Advertisement

ರಾಜ್ಯದಲ್ಲಿ ಕತ್ತಲೆ ಬೆಳಕಿನಾಟ

08:42 AM Nov 09, 2017 | |

ಬೆಂಗಳೂರು: ಸದ್ಯ ರಾಜ್ಯದಲ್ಲಿ ಈಗ ವಿದ್ಯುತ್‌ ಕಣ್ಣಾಮುಚ್ಚಾಲೆಯಾಟ! ಕಲ್ಲಿದ್ದಲು ಕೊರತೆ, ತಾಂತ್ರಿಕ ದೋಷ ಮತ್ತು ನಿರ್ವಹಣೆಯಲ್ಲಿನ ಕಾರಣಗಳಿಂದಾಗಿ ಉಷ್ಣ ವಿದ್ಯುತ್‌ ಉತ್ಪಾದನೆ ದಿಢೀರ್‌ ಆಗಿ 1,500 ಮೆಗಾ ವ್ಯಾಟ್‌ನಷ್ಟು ಇಳಿಕೆಯಾಗಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ಯಿಂದಲೇ 500 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿ ಆರಂಭವಾಗಿದ್ದು, ಇಂಡಿಯನ್‌ ಎನರ್ಜಿ ಎಕ್ಸ್‌ಚೇಂಜ್‌ನಿಂದಲೂ (ಐಇಎಕ್ಸ್‌) ವಿದ್ಯುತ್‌ ಖರೀದಿಸಿ ಪರಿಸ್ಥಿತಿ ನಿಭಾಯಿಸಲು ಇಂಧನ ಇಲಾಖೆ ಮುಂದಾಗಿದೆ. ಇಷ್ಟಾ ದರೂ 1000 ಮೆಗಾವ್ಯಾಟ್‌ ಕೊರತೆ ತಲೆ ದೋರಿರುವುದರಿಂದ ವಿದ್ಯುತ್‌ ಕಡಿತ ಮುಂದುವರಿದಿದೆ.

Advertisement

ಮುಂಗಾರು ಆರಂಭದಲ್ಲಿ ಮಳೆರಾಯ ಕೈಕೊಟ್ಟರೂ ಜುಲೈ ಮಧ್ಯಭಾಗದಿಂದ ಎರಡು ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ಮಳೆ ಸುರಿದ ಪರಿಣಾಮ ವಿದ್ಯುತ್‌ ಬೇಡಿಕೆ ತೀವ್ರ ಇಳಿಕೆಯಾಗಿತ್ತು. ಜತೆಗೆ ಕೃಷಿ ಚಟುವಟಿಕೆಯು ಬಿರುಸುಗೊಂಡಿತ್ತು. ಈಗ ಮಳೆ ನಿಂತಿದ್ದು, ವಿದ್ಯುತ್‌ ಬೇಡಿಕೆಯ ಏರುಮುಖವಾಗಿದೆ. ಈ ಹೊತ್ತಿನಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಉತ್ಪಾದನೆ ಕುಸಿದಿರುವುದರಿಂದ ಸಮಸ್ಯೆ ತಲೆದೋರಿದೆ.

