Advertisement

ಕುಕ್ಕೆಯಲ್ಲಿ ಕತ್ತಲು: ಬೆಳಗುತ್ತಿಲ್ಲ ನಗರದ ಬೀದಿ ದೀಪಗಳು

11:19 PM Sep 29, 2019 | Sriram |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕ್ಷೇತ್ರದ ಪರಿಸರ ಹಾಗೂ ರಸ್ತೆಗಳಲ್ಲಿ ರಾತ್ರಿ ಓಡಾಡುವುದೇ ಬಲು ದೊಡ್ಡ ಸವಾಲಾಗಿದೆ. ಬೀದಿದೀಪಗಳು ಸರಿಯಾಗಿ ಉರಿಯದ ಕಾರಣ ರಾತ್ರಿ ವೇಳೆ ಕ್ಷೇತ್ರಕ್ಕಾಗಮಿಸಿದ ಭಕ್ತರು, ಸಾರ್ವಜನಿಕರು ಇಲ್ಲಿ ಓಡಾಡುವ ವೇಳೆ ಪರದಾಡುವ ಸ್ಥಿತಿಯಿದೆ. ವಾಹನ ಸವಾರರೂ ತೊಂದರೆಗೆ ಒಳಗಾಗುತ್ತಿದ್ದಾರೆ.

Advertisement

ಕ್ಷೇತ್ರದ ಪೇಟೆ ಹಾಗೂ ಮುಖ್ಯ ರಸ್ತೆಯಲ್ಲಿ ದೇವಸ್ಥಾನದ ವತಿಯಿಂದ ವಿದ್ಯುತ್‌ ಕಂಬಗಳಿಗೆ ಅಳವಡಿಸಿದ ದೀಪಗಳಲ್ಲಿ ಬಹುತೇಕ ಉರಿಯುತ್ತಿಲ್ಲ. ರಥಬೀದಿ ಜಂಕ್ಷನ್‌ನಿಂದ ಕುಮಾರಧಾರಾ ತನಕ 2 ಕಿ.ಮೀ. ವ್ಯಾಪ್ತಿಯಲ್ಲಿ ಅಳವಡಿಸಿದ ದಾರಿ ದೀಪಗಳಲ್ಲಿ ಕೇವಲ ಮೂರು ಕಡೆ ಮಾತ್ರ ದೀಪಗಳು ಉರಿಯುತ್ತಿವೆ. ದೇವಸ್ಥಾನದ ವತಿಯಿಂದ ಅಳವಡಿಸಿದ ಮರ್ಕ್ನೂರಿ ಲೈಟ್‌ ಕೂಡ ಉರಿಯುತ್ತಿಲ್ಲ.

ಕುಮಾರಧಾರಾ-ಕಾಶಿಕಟ್ಟೆ ನಡುವೆ ರಸ್ತೆ ವಿಸ್ತರಣೆ ವೇಳೆ ರಸ್ತೆ ಬದಿಯ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳಾಂತರದ ಬಳಿಕ ಕೆಲವೇ ಕಂಬಗಳಲ್ಲಿ ಮಾತ್ರ ವಿದ್ಯುತ್‌ ದೀಪಗಳು ಉಳಿದುಕೊಂಡಿವೆ. 2 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ ಮೂರು ದಾರಿ ದೀಪಗಳು ಉರಿಯುತ್ತಿವೆ. ದಾರಿಯುದ್ದಕ್ಕೂ ಕತ್ತಲು ಕವಿದಿದೆ.

ಕುಮಾರಧಾರಾ-ಕಾಶಿಕಟ್ಟೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಸಮರ್ಪಕವಾಗಿಲ್ಲ. ಇಲ್ಲಿ ವಾಹನಗಳು ಸಂಚಾರದ ವೇಳೆ ಸಮಸ್ಯೆಗೆ ಒಳಗಾಗುತ್ತಿವೆ. ಭಕ್ತರು ರಾತ್ರಿ ಹೊತ್ತು ಹಾಗೂ ನಸುಕಿನಲ್ಲಿ ಕುಮಾರಧಾರಾ ತನಕ ಕಾಲ್ನಡಿಗೆಯಲ್ಲಿ ತೆರಳಿ ಸ್ನಾನ ಪೂರೈಸಿ ವಾಪಸಾಗುವ ವೇಳೆ ಕತ್ತಲಿನಲ್ಲೆ ಹೊಂಡ – ಗುಂಡಿ ಗಳನ್ನು ದಾಟಿ ತೆರಳಬೇಕಿದೆ.

