Advertisement

ಹಿಂದಿ ಹೇರಿಕೆ ಖಂಡಿಸಿ “ಕರಾಳ ದಿನ’

01:18 AM Sep 15, 2019 | Lakshmi GovindaRaju |

ಬೆಂಗಳೂರು: ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ವಿರೋಧಿಸಿ ಕರವೇ ವತಿಯಿಂದ ನಗರದ ಆನಂದ್‌ರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ಶನಿವಾರ “ಕರಾಳ ದಿನಾಚರಣೆ’ ಮೂಲಕ ಪ್ರತಿಭಟನೆ ನಡೆಸಿತು. ಕರವೇ ನೂರಾರು ಕಾರ್ಯಕರ್ತರು ಭಾಗವಹಿಸಿ, “ಹಿಂದಿ ಹೇರಿಕೆ ನಿಲ್ಲಲಿ, ಸಮಾನತೆ ಭಾಷಾ ನೀತಿ ಜಾರಿಗೆ ಬರಲಿ’, “ಹಿಂದಿ ವೈಭವೀಕರಣ ಕೊನೆಗೊಳ್ಳಲಿ’, ಹಿಂದಿ ದಿನ ಆಚರಣೆ ರದ್ದಾಗಲಿ ಎಂದು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

Advertisement

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಅಧೀನದ ಬ್ಯಾಂಕ್‌, ರೈಲ್ವೆ, ಅಂಚೆ ಇಲಾಖೆ ಸೇರಿ ಇತರೆ ಇಲಾಖೆಗಳಲ್ಲಿ ಸೆ.14ರಂದು ಹಿಂದಿ ದಿನ ಆಚರಿಸುತ್ತದೆ. ಈ ಮೂಲಕ ದೇಶದ ಎಲ್ಲಾ ಭಾಷೆ ಜನರ ತೆರಿಗೆ ಹಣದಲ್ಲಿ ಹಿಂದಿ ಭಾಷೆ ಬೆಳವಣಿಗೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಾದೇಶಿಕ ಭಾಷೆ ಹಾಗೂ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹಿಂದಿ ದಿನ ರದ್ದು ಮಾಡಬೇಕು. ಸಂವಿಧಾನದ 343 ರಿಂದ 351 ವಿಧಿ ತಿದ್ದುಪಡಿ ಮಾಡಿ ಸಂವಿಧಾನದ 8ನೇ ಪರಿಚ್ಛೇದದಲ್ಲಿನ ಕನ್ನಡ ಸೇರಿ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕೆಂದರು.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಭಾರತ ಭಾಷಾ ವೈವಿಧ್ಯತೆಯಿಂದ ಕೂಡಿದ ರಾಜ್ಯಗಳ ಒಕ್ಕೂಟವಾಗಿದೆ. ಸಂವಿಧಾನ ಅಥವಾ ಯಾವುದೇ ಕಾನೂನು ಹಿಂದಿ ಭಾಷೆ ರಾಷ್ಟ್ರ ಭಾಷೆ ಎಂದು ಹೇಳಿಲ್ಲ. ಈ ಹಿಂದೆ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್‌ 13 ಪ್ರಾದೇಶಿಕ ಭಾಷೆಯಲ್ಲಿ ಬ್ಯಾಂಕ್‌ ಪರೀಕ್ಷೆ ಬರೆಯಬಹುದೆಂದು ಹೇಳಿದ್ದರು. ಆದರೆ, ಇಂದು ಇದಕ್ಕೆ ವಿರುದ್ಧದ ಮಾತುಗಳನ್ನಾಡುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಂದು ಭಾಷೆ ಒಂದು ರಾಷ್ಟ್ರ ಮಾದರಿಯಲ್ಲಿ ಹಿಂದಿ ಭಾಷೆಯನ್ನು ಎಲ್ಲರೂ ಒಪ್ಪಬೇಕು ಎಂದು ಹೇಳುವ ಮೂಲಕ ಒತ್ತಾಯವಾಗಿ ಹಿಂದಿ ಹೇರಿಕೆ ಮಾಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next