ಕೇಂದ್ರ ಸರಕಾರದ ಹಂಚಿಕೆಯಲ್ಲೂ ಇಳಿಕೆ: ಇನ್ನೊಂದೆಡೆ ಕೇಂದ್ರ ಸರಕಾರದೊಂದಿಗಿನ ಒಡಂಬಡಿಕೆಯಂತೆ ಹಂಚಿಕೆಯಾದ ವಿದ್ಯುತ್‌ನಲ್ಲೂ 700 ಮೆಗಾವ್ಯಾಟ್‌ ಇಳಿಕೆಯಾಗಿದೆ. ಅಲ್ಲಿಂದ ಸುಮಾರು 3000 ಮೆಗಾವ್ಯಾಟ್‌ ಹಂಚಿಕೆಯಾಗಿದ್ದರೂ 2,300 ಮೆಗಾವ್ಯಾಟ್‌ ಪೂರೈಕೆ ಯಾಗುತ್ತಿದೆ. ದೇಶದ ಬಹುತೇಕ ಕಡೆಗಳಲ್ಲೂ ಕಲ್ಲಿದ್ದಲು ಕೊರತೆ, ಗಣಿಗಾರಿಕೆಗೆ ಅಡಚಣೆ ಇತರೆ ಕಾರಣಗಳಿಂದ ಪೂರೈಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕ ದೋಷ: ಉಡುಪಿಯ ಯುಪಿಸಿಎಲ್‌ ಸ್ಥಾವರದ ಒಂದು ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, 600 ಮೆಗಾವ್ಯಾಟ್‌ ಉತ್ಪಾದನೆ ಖೋತಾ ಆಗಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನೊಂದು ವಾರ ಕಾಲಾವಕಾಶ ಬೇಕಿದ್ದು, ಅಲ್ಲಿಯವರೆಗೆ ಒಂದು ಘಟಕವಷ್ಟೇ ಕಾರ್ಯ ನಿರ್ವಹಿಸಲಿದೆ. ರಾಯಚೂರಿನ ಆರ್‌ಟಿಪಿಎಸ್‌ನಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಎರಡು ಘಟಕಗಳು ಮಂಗಳವಾರ ರಾತ್ರಿಯಿಂದ ಕಾರ್ಯಾರಂಭವಾಗಿವೆ. ಆದರೆ ನಿರ್ವಹಣೆಗಾಗಿ ಒಂದು ಘಟಕ ಸ್ಥಗಿತಗೊಂಡಿದೆ. ಒಟ್ಟಾರೆ ಉಷ್ಣ ಸ್ಥಾವರಗಳಿಂದಲೇ 1,500 ಮೆಗಾವ್ಯಾಟ್‌ ಉತ್ಪಾದನೆ ಕುಸಿತದಿಂದ ಎರಡು ದಿನಗಳಿಂದ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಹೆಚ್ಚಿದ ಬೇಡಿಕೆ: ಜುಲೈ ಬಳಿಕ ಉತ್ತಮ ಮಳೆ
ಯಿಂದಾಗಿ ರಾಜ್ಯಾದ್ಯಂತ ಬಿತ್ತನೆಯೂ ಚುರುಕುಗೊಂಡಿತ್ತು. ಈಗ ಮಳೆ ಪ್ರಮಾಣವೂ ತಗ್ಗಿರುವುದರಿಂದ ರಾಜ್ಯಾದ್ಯಂತ ಕೃಷಿ ಪಂಪ್‌ಸೆಟ್‌ ಬಳಕೆ ಹೆಚ್ಚಾಗಿದ್ದು, ವಿದ್ಯುತ್‌ ಬೇಡಿಕೆಯೂ ತೀವ್ರವಾಗಿದೆ.  

Advertisement

ವಿದ್ಯುತ್‌ ಖರೀದಿ ಆರಂಭ: ಉಷ್ಣ ವಿದ್ಯುತ್‌
ಉತ್ಪಾದನೆ ಕುಸಿತ ಹಿನ್ನೆಲೆಯಲ್ಲಿ 500 ಮೆಗಾ ವ್ಯಾಟ್‌ ವಿದ್ಯುತ್‌ ಖರೀದಿ ಪ್ರಕ್ರಿಯೆ ಮಂಗಳವಾರ ಮಧ್ಯರಾತ್ರಿಯಿಂದ ಆರಂಭವಾಗಿದೆ. ಕೆಇಆರ್‌ಸಿ ಅನುಮೋದನೆ ಹಿನ್ನೆಲೆಯಲ್ಲಿ ಖರೀದಿ ಶುರು ವಾಗಿದ್ದು, ಮೇ ಅಂತ್ಯದವರೆಗೆ ಮುಂದು ವರಿಯಲಿದೆ. ಜತೆಗೆ ಬೆಸ್ಕಾಂಗೆ 300 ಮೆಗಾವ್ಯಾಟ್‌ ಹಾಗೂ ಹೆಸ್ಕಾಂಗೆ 100 ಮೆಗಾವ್ಯಾಟ್‌ ಐಇಎಕ್ಸ್‌ ನಿಂದ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ.

