Advertisement

ಆರೋಗ್ಯದ ಬಗ್ಗೆ ಕಾಳಜಿ ಇರಲಿ; ಕುತ್ತಿಗೆ ಸುತ್ತ ಕಪ್ಪಾಗಿದ್ದರೆ, ಈ ಟಿಪ್ಸ್ ಅನುಸರಿಸಿ

04:21 PM Dec 27, 2022 | ಕಾವ್ಯಶ್ರೀ |

ಕುತ್ತಿಗೆ ಸುತ್ತ ಕಪ್ಪು ಕಲೆಗಳಂಥ ಬಣ್ಣ ಬೇಸಿಗೆಯಲ್ಲಿ ಸಹಜ. ಮಹಿಳೆಯರು ಮುಖದ ಸೌಂದರ್ಯಕ್ಕೆ ಮಹತ್ವ ನೀಡುವಷ್ಟು ಮುಖದ ಜೊತೆಗಿರುವ ಕುತ್ತಿಗೆಗೆ ನೀಡುವುದಿಲ್ಲ. ಬೇಸಿಗೆಯಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡುವುದರ ಜೊತೆಗೆ ತ್ವಚೆಯ ಭಾಗದಲ್ಲೂ ಸಮಸ್ಯೆಗಳು ಕಂಡು ಬರುತ್ತದೆ. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ನಮ್ಮ ಕುತ್ತಿಗೆ ಭಾಗ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.  ಬಿಸಿಲಿಗೆ ಹೆಚ್ಚಾಗಿ ಓಡಾಡುತ್ತಿರುವುದರಿಂದ ಈ ರೀತಿಯ ಸಮಸ್ಯೆ ಬರುತ್ತದೆ ಎನ್ನಬಹುದು.

Advertisement

ಬೇಸಿಗೆಯಲ್ಲಿ ಮುಖದ ಅಂದ ಹೆಚ್ಚು ಮಾಡಿಕೊಳ್ಳಲು ವಿವಿಧ ಬಗೆಯ ಆರೈಕೆ, ಕಾಳಜಿ ವಹಿಸುತ್ತೇವೆ. ಮುಖಕ್ಕೆ ಫೇಶಿಯಲ್, ಸ್ಕ್ರಬ್ ಇತ್ಯಾದಿಗಳನ್ನು ವಾರಕೊಮ್ಮೆಯಾದರು ಮಾಡಿಕೊಳ್ಳುತ್ತಾರೆ. ಆದರೆ ಕುತ್ತಿಗೆ ಭಾಗವನ್ನು ಮಾತ್ರ ನಿರ್ಲಕ್ಷಿಸುತ್ತೇವೆ. ಇದರಿಂದಾಗಿ ಭುಜದ ಮೇಲ್ಭಾಗದಲ್ಲಿ ಚರ್ಮ ಹೊಳಪು ಕಳೆದುಕೊಳ್ಳುತ್ತದೆ.

ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು, ಯಾವುದೇ ಕಲೆಗಳಿಲ್ಲದ ಹೊಳೆಯುವ ತ್ವಚೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆಯ ಬಳಿ ಕಂಡು ಬರುವ ಕಲೆ, ಆಕರ್ಷಣೀಯವಾಗಿಲ್ಲದೆ ಇರಬಹುದು. ಕುತ್ತಿಗೆಯ ಕಪ್ಪಾಗುವಿಕೆ ಹಲವಾರು ಕಾರಣಗಳಿಂದ ಉಂಟಾಗಿರಬಹುದು. ಕೆಲವೊಂದು ಮನೆಯಲ್ಲೇ ಸಿಗುವ ವಸ್ತುಗಳಿಂದ ಈ ಟಿಪ್ಸ್ ಅನುಸರಿಸಿ ಕತ್ತು ಭಾಗದಲ್ಲಿ ಕಪ್ಪಾಗುವುದನ್ನು ತಡೆಯಿರಿ.

