Advertisement

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

06:00 PM Oct 05, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Case) ಜೈಲಿನಲ್ಲಿರುವ ನಟ ದರ್ಶನ್‌(Actor Darshan) ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ಮತ್ತೆ (ಅ.5ರಂದು) ನಡೆದಿದೆ.

Advertisement

57ನೇ ಸಿಸಿಹೆಚ್‌ ಕೋರ್ಟಿನಲ್ಲಿ ದರ್ಶನ್‌ ಪರ ವಕೀಲ ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ.

ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಯ ಜಾಮೀನು ಅರ್ಜಿ ವಿಚಾರಣೆ 57ನೇ ಸಿಸಿಹೆಚ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ದು ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ದರ್ಶನ್‌ ಪರ ವಕೀಲರ ವಾದದಲ್ಲಿ ಏನಿದೆ?:

ಪೊಲೀಸರು ಸಲ್ಲಿಸಿರುವ ಚಾರ್ಜ್‌ ಶೀಟ್‌ನ ಅಂಶಗಳನ್ನು ಉಲ್ಲೇಖಿಸಿ ನಾಗೇಶ್‌ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದರ್ಶನ್‌ ವಿರುದ್ಧ ನೀಡಿರುವ ಸಾಕ್ಷಿಗಳು ಸೂಕ್ತವಾಗಿಲ್ಲ.  ಪಂಚನಾಮೆಯಲ್ಲಿ ರಕ್ತದ ಕಲೆ ಇದೆ ಎಂದಿದ್ದಾರೆ. ಆದರೆ ಎಫ್‌ ಎಸ್‌ ಎಲ್ ವರದಿಯಲ್ಲಿ ರಕ್ತದ ಕಲೆಯೇ ಇಲ್ಲ ಎಂದಿದೆ. ಹಾಗಿದ್ರೆ ಯಾರು ಇಲ್ಲಿ ಸಾಕ್ಷಿಗಳನ್ನು ಪ್ಲಾಂಟ್ ಮಾಡಿದ್ದು? ಇಂತಹ ಸಾಕ್ಷಿಗಳ ಸೃಷ್ಟಿಗೂ ಮಿತಿ ಇರಬೇಕು. ಇಲ್ಲಿ ನ್ಯಾಯದ ಕಗ್ಗೊಲೆಯಾಗಿದೆ‌ ಎಂದು ತನ್ನ ವಾದದಲ್ಲಿ ನಾಗೇಶ್‌ ಉಲ್ಲೇಖಿಸಿದ್ದಾರೆ.

Advertisement

ಎಫ್ ಎಸ್ ಎಲ್ ವರದಿ ಬಗ್ಗೆ ವಾದ ಮಂಡಿಸಿರುವ ನಾಗೇಶ್‌ ಅವರು, ಆರೋಪಿಗಳೇ ಸಬ್ ಇನ್ಸ್ ಪೆಕ್ಟರ್ ಗೆ ವಿಡಿಯೋ ಕಳಿಸಿದ್ದಾರೆ. ಪಿಎಸ್ ಐ ವಿನಯ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಯಾಕೆ ಆತನ ಪೋನ್ ಸೀಜ್ ಮಾಡಿಲ್ಲ ಎಂದು ದರ್ಶನ್ ಪರ ವಕೀಲರು ಪ್ರಶ್ನಿಸಿದ್ದಾರೆ.

ಪೊಲೀಸರ ಮೇಲೆಯೇ ಅನುಮಾನ.. ಇನ್ನು ವಾದವನ್ನು ಮುಂದುವರೆಸಿದ ಅವರು ಪಂಚನಾಮೆ ವೇಳೆ ಘಟನಾ ಸ್ಥಳದಲ್ಲಿದ್ದ  ಎರಡು ರೆಂಬೆಯಲ್ಲಿ ರಕ್ತದ ಕಲೆ ಇರುತ್ತದೆ. ಆದರೆ ಎಫ್ ಎಸ್ ಎಲ್ ವರದಿಯಲ್ಲಿ ಮರದ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲ ಎಂದು ಹೇಳಲಾಗಿದೆ. ಈ ರೀತಿ ಫ್ಯಾಬ್ರಿಕೇಷನ್ ಗೂ ಒಂದು ಲಿಮಿಟ್ ಇರಬೇಕು. ಎಫ್ ಎಸ್ ಎಲ್ ವರದಿಯಲ್ಲಿ ಈ ರೀತಿ ಇದೆ. ಈ ತನಿಖೆ ಕೆಲ ಅನುಮಾನ ಮೂಡಿಸಿದೆ ಎಂದು ನಾಗೇಶ್‌ ಅವರು ವಾದ ಮಂಡಿಸಿದ್ದಾರೆ.

