Advertisement
ಇಲ್ಲಿ ಕ್ರೈಮ್ ಇದ್ದರೂ ಅದನ್ನು “ಬರ್ಬರ’ವಾಗಿಸದೆ, “ಅಬ್ಬರ’ ಮಾಡದೆ ಸೂಕ್ಷ್ಮಸಂದೇಶ ಮತ್ತು ನೋಡಿಸುವ ಪ್ರಜ್ಞೆಯೊಂದಿಗೆ ಸಿಟಿಯೊಳಗಿನ ತಲ್ಲಣ ಹಾಗೂ ತಳಮಳವನ್ನು ದೃಶ್ಯರೂಪಕವಾಗಿಸಿದ್ದಾರೆ ನಿರ್ದೇಶಕ ಮುರಳಿ ಗುರಪ್ಪ. ಒಂದು ಸಿನಿಮಾ ಇಷ್ಟವಾಗೋದೇ ನಿರೂಪಣೆ ಶೈಲಿ, ತೋರಿಸುವ ವಿಧಾನದಿಂದ. ಆ ವಿಷಯದಲ್ಲಿ “ಸಿಲಿಕಾನ್ ಸಿಟಿ’ಗೆ ಒಳ್ಳೇ ಮಾರ್ಕ್ಸ್ ಕೊಡಲ್ಲಡ್ಡಿಯಿಲ್ಲ.
Related Articles
Advertisement
ಕೆಲವೊಂದು ಕಡೆ ಸಣ್ಣಪುಟ್ಟ ತಪ್ಪುಗಳು ಕಾಣಿಸಿಕೊಂಡರೂ, ಅದನ್ನೆಲ್ಲ ಹಿನ್ನೆಲೆ ಸಂಗೀತ ಹಾಗೂ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಹಾಡುಗಳು ಮುಚ್ಚಿ ಹಾಕುತ್ತವೆ. ಫ್ಯಾಮಿಲಿಯ ಸಂತಸ, ಸಡಗರ, ಸಂಬಂಧ ಇವೆಲ್ಲವನ್ನು ನೋಡುತ್ತಿದ್ದಂತೆಯೇ ವೇಗವಾಗಿ ಸಾಗುವ ಮೊದಲರ್ಧ ಮುಗಿಯುವುದು ಗೊತ್ತಾಗುವುದಿಲ್ಲ. ದ್ವಿತಿಯಾರ್ಧದಲ್ಲಿ ಸಿಗುವ ಬಲವಾದ “ಟ್ವಿಸ್ಟ್’ವೊಂದು ನೋಡುಗನ ಕುತೂಹಲಕ್ಕೆ ಕಾರಣವಾಗುತ್ತೆ.
ಮೊದಲೇ ಹೇಳಿದಂತೆ ಇದು ಕ್ರೈಮ್ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಾಗಿದ್ದರೂ, ಇಲ್ಲೊಂದು ಸಂದೇಶವಿದೆ. ಬೇಕು, ಬೇಡಗಳ ನಡುವಿನ ಚಿಂತನೆಯಿದೆ. ಅತೀ ಆಸೆಯಿಂದಾಗುವ ಅನಾಹುತಗಳೂ ಇವೆ. ಅರಿತೂ ತಪ್ಪು ಮಾಡಿದರೆ ಆಗುವ ಪರಿಣಾಮ ಎಂಥದ್ದು ಎಂಬ ಅರಿವಿನ ಪಾಠವೂ ಇದೆ. ವಾಸ್ತವಕ್ಕೆ ಹತ್ತಿರ ಎನಿಸುವ ಅಂಶವೂ ಉಂಟು. ಹಾಗಾಗಿ ಇದೊಂದು ಟೈಮ್‌ಪಾಸ್ ಸಿನಿಮಾ ಆಗದೆ, ಎಚ್ಚೆತ್ತುಕೊಳ್ಳುವ, ಅರಿವಾಗಿಸುವ ಸಿನಿಮಾ ಎನಿಸುತ್ತಾ ಹೋಗುತ್ತೆ.
