Advertisement

ಡಾ.ರಾಜ್‌ ವ್ಯಕ್ತಿತ್ವ ಸಾಗರದಂತೆ

02:56 PM Apr 25, 2019 | Lakshmi GovindaRaju |

ಬೆಂಗಳೂರು: ಕನ್ನಡ ಕಲೆ ಮತ್ತು ಸಾಹಿತ್ಯ ಲೋಕದಲ್ಲಿ ಡಾ.ರಾಜಕುಮಾರ್‌ ಮತ್ತು ಕುವೆಂಪು ಶಾಶ್ವತ ರಾಯಭಾರಿಗಳು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಕೆ.ಎಸ್‌.ನಿಸಾರ್‌ ಅಹಮದ್‌ ಅಭಿಪ್ರಾಯಪಟ್ಟರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಡಾ.ರಾಜಕುಮಾರ್‌ 91ನೇ ಜನ್ಮ ದಿನಾಚರಣೆಯಲ್ಲಿ ಅತಿಥಿಯಾಗಿ ಮಾತನಾಡಿದರು.

ಡಾ.ರಾಜಕುಮಾರ್‌ ಅವರ ವ್ಯಕ್ತಿತ್ವ ಆಕಾಶ, ಸಾಗರದಂತೆ. ಅದನ್ನು ಎಲ್ಲಿಂದ ಶುರುಮಾಡಿ, ಎಲ್ಲಿ ಮುಗಿಸಬೇಕು ಎಂಬುದು ಗೊತ್ತಾಗುವುದಿಲ್ಲ. ಅವರ ಜೊತೆ ಮಾತುಕತೆಗೆ ಕುಳಿತರೆ ಸಾಕು ಸುಮಾರು ಮೂರರಿಂದ ನಾಲ್ಕು ಗಂಟೆಯವರೆಗೆ ಸುದೀರ್ಘ‌ ಮಾತುಕತೆ ನಡೆಯುತ್ತಿತ್ತು.

ಹೊರ ರಾಜ್ಯದಲ್ಲಿ ರಾಜಕುಮಾರ್‌ ಅವರ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವು ಭಾಷಾಂಧಕಾರರಿಂದ ಅವರ ಮೇಲೆ ಹಲ್ಲೆಯಾಗಿತ್ತು. ಅದನ್ನು ಖಂಡಿಸುವ ಸಲುವಾಗಿ ನಾವೆಲ್ಲ ಒಂದಾಗಿ ಧ್ವನಿಗೂಡಿಸಿದರೂ, ರಾಜಕುಮಾರ್‌ ಮಾತ್ರ, “ಯಾರೋ ಕೆಲವರಿಂದ ಆದ ಕೃತ್ಯಕ್ಕೆ ಇಡೀ ಭಾಷಾ ಸಮುದಾಯವನ್ನು ದ್ವೇಷಿಸುವುದು ತಪ್ಪು’ ಎಂದು ನಮ್ಮನ್ನು ತಡೆದಿದ್ದರು.

ಸಿನಿಮಾ ಮಾತ್ರವಲ್ಲ ಕನ್ನಡ ನಾಡು ನುಡಿ ಇರುವವರೆಗೂ ರಾಜಕುಮಾರ್‌ ಅವರ ಹೆಸರು ಚಿರಸ್ತಾಯಿ ಆಗಿರುತ್ತದೆ ಎಂದು ಹೇಳಿದ ಕೆ.ಎಸ್‌.ನಿಸಾರ್‌ ಅಹಮದ್‌, ತಮ್ಮ ಹಾಗು ರಾಜಕುಮಾರ್‌ ನಡುವಿನ ಒಡನಾಟವನ್ನು ಈ ಸಂದರ್ಭದಲ್ಲಿ ತೆರೆದಿಟ್ಟರು.

Advertisement

ರಾಜಕುಮಾರ್‌ ಜನ್ಮ ದಿನಾಚರಣೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ, ರಾಜ್‌ ಪುತ್ರರಾದ ಶಿವರಾಜಕುಮಾರ್‌, ರಾಘವೇಂದ್ರರಾಜಕುಮಾರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ರಿಜಿಸ್ಟ್ರಾರ್‌ ದಿನೇಶ್‌ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಮೋಹನ್‌ ಮತ್ತು ತಂಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿತು. ಶಿವರಾಜಕುಮಾರ್‌ ಅವರು ರಾಜಕುಮಾರ್‌ ಚಿತ್ರಗಳ ಎರಡು ಗೀತೆಗಳನ್ನು ಹಾಡಿ ರಂಜಿಸಿದರು. ಯೋಗರಾಜ್‌ಭಟ್‌ ಕಾರ್ಯಕ್ರಮ ಸಂಯೋಜಿಸಿದ್ದರು. ಸಾಹಿತಿ ಬರಗೂರು ರಾಮಚಂದ್ರಪ್ಪ, ನಾಗೇಂದ್ರಪ್ರಸಾದ್‌ ಸೇರಿದಂತೆ ಡಾ.ರಾಜಕುಮಾರ್‌ ಕುಟುಂಬ ವರ್ಗ ಹಾಗು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next