‘ಸೆಕ್ಯುರಿಟಿ ಗಾರ್ಡ್ ಹೇಳಿಕೆಯಲ್ಲಿ ನಡೆದ ಘಟನೆ ಬಗ್ಗೆ ವಿವರಿಸಲಾಗಿದೆ. ಜೂ 9ರಂದೇ ಕೃತ್ಯದ ಸ್ಥಳವನ್ನು ಸೀಜ್ ಮಾಡಲಾಗಿದೆ. ಜೂ.9 ರಂದೇ ಪೊಲೀಸರು ಸ್ಥಳದಲ್ಲಿ ಇದ್ದಾಗ, ಜೂ. 12ರವರೆಗೆ ಕಾಯುವ ಅವಶ್ಯಕತೆ ಏನಿತ್ತು’ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಜೂನ್​ 12ರಂದು ಪೊಲೀಸರು ಒಂದಷ್ಟು ವಸ್ತುಗಳನ್ನು ಪಟ್ಟಣಗೆರೆ ಶೆಡ್​ನಿಂದ ಸೀಜ್ ಮಾಡಿದ್ದರು ಎಂದು ನಾಗೇಶ್ ವಾದ ಮಂಡಿಸಿದ್ದಾರೆ.

‘ಜೂನ್ 9ರಂದೇ ಪೊಲೀಸರಿಗೆ ಕೃತ್ಯದ ಸಂಪೂರ್ಣ ಮಾಹಿತಿ ಇತ್ತು. ಹಾಗಿದ್ದಾಗ ದರ್ಶನ್ ಹೇಳಿಕೆ ನೀಡುವವರೆಗೆ ಏಕೆ ಸುಮ್ಮನಿದ್ದರು? ಹೇಳಿಕೆ‌ ನಂತರವೇ ಏಕೆ ವಸ್ತುಗಳನ್ನು ಸೀಜ್ ಮಾಡಿದರು. ವಾಚ್ ಮನ್ ರೂಮ್​ನ ಎರಡು ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ. ಇದನ್ನು ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ನಾಗೇಶ್ ವಾದದಲ್ಲಿ ಹೇಳಿದ್ದಾರೆ.

ದರ್ಶನ್‌ ಮನೆಯಲ್ಲಿ ಸಿಕ್ಕ ಹಣದ ಮೂಲವೇನು?:  ಇನ್ನು ಪ್ರಕರಣ ಸಂದರ್ಭದಲ್ಲಿ ಪೊಲೀಸರು ದರ್ಶನ್‌ ಮನೆಯಿಂದ ವಶಕ್ಕೆ ಪಡೆದುಕೊಂಡಿದ್ದ ಹಣ ಎಲ್ಲಿ ಎನ್ನುವುದರ ಬಗ್ಗೆ ವಾದ ಮಂಡಿಸಿದ ಅವರು, ದರ್ಶನ್‌ ಮನೆಯಿಂದ ಜೂ.18ರಂದು ಪೊಲೀಸರು 37.5 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದರು. ಸಾಕ್ಷಿಗಳಿಗೆ ನೀಡಲೆಂದು ದರ್ಶನ್‌ ಈ ಹಣ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಮೋಹನ್‌ ರಾಜ್ ಎಂಬುವರು ಈ ಹಣವನ್ನು ಮೇ 2ನೇ ತಾರೀಖಿನಂದೇ ದರ್ಶನ್‌ಗೆ ನೀಡಿದ್ದರು. ಮೋಹನ್‌ ಅವರು ದರ್ಶನ್ ಅವರಿಂದ ಹಣ ಸಾಲ ಪಡೆದಿದ್ದರು. ಮೇ 2ರಂದೇ ದರ್ಶನ್‌ಗೆ ನೀಡಬೇಕಿದ್ದ ಸಾಲವನ್ನು ಮೋಹನ್‌ ರಾಜ್ ವಾಪಸ್ ಮಾಡಿದ್ದರು. ಆಗ ರೇಣುಕಾಸ್ವಾಮಿ ಯಾರೆಂಬುದು ಜಗತ್ತಿಗೇ ಗೊತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ನಾಗೇಶ್‌ ಮಾಹಿತಿ ನೀಡಿದ್ದಾರೆ.

ವಾದವನ್ನು ಆಲಿಸಿದ ಕೋರ್ಟ್‌ ದರ್ಶನ್‌, ಪವಿತ್ರಾ ಗೌಡ ಇಬ್ಬರ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 8ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next