Advertisement

Darshan Birthday; ಕೇಕ್‌, ಹಾರ ಬದಲು ದಿನಸಿ ತನ್ನಿ, ಅಶಕ್ತರಿಗೆ ನೆರವಾಗೋಣ ಎಂದ ದಾಸ

09:57 AM Feb 16, 2024 | Team Udayavani |

ಒಂದು ಕಡೆ “ಕಾಟೇರ’ ಸೂಪರ್‌ ಹಿಟ್‌, ಮತ್ತೂಂದು ಕಡೆ ಬರ್ತ್‌ಡೇ, ಇನ್ನೊಂದು ಕಡೆ ಅಭಿಮಾನಿಗಳ ಪಾಲಿನ ಡಿಬಾಸ್‌ ಚಿತ್ರರಂಗಕ್ಕೆ ಬಂದು 25 ವರ್ಷ… -ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ ಅಭಿಮಾನಿಗಳು ಸಂಭ್ರಮಿಸಲು ಇದಕ್ಕಿಂತ ಹೆಚ್ಚು ಕಾರಣ ಬೇಕಿಲ್ಲ.

Advertisement

ಆದರೆ, ಇಂದು “ಸೆಲೆಬ್ರೆಟಿ’ಗಳ ಸಂಭ್ರಮಕ್ಕೆ ಮೂಲ ಕಾರಣ, ನಟ ದರ್ಶನ್‌ ಅವರ ಹುಟ್ಟುಹಬ್ಬ. ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆದು, ಅವರಿಗೆ ತಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆ ನೀಡುತ್ತಲೇ ಬರುತ್ತಿರುವ ನಟ ದರ್ಶನ್‌ ಇಂದು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲಿದ್ದಾರೆ. ಆದರೆ, ಈ ಹಿಂದಿನಂತೆ ಕೇಕ್‌, ಹಾರ ಬದಲು ಅಭಿಮಾನಿಗಳು ಪ್ರೀತಿಯಿಂದ ನೀಡಿದ ದವಸ, ಧಾನ್ಯ, ಆಹಾರ ಪದಾರ್ಥಗಳನ್ನು ಅನಾಥಶ್ರಮ, ವೃದ್ಧಾಶ್ರಮ ಗಳಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯ ಡಿ ಬಾಸ್‌ ಬರ್ತ್‌ಡೇ ಹಿನ್ನೆಲೆಯಲ್ಲಿ ಅಕ್ಕಿ, ಬೇಳೆಗಳನ್ನು ನೀಡುತ್ತಿದ್ದಾರೆ.

ಸೋಲು-ಗೆಲುವು ಮತ್ತು ದರ್ಶನ್‌ ಒಲವು

ಇವತ್ತು ದರ್ಶನ್‌ ಅವರಿಗೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿ ಸಲು ಕಾರಣ ಅವರ ಪಾಲಿಸಿ ಕೊಂಡು ಬಂದ ಸಿದ್ಧಾಂತ. ಅದು ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಮಚಿತ್ತವಾಗಿ ನಡೆದುಕೊಂಡು ಬಂದಿರುವುದು. ದರ್ಶನ್‌ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಹಲವು ಸೂಪರ್‌ ಹಿಟ್‌ಗಳನು ನೋಡಿದ್ದಾರೆ. ಅದೇ ತರಹ ನಿರೀಕ್ಷಿತ ಮಟ್ಟ ತಲುಪದ ಸಿನಿಮಾಗಳು ಅವರ ಕೆರಿಯರ್‌ನಲ್ಲಿವೆ. ಆದರೆ, ದರ್ಶನ್‌ ಮಾತ್ರ ಸೋಲು-ಗೆಲುವನ್ನು ಖುಷಿ, ಬೇಸರವನ್ನು ಸಮಚಿತ್ತವಾಗಿ ತಗೊಂಡು, ತಮ್ಮ ಮೂಲವ್ಯಕ್ತಿತ್ವದೊಂದಿಗೆ ಸಾಗಿಬರುತ್ತಿ ರುವುದು ಅಭಿಮಾನಿಗಳ ಪ್ರೀತಿಗೆ ಮತ್ತೂಂದು ಕಾರಣ. ತಮ್ಮ 25 ವರ್ಷದ ಸಿನಿಮಾ ಕೆರಿಯರ್‌ ನಲ್ಲಿ ನಾಯಕ ನಟರಾಗಿ 56 ಸಿನಿಮಾಗಳನ್ನು ಪೂರೈಸಿರುವ ದರ್ಶನ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯ “ಡೆವಿಲ್‌’ ಸಿನಿಮಾದ ಚಿತ್ರೀಕರಣಕ್ಕೆ ದರ್ಶನ್‌ ಸಿದ್ಧರಾಗಿದ್ದಾರೆ. ಮಿಲನಾ ಪ್ರಕಾಶ್‌ ನಿರ್ದೇಶನದಲ್ಲಿ “ಡೆವಿಲ್‌’ ಚಿತ್ರ ತಯಾರಾಗುತ್ತಿದ್ದು, ದರ್ಶನ್‌ ಹಾಗೂ ಪ್ರಕಾಶ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ “ತಾರಕ್‌’ ಚಿತ್ರ ಬಂದಿತ್ತು.