ಕಾಶಿಕಟ್ಟೆ ಬಳಿ ಕತ್ತಲು
ಕತ್ತಲಿರುವ ಕಾರಣ ಈ ಮಾರ್ಗದಲ್ಲಿ ರಾತ್ರಿ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದ್ದು, ಜನರಲ್ಲಿ ಸಂಚಾರ ಭಯ ಹುಟ್ಟು ಹಾಕಿದೆ. ಕಾಶಿಕಟ್ಟೆ ಬಳಿ ಬೆಳಕಿನ ಸಮಸ್ಯೆಯಿಂದ ಅನೇಕ ಅವಘಡಗಳು ಸಂಭವಿಸಿವೆ. ಇತ್ತಿಚೆಗೆ ವಿದ್ಯಾರ್ಥಿಗಳಿಬ್ಬರು ಮಂದ ಬೆಳಕಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇಲ್ಲಿಗೆ ತುರ್ತಾಗಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಿದೆ. ಕ್ಷೇತ್ರದಲ್ಲಿ ಸರಿಯಾಗಿ ರಾತ್ರಿ ಹೊತ್ತು ಬೆಳಕು ಇಲ್ಲದೆ ಇರುವುದಕ್ಕೆ ಕ್ಷೇತ್ರಕ್ಕಾಗಮಿಸುವ ಭಕ್ತರು ಶಪಿಸುತ್ತಿದ್ದಾರೆ.

Advertisement

ಮೊಬೈಲ್‌ ಬೆಳಕಲ್ಲಿ ಸಂಚಾರ
ಬೀದಿ ದೀಪಗಳಷ್ಟೆ ಅಲ್ಲ, ಪಾರ್ಕಿಂಗ್‌ ಸ್ಥಳಗಳ ದೀಪಗಳೂ ಉರಿಯುತ್ತಿಲ್ಲ. ಪಾರ್ಕಿಂಗ್‌ ಸ್ಥಳಗಳೂ ಕತ್ತಲ ಕೂಪಗಳಾಗಿವೆ. ನಗರ ಮುಖ್ಯ ರಸ್ತೆಗಳಂತೂ ಕತ್ತಲನ್ನೇ ನುಂಗಿದಂತಿವೆ. ವಸತಿಗೃಹಗಳ ದಾರಿಯಲ್ಲೂ ಭಕ್ತರು ಮೊಬೈಲ್‌ ಟಾರ್ಚ್‌ ಅನ್ನೇ ಅವಲಂಬಿಸಬೇಕಿದೆ. ಒಳ ರಸ್ತೆಗಳಲ್ಲಿ ಜನಸಂದಣಿಯಿಲ್ಲದ ಸ್ಥಳಗಳಲ್ಲಿ ಭಕ್ತರು ಕತ್ತಲನ್ನು ನೋಡಿ ಭಯಪಡುತ್ತಲೇ ಸಂಚರಿಸುತ್ತಾರೆ. ಸಾರ್ವಜನಿಕರು ಪೇಟೆ, ರಸ್ತೆ ಬದಿ ಅಂಗಡಿಗಳಿಂದ ಹೊರಸೂಸುವ ಮಂದ ಬೆಳಕಿನಲ್ಲೆ ಓಡಾಡುತ್ತಿದ್ದಾರೆ. ಸಾರಿಗೆ ಬಸ್‌ ನಿಲ್ದಾಣದಲ್ಲೂ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ನಿಲಾœಣಕ್ಕೆ ಮುಖ್ಯ ರಸ್ತೆಯಿಂದ ತಿರುಗುವ ಸ್ಥಳದಲ್ಲಿ ಮರದಲ್ಲಿ ಬೀದಿ ದೀಪ ಅಳವಡಿಸಿದ್ದು, ಅದು ಕೆಟ್ಟು ಹೋಗಿದೆ. ಕೆಳಗೆ ಓಡಾಡುವ ಸಾರ್ವಜನಿಕರ ಮೇಲೆ ಬೀಳಲು ಸಿದ್ಧವಾಗಿದೆ. ಹಲವು ಸಮಯದಿಂದ ಪರಿಸರದ ಬೀದಿ ದೀಪಗಳು ಉರಿಯುತ್ತಿಲ್ಲ. ಕ್ಷೇತ್ರದಲ್ಲಿ ರಾತ್ರಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ವಾಹನ ಅಪಘಾತ, ವಿತ್ತ-ಜೀವ ಹಾನಿ ಆಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಬೆಳಕು ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಮಾನ ಜವಾಬ್ದಾರಿ
ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆಯಿಲ್ಲ. ಇನ್ನು ಗ್ರಾ.ಪಂ. ವ್ಯಾಪ್ತಿಯ ಹಲವು ಜನವಸತಿ ಪ್ರದೇಶಗಳು, ಪರಿಶಿಷ್ಟ-ಜಾತಿ ಪಂಗಡಳು ವಾಸವಿರುವ ಸ್ಥಳಗಳಲ್ಲಿ ಸಹಿತ ಬೀದಿ ದೀಪಗಳ ಸಮಸ್ಯೆ ಇದೆ. ಕ್ಷೇತ್ರದ ಮುಖ್ಯ ರಸ್ತೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಪ್ರಕಾಶ ಮಾನವಾದ ಬೆಳಕಿನ ವ್ಯವಸ್ಥೆ ಮಾಡಬೇಕಿದೆ.

