾಮೆಂಟ್ಸ್ ಮೂಲಕ ಶುಭಾಶಯಗಳ ಸುರಿಮಳೆಗೈದಿದೆ. ಈ ಹಿಂದೆ ತರುಣ್ ಸುಧೀರ್ ನಿರ್ದೇಶನದ “ಚೌಕ’ ಚಿತ್ರದಲ್ಲಿ ದರ್ಶನ್ ಅವರು ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ “ರಾಬರ್ಟ್’ ಎಂಬ ಪಾತ್ರ ಅವರದ್ದಾಗಿತ್ತು. ಈಗ ಅದೇ ಹೆಸರನ್ನು ಚಿತ್ರತಂಡ ಶೀರ್ಷಿಕೆಯನ್ನಾಗಿಸಿದೆ.
“ರಾಬರ್ಟ್’ ದರ್ಶನ್ ಅವರ 53ನೇ ಚಿತ್ರವಾಗಿದ್ದು, ಕಳೆದ ಬಾರಿ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಡಲಾಗಿತ್ತು. ಆಗ ಆ ಪೋಸ್ಟರ್‌ನಲ್ಲಿ “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು’ ಎಂಬ ಪಂಚಿಂಗ್ ಡೈಲಾಗ್ ಹರಿಬಿಡಲಾಗಿತ್ತು. ಆ ಡೈಲಾಗ್ ಸಖತ್ ವೈರಲ್ ಕೂಡ ಆಗಿತ್ತು. ಈಗ ಚಿತ್ರದ ಶೀರ್ಷಿಕೆ “ರಾಬರ್ಟ್’ ಎಂಬುದು ಪಕ್ಕಾ ಆಗಿದೆ. ಇನ್ನೊಂದು ವಿಶೇಷವೆಂದರೆ, ಪೋಸ್ಟರ್‌ವೊಂದು ಸಾಕಷ್ಟು ಕುತೂಹಲ ಕೆರಳಿಸಿದೆ.
ಅಷ್ಟೇ ಅಲ್ಲ, ಪೋಸ್ಟರ್‌ನಲ್ಲಿ ಆಂಜನೇಯ ತನ್ನ ಹೆಗಲ ಮೇಲೆ ಬಾಲ ರಾಮನನ್ನು ಕೂರಿಸಿಕೊಂಡಿದ್ದು, ಆ ಬಾಲ ರಾಮ ಕೈಯಲ್ಲಿ ಬಿಲ್ಲು, ಬಾಣ ಹಿಡಿದು ಗುರಿ ಇಟ್ಟಿರುವ ಭಾವಚಿತ್ರವೊಂದು ಅನೇಕ ಚರ್ಚೆಗೆ ಕಾರಣವಾಗಿದೆ. ಇದೊಂದು ಮಗುವಿನ ಜೊತೆ ಆಟ ಆಡಿಕೊಂಡಿರುವ ವಿಶೇಷವಾಗಿರುವ ಕಥೆ ಎಂದೇ ಹೇಳಲಾಗುತ್ತಿದೆ. ಆದರೂ, ಚಿತ್ರ ಬರುವವರೆಗೂ ಕಾಯಲೇಬೇಕು. ಅಂದಹಾಗೆ, ಈ ಚಿತ್ರಕ್ಕೆ ಉಮಾಪತಿ ನಿರ್ಮಾಪಕರು.”ರಾಬರ್ಟ್’ ಚಿತ್ರದಲ್ಲಿ ದರ್ಶನ್ ಅವರದು ವಿಶೇಷ ಗೆಟಪ್ ಇದ್ದು, ಅವರಿಲ್ಲಿ ಗಡ್ಡ ಬಿಟ್ಟಿರುವ ರಾಬರ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2019 ರಲ್ಲಿ “ರಾಬರ್ಟ್’ಗೆ ಚಿತ್ರೀಕರಣ ನಡೆಯಲಿದೆ.
ರಾಬರ್ಟ್‌ನಲ್ಲಿ ದರ್ಶನ್ ಪುತ್ರ ಇರ್ತಾರಾ?: “ರಾಬರ್ಟ್’ ಚಿತ್ರದಲ್ಲಿ ಮಗು ಜೊತೆಗಿನ ಪಾತ್ರ ಮಾಡುತ್ತಿದ್ದಾರೆ ದರ್ಶನ್. ಹಾಗಾದರೆ ಈ ಚಿತ್ರದಲ್ಲಿ ಆ ಮಗು ಪಾತ್ರ ಯಾರು ಮಾಡ್ತಾರಾ? ದರ್ಶನ್ ಜೊತೆ ಈಗಾಗಲೇ “ಐರಾವತ’ ಹಾಗೂ “ಯಜಮಾನ’ ಚಿತ್ರಗಳಲ್ಲಿ ಅವರ ಪುತ್ರ ಕಾಣಿಸಿಕೊಂಡಿದ್ದಾರೆ. ಈಗ “ರಾಬರ್ಟ್’ ಚಿತ್ರದಲ್ಲೇನಾದರೂ ಕಾಣಿಸಿಕೊಳ್ಳುತ್ತಿದ್ದಾರಾ? ಇದಕ್ಕೆ ಉತ್ತರಿಸುವ ನಿರ್ದೇಶಕ ತರುಣ್ ಸುಧೀರ್, “ದರ್ಶನ್ ಪುತ್ರ ನಟಿಸುವ ಬಗ್ಗೆ ಇಲ್ಲಿವರೆಗೆ ಚಿಂತನೆ ನಡೆದಿಲ್ಲ. ಆರೇಳು ವರ್ಷದ ಮಗುವಿನ ಅಗತ್ಯವಿದೆ. ದರ್ಶನ್ ಅವರ ಪುತ್ರನಿಗೆ ಈಗ 10 ವರ್ಷ’ ಎನ್ನುತ್ತಾರೆ.