1000 ಮೆಗಾವ್ಯಾಟ್‌ ಕೊರತೆ: ಸದ್ಯ ರಾಜ್ಯಾ ದ್ಯಂತ ವಿದ್ಯುತ್‌ ಬೇಡಿಕೆ 9000 ಮೆಗಾವ್ಯಾಟ್‌ನಷ್ಟಿದ್ದು, ಉತ್ಪಾದನೆ, ಖರೀದಿ ಎಲ್ಲ ಸೇರಿ 8,000 ಮೆಗಾವ್ಯಾಟ್‌ ಪೂರೈಕೆಯಾಗುತ್ತಿದೆ. ಇನ್ನೂ 1,000 ಮೆಗಾವ್ಯಾಟ್‌ ಕೊರತೆಯಿದ್ದು, ಅನಿಯಮಿತ ಲೋಡ್‌ ಶೆಡ್ಡಿಂಗ್‌ನಿಂದ ನಿಭಾಯಿಸಲಾಗುತ್ತಿದೆ. ಈ ನಡುವೆ ಯರಮರಸ್‌ನ ವೈಟಿಪಿಎಸ್‌ ಘಟಕ ದಿಂದ ವಿದ್ಯುತ್‌ ಉತ್ಪಾದನೆ ಶುರುವಾಗಿರುವುದು ಆಶಾಭಾವನೆ ಮೂಡಿಸಿದೆ. ಗುರುವಾರದಿಂದ ಪೂರೈಕೆ  500 ಮೆಗಾ ವ್ಯಾಟ್‌ಗೆ ಏರಿಕೆಯಾದರೆ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಕಲ್ಲಿದ್ದಲು ಕೊರತೆ 
ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ  ಸದ್ಯ ಒಂದು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರಯಿದ್ದು, ಸಂಕಷ್ಟದ ಸ್ಥಿತಿ ಎದುರಾಗಿದೆ. ಈ ಹಿಂದೆ ನೀರಿನ ಕೊರತೆ ಕಾರಣಕ್ಕೆ ಬಳ್ಳಾರಿಯ ಬಿಟಿಪಿಎಸ್‌ನ ಎರಡು ಘಟಕ ಸ್ಥಗಿತಗೊಳಿಸಲಾಗಿತ್ತು. ಈಗ ನೀರಿನ ಲಭ್ಯತೆಯಿದ್ದರೂ ಕಲ್ಲಿದ್ದಲು ಕೊರತೆಯಿಂದ ಎರಡು ಘಟಕಗಳು ಸ್ಥಗಿತವಾಗಿವೆ. ರಾಯ ಚೂರಿನ ಆರ್‌ಟಿಪಿಎಸ್‌ನಲ್ಲೂ ಕಲ್ಲಿದ್ದಲು ಕೊರತೆಯಿಂದಾಗಿ ಉತ್ಪಾದನೆಯಲ್ಲಿ ಏರಿಳಿತವಾಗುತ್ತಿದೆ. ಎಲ್ಲ ಉಷ್ಣ ಸ್ಥಾವರಗಳೂ “ಸೂಪರ್‌ ಕ್ರಿಟಿಕಲ್‌ ಕಂಡಿಷನ್‌’ನಲ್ಲಿದ್ದು, ಕಲ್ಲಿದ್ದಲು ಪೂರೈಕೆಯಲ್ಲಿ  ತುಸು ವ್ಯತ್ಯಯವಾದರೂ ಉತ್ಪಾದನೆ ಸಂಪೂರ್ಣ ಕುಸಿಯುವ ಭೀತಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next