ಹೌದಾ? ಎಂಬ ಪ್ರಶ್ನೆ ಎದುರಾದರೆ, ಒಮ್ಮೆ “ಸಿಲಿಕಾನ್ ಸಿಟಿ’ಯ ಪ್ರಯತ್ನ ನೋಡಲ್ಲಡ್ಡಿಯಿಲ್ಲ. ಇಲ್ಲಿ ಶ್ರೀನಗರ ಕಿಟ್ಟಿ ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಿ, ಪ್ರೀತಿಸೋ ಹುಡುಗಿಗೆ ಮೆಚ್ಚಿನ ಹುಡುಗನಾಗಿ, ತಮ್ಮನಿಗೆ ಪ್ರೀತಿಯ ಅಣ್ಣನಾಗಿ ಇಷ್ಟವಾಗುತ್ತಾರೆ. ಈವರೆಗಿನ ಪಾತ್ರಗಳಿಗಿಂತ ಒಂದು ಭಿನ್ನ ಪಾತ್ರವಾಗಿರುವುದರಿಂದ ಅದನ್ನು ಜೀವಿಸಿದ್ದಾರೆ. ಸೂರಜ್ ಗೌಡ ಇಲ್ಲಿ ಮುಗ್ಧ ಮಗನಾಗಿ, ಕೆಟ್ಟ ತಮ್ಮನಾಗಿ ಗಮನಸೆಳೆಯುತ್ತಾರೆ. ತುಳಸಿ ಶಿವಮಣಿ ಅವರು ಲವಲವಿಕೆಯಿಂದಲೇ ನೋಡುಗರನ್ನು ರಂಜಿಸುತ್ತಾರೆ.
ಒಬ್ಬ ಅಪ್ಪನಾಗಿ ಅಶೋಕ್ ಆಪ್ತವೆನಿಸುತ್ತಾರೆ. ಉಳಿದಂತೆ ಕಾವ್ಯಾ ಶೆಟ್ಟಿಗೆ ಇಲ್ಲೇನೂ ಹೆಚ್ಚು ಕೆಲಸವಿಲ್ಲ. ಯುಕ್ತಾ ರಾಥೋಡ್‌ಗೂ ಇದೇ ಮಾತು ಅನ್ವಯ. ಚಿಕ್ಕಣ್ಣವಿದ್ದರೂ ಇಲಿ ನಗುವಿನ ಕಚಗುಳಿಯಿಲ್ಲ. ಉಳಿದಂತೆ ಬರುವ ಪಾತ್ರಗಳು ಚಿತ್ರದ ವೇಗವನ್ನು ಹೆಚ್ಚಿಸಿವೆ. ಅನೂಪ್ ಸೀಳಿನ್ ಹಾಗೂ ಜೋಹಾನ್ ಸಂಗೀತದಲ್ಲಿ ಸ್ವಾದವಿದೆ. ಚಿನ್ನ ಅವರ ಹಿನ್ನೆಲೆ ಸಂಗೀತ ಪೂರಕವೆನಿಸುತ್ತೆ. ಶ್ರೀನಿವಾಸ್ ರಾಮಯ್ಯ ಕ್ಯಾಮೆರಾದಲ್ಲಿ “ಸಿಲಿಕಾನ್ ಸಿಟಿ’ಯ ಕತ್ತಲ ಬೆಳಕಿನಾಟ ಸೊಗಸಾಗಿದೆ.
ಚಿತ್ರ: ಸಿಲಿಕಾನ್ ಸಿಟಿನಿರ್ಮಾಣ: ಎಂ.ರವಿ, ಮಂಜುಳ ಸೋಮಶೇಖರ್
ನಿರ್ದೇಶನ: ಮುರಳಿ ಗುರಪ್ಪ
ತಾರಾಗಣ: ಶ್ರೀನಗರ ಕಿಟ್ಟಿ, ಸೂರಜ್ ಗೌಡ, ಕಾವ್ಯಾಶೆಟ್ಟಿ, ಯುಕ್ತಾ, ತುಳಸಿ ಶಿವಮಣಿ, ಅಶೋಕ್, ಚಿಕ್ಕಣ್ಣ ಇತರರು. * ವಿಜಯ್ ಭರಮಸಾಗರ