ಅಲೋವೆರಾ ಲೋಳೆ

ಇಂದಿನ ಸೌಂದರ್ಯವರ್ಧಕ ಗಳಲ್ಲಿ ಮೊದಲ ಸ್ಥಾನದಲ್ಲಿರುವಂತಹ ಗಿಡ ಅಲೋವೆರಾ. ಇದರ ಲೋಳೆ ತ್ವಚೆಗೆ ತುಂಬಾ ಲಾಭಕಾರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲೋವೆರಾ ಸಸ್ಯವು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ, ಇದು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಎಲೆಯನ್ನು ಕತ್ತರಿಸಿಕೊಂಡು ಅದರ ಲೋಳೆ ತೆಗೆದು ಕುತ್ತಿಗೆಗೆ ಹಚ್ಚಿಕೊಳ್ಳಿ ಮತ್ತು ಹಾಗೆ ಕೆಲವು ನಿಮಿಷ ಕಾಲ ಸ್ಕ್ರಬ್ ಮಾಡಿ. ಅರ್ಧ ಗಂಟೆ ಹಾಗೆ ಬಿಟ್ಟು ಬಳಿಕ ನೀರು ಹಾಕಿ ತೊಳೆಯಿರಿ.

Advertisement

ಮೊಸರು:

ಹಾಲು, ಮೊಸರು ಹಾಗೂ ಹಾಲಿನ ಉಪ ಉತ್ಪನ್ನಗಳಲ್ಲಿ ಹಲವಾರು ರೀತಿಯ ವಿಟಮಿನ್‌ಗಳು, ಖನಿಜಾಂಶಗಳಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಡೆಡ್ ಸ್ಕಿನ್‌ ಹಾಗೂ ಕಳೆಗುಂದಿದ ತ್ವಚೆಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎರಡು ಚಮಚ ಮೊಸರು ತೆಗೆದುಕೊಂಡು ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಇದ್ದು ಬಳಿಕ ನೀರಿನಿಂದ ತೊಳೆಯಿರಿ.

ಬಾದಾಮಿ ಎಣ್ಣೆ

ಬಾದಾಮಿ ಆರೋಗ್ಯಕ್ಕೆ ತುಂಬಾ ಲಾಭಕಾರಿ ಮಾತ್ರವಲ್ಲದೆ ಇದರಲ್ಲಿ ಚರ್ಮದ ಆರೋಗ್ಯ ವೃದ್ಧಿಸುವ ಗುಣಗಳು ಇವೆ. ಬಾದಾಮಿ ಎಣ್ಣೆ ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಇರುವಂತಹ ಕೆಲವು ವಿಟಮಿನ್ ಗಳು ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಬಣ್ಣ ಕುಂದಿರುವುದನ್ನು ನಿವಾರಣೆ ಮಾಡುತ್ತದೆ.

ಮೊದಲು ಕುತ್ತಿಗೆಯ ಭಾಗವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ಒಣಗಿದ ಬಳಿಕ ಸ್ವಲ್ಪ ಬಾದಾಮಿ ಎಣ್ಣೆಯನ್ನುಅಂಗೈಯಲ್ಲಿ ಹಾಕಿಕೊಂಡು, ಕುತ್ತಿಗೆ ಭಾಗಕ್ಕೆ ಚೆನ್ನಾಗಿ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ನಂತರ ಸುಮಾರು ಹತ್ತು ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆದುಕೊಳ್ಳಿ.

ಬಾದಾಮಿಯ ಪೇಸ್ಟ್ ಮಾಡಿ ಮತ್ತು ಅದನ್ನು ಒಂದು ಚಮಚ ಹಾಲಿನ ಹುಡಿ ಮತ್ತು ಜೇನುತುಪ್ಪದ ಜತೆಗೆ ಬೆರೆಸಿ. ಈ ಪೇಸ್ಟ್ ಕುತ್ತಿಗೆ ಎರಡೂ ಬದಿಗೆ ಹಚ್ಚಿಕೊಳ್ಳಿ. ಒಂದು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ನಾಲ್ಕು ಸಲ ಹೀಗೆ ಮಾಡಿ. ಕುತ್ತಿಗೆ ಭಾಗದ ಚರ್ಮ ಹೊಳಪಾಗುತ್ತದೆ.

ಲಿಂಬೆ ರಸ:

ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಈ ಗುಣದಿಂದಾಗಿ ಚರ್ಮದ ಕಪ್ಪು ಭಾಗವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿ ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಒಂದು ತಿಂಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ. ಫಲಿತಾಂಶ ಗಮನಿಸಿ.

Advertisement

Udayavani is now on Telegram. Click here to join our channel and stay updated with the latest news.

Next