ಮೋಜಿನ ಅವಕಾಶ
ಕತ್ತಲಾಗುತ್ತಿದ್ದಂತೆ ಇಲ್ಲಿನ ಪಾಳುಬಿದ್ದ ಪಾರ್ಕಿಂಗ್‌ನ ಮಂದ ಬೆಳಕಿನ ಸ್ಥಳಗಳು ಪಡ್ಡೆ ಹುಡುಗರಿಗೆ, ಕಿಡಿಗೇಡಿಗಳಿಗೆ ಮಜಾ ಮಾಡುವ ತಾಣಗಳಾಗಿ ಪರಿವರ್ತನೆ ಯಾಗುತ್ತಿವೆ. ಅಲ್ಲಿ ಧೂಮಪಾನ, ಮದ್ಯ ಪಾನ, ಇಸ್ಪೀಟ್‌ ಆಟ ಇತ್ಯಾದಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಕುರಿತಾ ಗಿಯೂ ದೇವಸ್ಥಾನ, ಗ್ರಾ.ಪಂ. ಹಾಗೂ ಪೊಲೀಸ್‌ ಇಲಾಖೆ ಗಮನ ಹರಿಸಬೇಕಿದೆ.

ಗಮನ ಹರಿಸುತ್ತೇವೆ
ದೇವಸ್ಥಾನ ಮತ್ತು ಸ್ಥಳೀಯಾಡಳಿತ ಎರಡೂ ಸಂಸ್ಥೆಗಳು ಸೇರಿ ನಗರದ ಬೆಳಕಿನ ವ್ಯವಸ್ಥೆ ಕಲ್ಪಿಸುತ್ತಿವೆ. ವಿಪರೀತ ಮಳೆಯ ಕಾರಣ ದಾರಿದೀಪ ಅಳವಡಿಕೆ ತುಸು ವಿಳಂಬವಾಗಿದೆ. ಶೀಘ್ರ ದುರಸ್ತಿ ಹಾಗೂ ಆವಶ್ಯಕ ಸ್ಥಳಗಳಲ್ಲಿ ದೀಪ ಅಳವಡಿಕೆಗೆ ಗಮನ ಹರಿಸುತ್ತೇವೆ. ದೇವಸ್ಥಾನಕ್ಕೂ ಮನವಿ ಮಾಡುತ್ತೇವೆ.
– ಮುತ್ತಪ್ಪ,
ಪಿಡಿಒ, ಸುಬ್ರಹ್ಮಣ್ಯ ಗ್ರಾ.ಪಂ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next