Advertisement

“ಕಾಟಿ’ಗಳ ಉಪಟಳದಿಂದ ಕೃಷಿಕರ ಬದುಕಿನಲ್ಲಿ ಕತ್ತಲು

12:10 AM Mar 13, 2020 | mahesh |

ಪುತ್ತೂರು: ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ತೋಟಗಳಿಗೆ ಲಗ್ಗೆ ಇಡುವ ಕಾಡುಕೋಣಗಳ ವಿಪರೀತ ಉಪಟಳದಿಂದ ರೈತರು ಕೃಷಿ ಹಾನಿ ಅನುಭವಿಸುತ್ತಿದ್ದಾರೆ. ಆದರೆ ಇಲಾಖೆಯ ಕಡೆಯಿಂದ ಇದರ ನಿಯಂತ್ರಣಕ್ಕೆ ಸಮರ್ಪಕ ಪರಿಹಾರ ಸೂತ್ರವೇ ಇಲ್ಲ.

Advertisement

ಬಡಗನ್ನೂರು ಹಾಗೂ ಅರಿಯಡ್ಕ ಗ್ರಾಮ ವ್ಯಾಪ್ತಿಯ ಬಳ್ಳಿಕಾನ, ಪೆರಿಗೇರಿ, ಕೇಪುಳಕಾನ ಮೋಡಿಕೆ, ಮುಂಡೋಳೆ, ಅಂಬಟೆಮೂಲೆ ಪರಿಸರದಲ್ಲಿ ಸುಮಾರು 14 ಕಾಡುಕೋಣ, ಕಾಡೆಮ್ಮೆಗಳಿರುವ ಹಿಂಡು ಕೆಲವು ತಿಂಗಳುಗಳಿಂದ ಸುತ್ತಾಡುತ್ತಿದ್ದು, ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ವ್ಯಾಪಕ ಪ್ರಮಾಣದಲ್ಲಿ ಕೃಷಿ ಹಾನಿ ಮಾಡುತ್ತಿದ್ದರೂ ಕೃಷಿಕರು ಮಾತ್ರ ಕೈಕಟ್ಟಿ ಕುಳಿತುಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಕೆಲವು ವರ್ಷಗಳ ಹಿಂದಿನಿಂದಲೇ ಬಡಗನ್ನೂರು ಗ್ರಾಮದ ಕನ್ನಡ್ಕ, ಸುಳ್ಯಪದವು ಪರಿಸರದ ಕಾಡುಗಳಲ್ಲಿ ಈ ಕಾಡುಕೋಣಗಳ ಹಿಂಡು ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಳ್ಳಿಕಾನ, ಪೆರಿಗೇರಿ ಪರಿಸರಕ್ಕೆ ಲಗ್ಗೆ ಇಟ್ಟಿದ್ದು, ಈ ಭಾಗದಲ್ಲಿ ಕಾಡು ಹಾಗೂ ತೋಟಗಳು ಯಥೇತ್ಛ ಪ್ರಮಾಣದಲ್ಲಿ ಇರುವುದರಿಂದ ಉಪಟಳವೂ ಹೆಚ್ಚಾಗಿದೆ. ಕಾಡುಕೋಣಗಳ ಹಿಂಡು ಕೆಲವೊಮ್ಮೆ ರಸ್ತೆಗೂ ಬರುತ್ತಿದ್ದು, ಸವಾರರು ಹೆದರಿ ದಿಕ್ಕಾಪಾಲಾಗುತ್ತಾರೆ.

ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು!
ಕಾಡುಕೋಣಗಳು ನಾಡಿಗೆ ಪ್ರವೇಶ ಮಾಡಿದ್ದರೂ ಸ್ಥಳೀಯರಿಗೆ ಅಪಾಯ ಮಾಡಿಲ್ಲ. ಆದರೆ ಕೃಷಿ ಹಾನಿ ಹೆಚ್ಚಾಗಿದ್ದು, ಜನರನ್ನು ಹೈರಾಣು ಮಾಡಿದೆ.

ಕಣ್ಣೆದುರೇ ಕೃಷಿ ಹಾನಿಯಾಗುತ್ತಿದ್ದರೂ ಅರಣ್ಯ ಹಾಗೂ ವನ್ಯಜೀವಿ ಕಾಯ್ದೆಯ ಭಯದಿಂದ ಕೃಷಿಕರು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ.

Advertisement

ಸಿರಿ ಮೂಡಲು ಬಿಡುವುದಿಲ್ಲ
ತೋಟಗಳಿಗೆ ಲಗ್ಗೆ ಇಡುವ ಕಾಡುಕೋಣಗಳು ಎರಡು -ಮೂರು ವರ್ಷಗಳಿಂದ ಸಾಕಿ ಹಿಂಗಾರ ಬಿಡಲು ಸಿದ್ಧವಾಗಿರುವ ಅಡಿಕೆ ಗಿಡ, ಸಿರಿ ಮೂಡುವ ತೆಂಗು, ಬಾಳೆ ಗಿಡಗಳನ್ನು ನಾಶ ಮಾಡುತ್ತವೆ. ಮುಖ್ಯವಾಗಿ ತೋಟದಲ್ಲಿ ನೀರಿನ ವ್ಯವಸ್ಥೆಗೆ ಅಳವಡಿಸಿರುವ ನಳ್ಳಿ, ಪೈಪ್‌ಗ್ಳನ್ನು ಮುರಿದು ಹಾಕುತ್ತಿವೆ. ಈ ನಷ್ಟವನ್ನು ಭರಿಸಿಕೊಂಡು ಏಗುವುದೇ ಕೃಷಿಕರಿಗೆ ಸವಾಲಾಗಿದೆ.

