ಸಂಗೀತ ನಿರ್ದೇಶಕ ವಿ.ಮನೋಹರ್ ನಿರ್ದೇಶಿಸಿರುವ “ದರ್ಬಾರ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಜೂನ್ 09ರಂದು ತೆರೆಕಾಣುತ್ತಿದ್ದು, ಸಿನಿಮಾ ಮೇಲೆ ಚಿತ್ರತಂಡ ನಿರೀಕ್ಷೆ ಇಟ್ಟಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿ.ಮನೋಹರ್, “ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಸತೀಶ್ ಅವರೇ ಕಾರಣ. ನಾನು “ಓ ಮಲ್ಲಿಗೆ’ ಚಿತ್ರ ನಿರ್ದೇಶನ ಮಾಡಿದಾಗ ಎಲ್ಲರೂ ನನ್ನನ್ನು ಹೀಯಾಳಿಸಿದ್ದರು. ನನ್ನಮೇಲೆ ಸಂಶಯಪಟ್ಟವರಿಗೆ ಈ ಚಿತ್ರವೇ ಉತ್ತರ. ನಾವು ಎಲ್ಲೇ ಹೋದರೂ ಇದು ಪರಿಶುದ್ದ ಹಾಸ್ಯಚಿತ್ರನಾ ಎಂದೇ ಕೇಳುತ್ತಾರೆ. ಈಗ ಹಾಸ್ಯ ಅಂದ್ರೆ ಡಬಲ್ ಮೀನಿಂಗ್ ಅನ್ನುವಂತಾಗಿದೆ. ಮೊದಲ ಪ್ರದರ್ಶನಕ್ಕೆ ಬಂದವರು ಮೆಚ್ಚುವ ಎಲ್ಲ ಅಂಶಗಳು ಚಿತ್ರದಲ್ಲಿವೆ. ಹೀರೋ ಕೆಟ್ಟದ್ದನ್ನು, ಸೋಮಾರಿಗಳನ್ನು ಕಂಡರೆ ಸಹಿಸಲ್ಲ, ಉದಾಹರಣೆಗೆ ಜೂಜಾಡುವುದು, ಅರಳಿಕಟ್ಟೆಯಲ್ಲಿ ಕೂತು ಹರಟೆ ಹೊಡೆಯುವುದು, ಈತನ ಈ ಗುಣ ಕೆಲವರಿಗೆ ಇಷ್ಟ ಆಗಲ್ಲ, ಇವನನ್ನು ಪಂಚಾಯ್ತಿ ಎಲೆಕ್ಷನ್ ನಲ್ಲಿ ಸೋಲಿಸಬೇಕು ಎಂದು ಪ್ರಯತ್ನಿಸುತ್ತಾರೆ. ಗಿಚ್ಚಿ ಗಿಲಿಗಿಲಿ ಕಾರ್ತೀಕ್ ಬೇರೆ ಥರದ ರೋಲ್ ಮಾಡಿದ್ದಾರೆ. ಸಂತು ಹೀರೋ ಜೊತೆನೇ ಇದ್ದು ಆಗಾಗ ಕಾಲೆಳೆಯುವ ಪಾತ್ರ ಮಾಡಿದ್ದಾರೆ. ಸಾಧು ಕೋಕಿಲ, ನವೀನ್ ಪಡೀಲ್ ಜೋಡಿ ನೋಡುಗರನ್ನು ರಂಜಿಸುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು.
ನಂತರ ಚಿತ್ರದ ನಾಯಕ, ನಿರ್ಮಾಪಕ, ಸತೀಶ್ ಮಾತನಾಡುತ್ತಾ, “ಆರಂಭದಲ್ಲಿ ಏನೋ ಒಂದು ಬಜೆಟ್ ಅಂದುಕೊಂಡಿದ್ದೆವು. ಕ್ವಾಲಿಟಿ ನೋಡುತ್ತ ಹೋದಂತೆ ಜಾಸ್ತೀನೇ ಅಯ್ತು. ಮೊನ್ನೆ ಚಿತ್ರದ ಪ್ರೀವ್ಯೂ ನೋಡಿದೆವು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆಂಬ ನಂಬಿಕೆಯಿದೆ. ಒಬ್ಬರು ಬಂದು ಸಿನಿಮಾ ನೋಡಿದರೆ ಖಂಡಿತ 10 ಜನಕ್ಕೆ ಹೇಳುತ್ತಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.
ನಾಯಕಿ ಜಾಹ್ನವಿ ಮಾತನಾಡಿ, “ಇದು ನನ್ನ ಮೊದಲ ಚಿತ್ರ. ತುಂಬಾ ಚೆನ್ನಾಗಿ ಬಂದಿದೆ. ಈ ಚಿತ್ರದಲ್ಲಿ ನಾನು ಸೈಕಾಲಜಿ ಸ್ಟೂಡೆಂಟ್. ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ. ನಂತರ ಆತನಿಗೆ ಸಪೋರ್ಟ್ ಮಾಡುತ್ತೇನೆ. ಒಂದು ಹಳ್ಳಿಯಲ್ಲಿ ನಾವೇ ಇರುವಂತೆ, ನಮ್ಮ ಸುತ್ತಲೂ ಘಟನೆಗಳು ನಡೆಯುತ್ತಿರುವಂತೆ ನಮಗನಿಸುತ್ತದೆ’ ಎಂದು ಹೇಳಿದರು.
ಸತೀಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಬಿ.ಎನ್. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಮೂರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಹಿರಿಯ ಕಲಾವಿದರಾದ ಎಂ.ಎನ್. ಲಕ್ಷ್ಮೀದೇವಿ, ಅಶೋಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಮೂರು ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.