ಸದ್ಯ ಎಲ್ಲೆಡೆ ರಾಜಕೀಯದ್ದೇ ಮಾತು ಎನ್ನುವಂತಾಗಿದೆ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಕೂಡಾ ಎಲೆಕ್ಷನ್, ರಾಜಕೀಯ ಕಥೆಗಳನ್ನೊಳಗೊಂಡ ಸಾಕಷ್ಟು ಚಿತ್ರಗಳು ಸಹ ತೆರೆ ಬರಲು ಸಿದ್ಧವಾಗಿದೆ. ಇದೀಗ ಆ ಸಾಲಿಗೆ “ದರ್ಬಾರ್’ ಚಿತ್ರ ಕೂಡಾ ಸೇರ್ಪಡೆಯಾಗಲಿದೆ. ಸಂಗೀತ ನಿರ್ದೇಶಕ ವಿ.ಮನೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ದರ್ಬಾರ್.
ಚಿತ್ರಕ್ಕೆ ಶಿಲ್ಪಾ ಬಿ.ಎನ್ ಬಂಡವಾಳ ಹೂಡಿದ್ದಾರೆ. ದರ್ಬಾರ್ ಚಿತ್ರ ಹಳ್ಳಿ ಪ್ರದೇಶದಲ್ಲಿನ ರಾಜಕೀಯ ಹಾಗೂ ಅಲ್ಲಿನ ಎಲೆಕ್ಷನ್, ರಾಜಕೀಯ ನಾಯಕರ ಮೇಲೆ ಬೆಳಕು ಚೆಲ್ಲುವ ಚಿತ್ರವಾಗಿದ್ದು, ಚಿತ್ರ ಮಂಡ್ಯ, ಮದ್ದೂರು, ಕೋಲಾರದಲ್ಲಿ ಚಿತ್ರೀಕರಣವಾಗಿದೆ. ವರ್ಷದಲ್ಲಿ ಪಂಚಾಯತಿ, ಕಾರ್ಪೊರೇಷನ್ ಅಂತಾ ಒಂದಾದರೂ ಚುನಾವಣೆ ನಡೆಯುತ್ತಲೇ ಇರುತ್ತದೆ. ಆದರೆ ಎಷ್ಟರ ಮಟ್ಟಿಗೆ ಜನ ಸರಿಯಾದ ಅಭ್ಯರ್ಥಿಯನ್ನು ಆರಿಸುತ್ತಾರೆ. ಗೆದ್ದ ರಾಜಕಾರಣಿಗಳು ಜನರನ್ನು ಹೇಗೆ ಯಾಮಾರಿಸುತ್ತಾರೆ. ಯಾವೆಲ್ಲಾ ಆಮಿಷ, ಮನೋಬಲ, ಭವನಾತ್ಮಕ ಸಂಗತಿಗಳಿಗೆ ಜನ ಮರಳಾಗುತ್ತಾರೆ ಎಂಬ ವಿಚಾರವನ್ನು ವಿಡಂಬನಾತ್ಮಕವಾಗಿ, ಹಾಸ್ಯದ ರೂಪದಲ್ಲಿ ತಿಳಿಸಲಾಗಿದೆ ಎಂಬುದು ಚಿತ್ರತಂಡದ ಮಾತು.
ನಾಯಕ ಸತೀಶ್ ಮಾತನಾಡಿ, “ದರ್ಬಾರ್ ಚಿತ್ರ ಕಥೆಗೆ ತುಂಬ ಸೂಕ್ತವಾದ ಹೆಸರು. ಅದಕ್ಕಾಗಿ ಅದನ್ನೇ ಶೀರ್ಷಿಕೆಯಾಗಿ ಇಡಲಾಗಿದೆ. ಚಿತ್ರದಲ್ಲಿ ನಾನು ಹಳ್ಳಿಯಲ್ಲಿ ದರ್ಬಾರ್ ನಡೆಸುವ ರೀತಿಯ, ಅಘೋಷಿತ ರಾಜ, ನೈತಿಕ ಪೊಲೀಸ್ ಗಿರಿ ನಡೆಸುವ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಳ್ಳಿಯ ಜನ ಅವನ ಉಪಟಳ ತಾಳದೆ ಚುನಾವಣೆಗೆ ನಿಲ್ಲಿಸುತ್ತಾರೆ. ನಂತರ ಏನೆಲ್ಲಾ ಕಷ್ಟ ಎದುರಾಗುತ್ತೆ ಎನ್ನುವುದೇ ಚಿತ್ರದ ಸಾರಾಂಶ. ಚಿತ್ರ ಮಂಡ್ಯ ಭಾಗದಲ್ಲಿ ನಡೆಯುವ ಕಥೆಯಾದ್ದರಿಂದ ಅಲ್ಲೇ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ.
ಚಿತ್ರದಲ್ಲಿ ಹೊಸ ಪ್ರತಿಭೆ ಜಾನ್ವಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಕಾಮಿಡಿ ಕಿಲಾಡಿ ಸಂತು, ಕಾರ್ತಿಕ್, ಲಕ್ಷ್ಮೀ ದೇವಮ್ಮ, ಸಾಧು ಕೋಕಿಲ, ನವೀನ್, ಹಿರಿಯ ನಟ ಅಶೋಕ್, ತ್ರಿವೇಣಿ, ನೀನಾಸಂ, ರಂಗಾಯಣ, ರಂಗಭೂಮಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ.ಮನೋಹರ್ ಸಂಗೀತ, ಸಾಹಿತ್ಯ ಚಿತ್ರಕ್ಕಿದೆ.
ನಾಯಕ ನಟ ಸತೀಶ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಜೊತೆಗೆ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಸದ್ಯ ಚಿತ್ರದ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ಸೆನ್ಸಾರ್ ಪ್ರಕಿಯೆಯಲ್ಲಿರುವ ಚಿತ್ರತಂಡ, ಮುಂದಿನ ತಿಂಗಳಿನಲ್ಲಿ ತೆರೆಗೆ ಬರುವ ಯೋಜನೆ ಹೊಂದಿದೆ.