ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ಒಟ್ಟುಗೂಡಿ ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದು ವಿವರಗಳು ಬಹಿರಂಗವಾಗುತ್ತಿದೆ. ಏತನ್ಮಧ್ಯೆ ಸ್ವಾಮಿ ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿ ಕೆಲವು ರಹಸ್ಯವನ್ನು ಬಿಚ್ಚಿಟ್ಟಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.
ಇದನ್ನೂ ಓದಿ:Renukaswamy case: ಪೊಲೀಸರ ಮುಂದೆ ಶರಣಾದ ಮತ್ತಿಬ್ಬರು ಆರೋಪಿಗಳು
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ರೇಣುಕಾಸ್ವಾಮಿ, ತೀವ್ರ ಹೊಡೆತದ ಆಘಾತ ಮತ್ತು ಮೆದುಳಿನ ರಕ್ತನಾಳ ಒಡೆದ ಪರಿಣಾಮ ಸಾವನ್ನಪ್ಪಿರುವುದಾಗಿ ತಿಳಿಸಿದೆ.
ಮೃತ ರೇಣುಕಾಸ್ವಾಮಿಯ ದೇಹದಲ್ಲಿ 15 ಗಾಯದ ಗುರುತುಗಳು ಪತ್ತೆಯಾಗಿವೆ. ನಟ ದರ್ಶನ್ ಹಾಗೂ ಗ್ಯಾಂಗ್ ನ ಸದಸ್ಯರು ಹಿಗ್ಗಾಮುಗ್ಗಾ ಹೊಡೆದು ಕೊಂದಿರುವುದಾಗಿ ಆರೋಪಿಸಲಾಗಿದೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೊಗಳನ್ನು ಕಳುಹಿಸುತ್ತಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ತಂದು ಶೆಡ್ ವೊಂದರಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಥಳಿಸಿದ್ದರು.
ರೇಣುಕಾಸ್ವಾಮಿಯ ತಲೆ, ಹೊಟ್ಟೆ, ಎದೆ ಹಾಗೂ ಇತರ ಭಾಗಗಳಲ್ಲಿ ಗಾಯವಾದ ಗುರುತುಗಳಿವೆ. ಶೆಡ್ ನಲ್ಲಿ ನಿಲ್ಲಿಸಿದ್ದ ಮಿನಿ ಟ್ರಕ್ ಗೆ ರೇಣುಕಾಸ್ವಾಮಿಯ ತಲೆಯನ್ನು ಬಲವಾಗಿ ಗುದ್ದಿ ಹತ್ಯೆ ಮಾಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ.
ಜೂನ್ 9ರಂದು ಸುಮನಹಳ್ಳಿಯ ಸತ್ಯ ಅನುಗ್ರಹ ಅಪಾರ್ಟ್ ಮೆಂಟ್ ಸಮೀಪದ ಮೋರಿ ಬಳಿ ರೇಣುಕಾಸ್ವಾಮಿಯ ಮೃತದೇಹ ದೊರಕಿದ ನಂತರ, ತನಿಖೆಗೆ ಇಳಿದಿದ್ದ ಪೊಲೀಸರಿಗೆ ವಿಷಯ ತಿಳಿಯುವ ಮೂಲಕ ದರ್ಶನ್ ಮತ್ತು ಗ್ಯಾಂಗ್ ನ ಸದಸ್ಯರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.