ಕಾಟೇರ ಖುಷಿ

Advertisement

ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವಿಗಾಗಿ ಕನ್ನಡ ಚಿತ್ರರಂಗ ಎದುರು ನೋಡುತ್ತಿತ್ತು. ಅದರಲ್ಲೂ 2023ರಲ್ಲಿ ಹೇಳಿಕೊಳ್ಳುವಂತಹ ಹಿಟ್‌ ಸಿಕ್ಕಿರಲಿಲ್ಲ. ಇಂತಹ ಸಮಯದಲ್ಲಿ ವರ್ಷದ ಕೊನೆಗೆ ಬಂದ “ಕಾಟೇರ’ ಚಿತ್ರ ಸೂಪರ್‌ ಹಿಟ್‌ ಆಗಿ, ಇಡೀ ಚಿತ್ರರಂಗಕ್ಕೆ ಬೂಸ್ಟರ್‌ ಡೋಸ್‌ ಆಗಿದ್ದು ಸುಳ್ಳಲ್ಲ. ಕೇವಲ ಕನ್ನಡದಲ್ಲಷ್ಟೇ ಬಿಡುಗಡೆ ಯಾದ ಚಿತ್ರ, ತನ್ನ ಮುಂದೆ ಬಿಡುಗಡೆ ಯಾದ ಪರಭಾಷಾ ಚಿತ್ರಗಳನ್ನು ಲೆಕ್ಕಿಸದೇ ಭರ್ಜರಿ ಹವಾದೊಂದಿಗೆ ಮುಂದುವರೆಯಿತು. ಈ ಖುಷಿ ಇಡೀ ಚಿತ್ರರಂಗದ ಜೊತೆಗೆ ದರ್ಶನ್‌ ಅಭಿಮಾನಿಗಳಿಗಿದೆ. ಈ ಯಶಸ್ಸು ಕೂಡಾ ಈ ಬಾರಿಯ ದರ್ಶನ್‌ ಹುಟ್ಟುಹಬ್ಬಕ್ಕೆ ಹೆಚ್ಚಿನ ಮೆರುಗು ತಂದಿರೋದು ಸುಳ್ಳಲ್ಲ.

ಕನ್ನಡವೇ ಸತ್ಯ…

ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ನಟರು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಪರಭಾಷೆಯಲ್ಲೂ ಮಿಂಚುವ ಕನಸು ಕಾಣುತ್ತಿದ್ದಾರೆ. ಆದರೆ, ದರ್ಶನ್‌ ಮಾತ್ರ ತಮ್ಮ ಮೊದಲ ಆಯ್ಕೆ ಯಾವತ್ತಿದ್ದರೂ ಕನ್ನಡ ಭಾಷೆಗೆ ಮತ್ತು ನಾವು ಮಾಡಿರೋದು ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ, ಕನ್ನಡ ಸಿನಿಮಾ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದಾರೆ. ಈ ಮೂಲಕ ಕನ್ನಡ ಭಾಷೆ, ಕನ್ನಡ ಚಿತ್ರರಂಗ, ಕನ್ನಡ ನಿರ್ದೇಶಕ, ನಿರ್ಮಾಪಕರಿಗೆ ಮೊದಲ ಪ್ರಾಶಸ್ತ್ಯ ಎಂದು ಸಾಬೀತು ಮಾಡಿದ್ದಾರೆ.

ಜೊತೆಗೆ “ನನ್ನನ್ನು ನೀವು (ಕನ್ನಡಿಗರು)ತುಂಬಾ ಚೆನ್ನಾಗಿ ಇಟ್ಟಿದ್ದೀರಿ. ಲೂನಾದಲ್ಲಿ ಓಡಾಡುತ್ತಿದ್ದ ನನ್ನನ್ನು ಲ್ಯಾಂಬೋರ್ಗಿನಿಯಲ್ಲಿ ಓಡಾಡುವಂತೆ ಮಾಡಿದ್ದು ನೀವೇ’ ಎಂದು ಆಗಾಗ ಹೇಳುವ ಮೂಲಕ ದರ್ಶನ್‌ ಕನ್ನಡ ಚಿತ್ರರಂಗ ತನಗೆ ಎಲ್ಲವನ್ನು ಕೊಟ್ಟಿದೆ ಎಂದು ಹೇಳುತ್ತಾರೆ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next