ಟ್ಯಾಂಕ್‌ಗೆ ಬಿದ್ದಿತ್ತು
ಎರಡು ದಿನಗಳ ಹಿಂದೆ ಅಂಬಟೆಮೂಲೆ ಪಟ್ಟಾಜೆಯಲ್ಲಿ ಕೃಷಿಕರೋರ್ವರ ಗುಡ್ಡದಲ್ಲಿ ನಿರ್ಮಿಸಲಾಗಿರುವ ನೀರು ಸಂಗ್ರಹದ ಟ್ಯಾಂಕ್‌ಗೆ ಅಳವಡಿಸಿದ್ದ ಸಿಮೆಂಟ್‌ ಶೀಟ್‌ ಮುರಿದು ಕಾಡುಕೋಣ ನೀರಿಗೆ ಬಿದ್ದಿತ್ತು. ಅಧಿಕಾರಿಗಳು ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ಅದನ್ನು ರಕ್ಷಿಸಿದ್ದು, ಟ್ಯಾಂಕ್‌ನಲ್ಲಿ ಕಡಿಮೆ ನೀರಿದ್ದ ಕಾರಣ ಯಾವುದೇ ಗಾಯವಿಲ್ಲದೆ ಪಾರಾಗಿದೆ.

ಗರ್ನಾಲ್‌ ಮದ್ದಾಗುವುದೇ?
ಕಾಡುಕೋಣಗಳ ಉಪಟಳದಿಂದ ರೋಸಿ ಹೋಗಿರುವ ಈ ಪರಿಸರದ ಕೃಷಿಕರು ಗರ್ನಾಲ್‌, ಪಟಾಕಿ ಸಿಡಿಸಿ ಅವುಗಳನ್ನು ಓಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಒಮ್ಮೆ ತೆರಳುವ ಹಿಂಡು ಕೆಲವೇ ಕ್ಷಣಗಳಲ್ಲಿ ಮತ್ತೆ ಆಗಮಿಸಿ ಕೃಷಿಕರಿಗೇ ಸವಾಲು ಹಾಕುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅವರ ಪರಿಹಾರ ಮಾರ್ಗವೂ ಗರ್ನಾಲ್‌ಗೆ ಸೀಮಿತವಾಗಿರುತ್ತದೆ ಎನ್ನುವ ಅಳಲು ರೈತರದ್ದು.

 ಸಣ್ಣ ಮೊತ್ತದ ಪರಿಹಾರ
ಕಾಡುಕೋಣಗಳ ಕಾಟಕ್ಕೆ ಇಲಾಖೆಯಿಂದ ಶಾಶ್ವತ ಪರಿಹಾರ ಇಲ್ಲ. ನಷ್ಟಕ್ಕೆ ಸಣ್ಣ ಮೊತ್ತದ ಪರಿಹಾರವಷ್ಟೇ ಲಭಿಸುತ್ತಿದೆ. ಆದರೆ ಕೆಲವು ವರ್ಷ ಸಾಕಿದ ಹಿಂಗಾರ ಬಿಡಲು ಆರಂಭವಾದ ತೆಂಗು, ಕಂಗು, ಬಾಳೆ ಗಿಡಗಳ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಇವುಗಳ ಉಪಟಳ ರೈತರನ್ನು ಹೈರಾಣಾಗಿಸಿದೆ.
– ಲಿಂಗಪ್ಪ ಗೌಡ ಮೋಡಿಕೆ, ಸ್ಥಳೀಯ ನಿವಾಸಿ, ಕೃಷಿಕ

ಸಿಬಂದಿ ಓಡಿಸುತ್ತಾರೆ
ಕಾಡುಕೋಣಗಳ ಲಗ್ಗೆಯಿಂದ ತೋಟದಲ್ಲಿ ಉಂಟಾದ ನಷ್ಟವನ್ನು ಪರಿಶೀಲನೆ ನಡೆಸಿ ಪರಿಹಾರ ನೀಡ ಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಕಾಡು ಕೋಣಗಳು ಬಂದರೆ ಇಲಾಖೆ ಸಿಬಂದಿ ಓಡಿಸುವ ಕಾರ್ಯ ಮಾಡುತ್ತಾರೆ.
-ಮೋಹನ್‌ ಬಿ.ಜಿ., ವಲಯ ಅರಣ್ಯಾಧಿಕಾರಿ, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next